ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮೂರೇ ವರ್ಷಗಳಲ್ಲಿ ಪೂರ್ಣ?

ಉಪನಗರ ರೈಲು ಯೋಜನೆ: ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗ
Last Updated 30 ಅಕ್ಟೋಬರ್ 2020, 19:49 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರೈಲ್ವೆ ಸಚಿವಾಲಯ 6 ವರ್ಷಗಳ ಕಾಲಾವಕಾಶ ನೀಡಿದೆಯಾದರೂ, ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಸಂಪರ್ಕಿಸುವ ನಗರ ರೈಲು ನಿಲ್ದಾಣ– ದೇವನಹಳ್ಳಿ ಮಾರ್ಗವನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸುವಂತೆ ಷರತ್ತು ವಿಧಿಸಿದೆ.

ಈ ಮಾರ್ಗವನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತದೆಯೋ ಇಲ್ಲವೋ ಎಂಬ ಗೊಂದಲ ನಿವಾರಣೆ ಆಗಿದೆ. ಉಪನಗರ ರೈಲು ಯೋಜನೆಯಡಿ ನಾಲ್ಕು ಕಾರಿಡಾರ್‌ಗಳನ್ನು ನಿರ್ಮಿಸ ಲಾಗುತ್ತಿದೆ. ಇವುಗಳಲ್ಲಿ ವಿಮಾನನಿಲ್ದಾಣವನ್ನು ಸಂಪರ್ಕಿಸುವ ಮಾರ್ಗದ ಕಾಮಗಾರಿ ಮೊದಲು ಪೂರ್ಣಗೊಳಿಸಬೇಕು ಎಂಬುದು ರೈಲ್ವೆ ಹೋರಾಟಗಾರರ ಒತ್ತಾಸೆಯಾಗಿತ್ತು.

ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಗೊಳಿಸಲು ಸಿದ್ಧತೆ ಆರಂಭಿಸಿತ್ತು.

ಉಪನಗರ ರೈಲು ಹಾಗೂ ‘ನಮ್ಮ ಮೆಟ್ರೊ’ಗಳೆರಡೂ ಕೇಂದ್ರ ಸರ್ಕಾರದ ಮಹಾನಗರ ಸಾರಿಗೆ ಯೋಜನೆಗಳೇ (ಎಂಟಿಪಿ) ಆಗಿವೆ. ಈ ಎರಡು ಯೋಜನೆಗಳ ಉದ್ದೇಶವೂ ವಿಮಾನ ನಿಲ್ದಾಣಕ್ಕೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದೇ ಆಗಿದೆ. ಏಕಕಾಲಕ್ಕೆ ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಒಪ್ಪುತ್ತದೆಯೋ ಎಂಬ ಸಂದೇಹ ರೈಲ್ವೆ ಹೋರಾಟಗಾರರನ್ನು ಕಾಡುತ್ತಿತ್ತು. ನಗರ ರೈಲು ನಿಲ್ದಾಣ– ದೇವನಹಳ್ಳಿ ಈ ಮಾರ್ಗದ ಕಾಮಗಾರಿಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗುತ್ತದೋ ಇಲ್ಲವೋ ಎಂಬ ಗೊಂದಲ ಎದುರಾಗಿತ್ತು.

‘ನಾಲ್ಕು ಕಾರಿಡಾರ್‌ಗಳಲ್ಲಿ ವಿಮಾನನಿಲ್ದಾಣ ಸಂಪರ್ಕ ಕಾರಿಡಾರ್‌ನ ತುರ್ತು ಅಗತ್ಯವಿದೆ. ದಟ್ಟಣೆಯ ಅವಧಿಯಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಿಕರು ಈ ಮಾರ್ಗವನ್ನು ಬಳಸಲಿದ್ದಾರೆ. ಇನ್ನೊಂದೆಡೆ, ವಿಮಾನನಿಲ್ದಾಣದ ಎರಡನೇ ಟರ್ಮಿನಲ್‌ ಕೂಡ ಒಂದೆರಡು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ. ಆಗ ವಿಮಾನ ನಿಲ್ದಾಣವನ್ನು ಬಳಸುವ ವವರ ಸಂಖ್ಯೆ 1.25 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. 2022ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಪರ್ಯಾಯ ಸಾರಿಗೆಯ ಅವಶ್ಯಕತೆ ಇನ್ನಷ್ಟು ಹೆಚ್ಚಲಿದೆ’ ಎಂದು ವಿಶ್ಲೇಷಿಸುತ್ತಾರೆ ಉಪನಗರ ರೈಲು ಯೋಜನೆಯ ಹೋರಾಟದಲ್ಲಿ ಸಕ್ರಿಯರಾಗಿದ್ದ ‘ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌’ ಸಂಘಟನೆಯ ಸಂಚಾಲಕ ರಾಜ್‌ಕುಮಾರ್‌ ದುಗರ್‌.

‘ವಿಮಾನ ನಿಲ್ದಾಣ ಸಂಪರ್ಕಕ್ಕೆ ನಮ್ಮ ಮೆಟ್ರೊ ಜಾಲ ವಿಸ್ತರಿಸಲು 60 ಕಿ.ಮೀ ಉದ್ದದ ಹೊಸ ಮಾರ್ಗ ನಿರ್ಮಿಸಬೇಕು. ಸಿಲ್ಕ್‌ಬೋರ್ಡ್‌, ಕೆ.ಆರ್‌.ಪುರ– ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಪ್ರಸ್ತಾಪ ಬಿಎಂಆರ್‌ಸಿಎಲ್‌ ಮುಂದಿದೆಯಾದರೂ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅನುಮೋದನೆ ಸಿಕ್ಕರೂ ಈ ಕಾಮಗಾರಿ ಪೂರ್ಣಗೊಳಿಸಿ, ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸಲು ಏನಿಲ್ಲವೆಂದರೂ ಆರು ವರ್ಷಗಳು ಬೇಕು’ ಎಂದು ಅವರು ವಿವರಿಸಿದರು.

ಉಳಿದ ಕಾರಿಡಾರ್‌ಗಳಿಗೆ ಹೋಲಿಸಿದರೆ ದೇವನಹಳ್ಳಿ ಕಾರಿಡಾರ್‌ಗೆ ಬೇಕಾಗುವ ಖಾಸಗಿ ಜಮೀನುಗಳ ಪ್ರಮಾಣ ತೀರಾ ಕಡಿಮೆ. ಉಳಿದ ಕಾರಿಡಾರ್‌ಗಳಂತೆ ಈ ಮಾರ್ಗಕ್ಕೆ ಭೂ ಸ್ವಾಧೀನ ಸಮಸ್ಯೆ ಅಷ್ಟಾಗಿ ಕಾಡಲಿ ಕ್ಕಿಲ್ಲ. ಈ ಮಾರ್ಗದಲ್ಲಿ ಯಲಹಂಕ ಬಳಿ ಸ್ವಲ್ಪದೂರ ಎತ್ತರಿಸಿದ ಕಾರಿಡಾರ್‌ ಬರಲಿದೆ. ಉಳಿದೆಲ್ಲ ಕಡೆ ನೆಲಮಟ್ಟ ದಲ್ಲೇ ಹಳಿಗಳು ನಿರ್ಮಾಣವಾಗಲಿವೆ.

ಇಚ್ಛಾಶಕ್ತಿ ಪ್ರದರ್ಶನ ಅಗತ್ಯ: ‘ಉಪನಗರ ರೈಲು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ–ರೈಡ್‌) ಗಡುವಿನೊಳಗೆ ದೇವನಹಳ್ಳಿ ಸಂಪರ್ಕಿಸುವ ಕಾರಿಡಾರ್‌ ಪೂರ್ಣಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸ ಬೇಕು. 2023ರ ಒಳಗೆ ಈ ಮಾರ್ಗ ಸಿದ್ಧವಾದರೆ ನಗರವನ್ನು ಕಾಡುವ ಸಂಚಾರ ದಟ್ಟಣೆ ಸಮಸ್ಯೆ ಭಾಗಶಃ ಬಗೆ ಹರಿದಂತೆ’ ಎನ್ನುತ್ತಾರೆ ದುಗರ್‌.

ಬಾಕ್ಸ್

‘ಏರೋಸ್ಪೇಸ್‌ ಪಾರ್ಕ್‌ಗೂ ಅನುಕೂಲ’

‘ದೇವನಹಳ್ಳಿ ಬಳಿ ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣವಾಗುತ್ತಿದ್ದು, ಇಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಸ್ಥಾಪನೆಯಾಗಲಿವೆ. ಇಲ್ಲಿನ ನಿರ್ಮಾಣ ಚಟುವಟಿಕ ವೇಳೆ ಹಾಗೂ ಕಂಪನಿಗಳು ಸ್ಥಾಪನೆಯಾದ ಬಳಿಕ ವಿಮಾನ ನಿಲ್ದಾಣ ಸಂಪರ್ಕ ರಸ್ತೆ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ತಡೆಯಲು ಉಪನಗರ ರೈಲು ಮಾರ್ಗ ನೆರವಿಗೆ ಬರಲಿದೆ’ ಎನ್ನುತ್ತಾರೆ ಈ ಯೋಜನೆಯ ಹೋರಾಟದಲ್ಲಿ ಸಕ್ರಿಯರಾಗಿರುವ ‘ಪ್ರಜಾ ರಾಗ್‌’ ಸಂಘಟನೆಯ ಸಂಜೀವ ದ್ಯಾಮಣ್ಣನವರ್‌.

‘ಉಪನಗರ ರೈಲಿನಲ್ಲಿ ಹವಾ ನಿಯಂತ್ರಿತ ಬೋಗಿಗಳನ್ನು ಮಾತ್ರ ಅಳವಡಿಸುವ ಚಿಂತನೆ ಇದೆ. ಇದು ಒಳ್ಳೆಯದಲ್ಲ. ರೈಲಿನಲ್ಲಿ ಹವಾ ನಿಯಂತ್ರಿತ ಬೋಗಿಗಳ ಜೊತೆ ಸಾಮಾನ್ಯ ಬೋಗಿಗಳೂ ಹಾಗೂ ಲಗೇಜ್‌ ವ್ಯಾಗನ್‌ಗಳೂ ಇರಬೇಕು. ಇದರಿಂದ ಕೋರಿಯರ್‌ ಸೇವೆ, ವಿಮಾನದ ಮೂಲಕ ಸರಕು ಸಾಗಣೆಗೆ ಹಾಗೂ ದೇವನಹಳ್ಳಿ ಪ್ರದೇಶದ ರೈತರಿಗೆ ಅನುಕೂಲವಾಗ ಲಿದೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT