ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತೂರು: ಎತ್ತಂಗಡಿ ಭೀತಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು

Last Updated 30 ಜೂನ್ 2022, 21:12 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಮನೆಗಳಿಂದ ಕಸ ಸಂಗ್ರಹಿಸುವ, ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಚ್ಛತೆ ಕೆಲಸ ಮಾಡಲು ನಗರದಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳದ ಸಾವಿರಾರು ವಲಸೆ ಕಾರ್ಮಿಕರು ಈಗ ಎತ್ತಂಗಡಿ ಭೀತಿಯಲ್ಲಿದ್ದಾರೆ.

ವರ್ತೂರು ಬಳಿಯ ತೂಬರಹಳ್ಳಿ ಗ್ರಾಮದ ಬಳಗೆರೆ ರಸ್ತೆಯಲ್ಲಿ ಅಲ್ಲಲ್ಲಿ ಖಾಸಗಿ ಜಮೀನು ಬಾಡಿಗೆಗೆ ಪಡೆದು ನೂರಾರು ಕುಟುಂಬಗಳು ಶೆಡ್‌ ನಿರ್ಮಿಸಿಕೊಂಡಿವೆ. ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಜನ ವಾಸವಿದ್ದಾರೆ. ಕೆಲವರು 15 ವರ್ಷಗಳಿಂದ ವಾಸವಿದ್ದರೆ, ಇತ್ತೀಚೆಗೆ ಬಂದವರೂ ಅವರೊಟ್ಟಿಗೆ ಸೇರಿಕೊಂಡಿದ್ದಾರೆ.

ಇವರಲ್ಲಿ ಶೇ 50ರಷ್ಟು ಪುರುಷರು ಬಿಬಿಎಂಪಿ ಕಸ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ಬಳಿ ಕೆಲಸಕ್ಕೆ ಸೇರಿದ್ದಾರೆ. ಮನೆ–ಮನೆಗಳಿಂದ ಕಸ ಸಂಗ್ರಹಿಸುವುದು, ಬೀದಿ ಬದಿಯಲ್ಲಿ ಬಿದ್ದಿರುವ ಕಸ ಹೆಕ್ಕಿ ಸಂಸ್ಕರಿಸುವುದು ಇವರ ಕೆಲಸ. ಉಳಿದವರು ಸುತ್ತಮುತ್ತ ನಡೆಯುವ ಸರ್ಕಾರಿ ಕಾಮಗಾರಿ, ಖಾಸಗಿ ಕಟ್ಟಡಗಳ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಹಿಳೆಯರು ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ ಮಾಡುತ್ತಿದ್ದಾರೆ.

ಬಿಬಿಎಂಪಿ ಎಂಜಿನಿಯರ್‌ ಎಂ.ಎಸ್.ಮಮತಾ ಅವರು ಪೊಲೀಸ್ ಠಾಣೆಗೆ ನೀಡಿರುವ ದೂರು ಇವರ ನೆಮ್ಮದಿ ಕಸಿದುಕೊಂಡಿದೆ.

‘ಲೋಕೇಶ್‌ರೆಡ್ಡಿ ಎಂಬುವರಿಗೆ ಸೇರಿದ ಜಾಗದಲ್ಲಿ ವಾಸವಿರುವ ಇವರು ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ತಿಳಿವಳಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಈ ಕುಟುಂಬಗಳವರು ವಾತಾವರಣವನ್ನೇ ಕಲುಷಿತಗೊಳಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುವ ರೀತಿಯ ಅಪಾಯಕಾರಿ ಸೋಂಕು ಹರಡುವ ತಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಅದರಿಂದ ಉತ್ಪತ್ತಿಯಾಗುವ ಕಲುಷಿತ ನೀರು ರಾಜಕಾಲುವೆ ಸೇರುತ್ತಿದೆ. ಲೋಕೇಶ್‌ರೆಡ್ಡಿ ಮತ್ತು ಕಾರ್ಮಿಕರ ಉಸ್ತುವಾರಿ ನೋಡಿಕೊಳ್ಳುವ ಸಂಜಯ್ ಸರ್ಕಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಠಾಣೆ ಪೊಲೀಸರು, ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಈ ಕುಟುಂಬಗಳನ್ನು ಎತ್ತಂಗಡಿ ಮಾಡಿಸಬೇಕು ಎಂದು ಜಮೀನಿನ ಮಾಲೀಕ ಲೋಕೇಶ್‌ರೆಡ್ಡಿ ಅವರಿಗೂ ತಾಕೀತು ಮಾಡಿದ್ದರು.

ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿರುವ ನಿವಾಸಿಗಳು, ‘ತ್ಯಾಜ್ಯ ವಿಲೇವಾರಿ ಕೆಲಸ ಮಾಡುವ ನಾವು, ಸುತ್ತಮುತ್ತಲ ಅಪಾರ್ಟ್‌ ಮೆಂಟ್‌ಗಳಲ್ಲೂ ಸ್ವಚ್ಛಗೊಳಿಸುವ ಕೆಲಸವನ್ನೇ ಮಾಡುತ್ತಿದ್ದೇವೆ. ನಮ್ಮನ್ನು ಎತ್ತಂಗಡಿ ಮಾಡಿಸಬಾರದು’ ಎಂದು ಮನವಿ ಮಾಡಿದ್ದಾರೆ.

‘ಅಲ್ಲಿ ಹಸಿವು–ಇಲ್ಲಿ ಭೀತಿ’

‘ಇಲ್ಲಿಂದ ನಮ್ಮನ್ನು ಎತ್ತಂಗಡಿ ಮಾಡಿಸಿದರೆ ಎಲ್ಲಿ ಹೋಗಬೇಕು ಎಂಬುದು ಗೊತ್ತಿಲ್ಲ. ಊರಿಗೆ ವಾಪಸ್‌ ಹೋದರೆ ನಮ್ಮ ಮತ್ತು ಮಕ್ಕಳ ಹೊಟ್ಟೆಗೆ ಗತಿಯಿಲ್ಲ. ಅಲ್ಲಿ ಹಸಿವಿನಿಂದ ಸಾಯುವ ಬದಲು ಇಲ್ಲೇ ಸಾಯುತ್ತೇವೆ’ ಎಂದು ಕಾರ್ಮಿಕರು ಕಣ್ಣೀರಿಟ್ಟರು.

‘ಈ ಜಮೀನಿನ ಮಾಲೀಕರಿಗೂ ಒತ್ತಡ ಹೇರಿ ನಮ್ಮನ್ನು ಖಾಲಿ ಮಾಡಿಸಲು ಪ್ರಯತ್ನಿಸಲಾಗಿದೆ. ನಮ್ಮನ್ನು ಹೊರ ಹಾಕಿದರೆ ಏನು ಮಾಡಬೇಕೋ ಗೊತ್ತಿಲ್ಲ. ಕುಡಿಯುವ ನೀರಿನ ಪೈಪ್‌ಪೈನ್ ಕಾಮಗಾರಿಗಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಪೈಪ್‌ಗಳನ್ನು ರಸ್ತೆ ಬದಿ ಹಾಕಿದ್ದಾರೆ. ಅದರೊಳಗೆ ತೂರಿಕೊಂಡು ಜೀವನ ನಡೆಸಬಹುದಾ ಎಂಬ ಆಲೋಚನೆ ನಡೆಸುತ್ತಿದ್ದೇವೆ. ಅದಕ್ಕೂ ಈ ವ್ಯವಸ್ಥೆ ಅವಕಾಶ ಕೊಡುವ ಸಾಧ್ಯತೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT