ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಮೂಲ್‌ನಿಂದ 90 ದಿನ ಕೆಡದ ಹಾಲಿನ ಪ್ಯಾಕೇಟ್‌ ‘ತೃಪ್ತಿ’ ಮಾರುಕಟ್ಟೆಗೆ

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕನಕಪುರ: ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಿಂದ 90 ದಿನಗಳ ಕಾಲ ಕೆಡದ ‘ತೃಪ್ತಿ’ ನಂದಿನಿ ಹಾಲಿನ ಪ್ಯಾಕೇಟ್‌ ಹೊರತರಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಇಲ್ಲಿನ ಶಿವನಹಳ್ಳಿ ಬಳಿಯಿರುವ ಮೆಗಾ ಡೇರಿ ಆವರಣದಲ್ಲಿ ಬಮೂಲ್‌ನ ಹೊಸ ಉತ್ಪನ್ನ ‘ತೃಪ್ತಿ’ ನಂದಿನಿ ಹಾಲಿನ ಪ್ಯಾಕೇಟ್‌ಗಳನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಮೂಲ್‌ಗೆ ನಿತ್ಯ 14.5 ಲಕ್ಷ ಲೀಟರ್‌ ಹಾಲು ಬರುತ್ತಿದ್ದು, ಅದರಲ್ಲಿ 7 ಲಕ್ಷ ಲೀಟರ್‌ ಹಾಲು ಉಳಿಯುತ್ತಿತ್ತು. ಇದರಲ್ಲಿ ಚೀಸ್‌, ಹಾಲಿನ ಪೌಡರ್‌ ಉತ್ಪತ್ತಿ ಮಾಡಲಾಗುತ್ತಿದೆ. ಈ ಇವುಗಳನ್ನು ಉತ್ಪಾದಿಸಿದರೂ ಇನ್ನು ಹಾಲು ಉಳಿಯುತ್ತಿತ್ತು. ಹೀಗಾಗಿ ‘ತೃಪ್ತಿ’ ನಂದಿನಿ ಹಾಲಿನ ಪ್ಯಾಕೇಟ್‌ ಉತ್ಪಾದನೆ ಮಾಡಲಾಗುತ್ತಿದೆ. ಇದು90 ದಿನಗಳ ಕಾಲ ಕೆಡುವುದಿಲ್ಲ ಎಂದು ವಿವರಿಸಿದರು.

ಅರ್ಧ ಲೀಟರ್‌ ಮತ್ತು ಒಂದು ಲೀಟರ್‌ ‘ತೃಪ್ತಿ’ ಹಾಲಿನ ಪ್ಯಾಕೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಅರ್ಧ ಲೀಟರ್‌ಗೆ ₹ 23, ಲೀಟರ್‌ಗೆ ₹ 46 ಬೆಲೆ ಇರುತ್ತದೆ. ಕೆಎಂಎಫ್‌ ಈಗಾಗಲೆ ಗುಡ್‌ಲೈಫ್‌ ಹೆಸರಿನಲ್ಲಿ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದೇ ಮಾದರಿಯಲ್ಲಿ ಇದನ್ನು ಹೊರತರಲಾಗಿದೆ ಎಂದು ಮಾಹಿತಿ ನೀಡಿದರು.

ಲಾಕ್‌ಡೌನ್‌ ಆಗಿರುವುದರಿಂದ ಹೆಚ್ಚು ದಿನಗಳ ಮನೆಯಲ್ಲಿ ಹಾಲು ಸಂಗ್ರಹಿಸಬೇಕಿದೆ ಹಾಗೂ ಬೇಸಿಗೆ ಕಾಲ ಆಗಿರುವುದರಿಂದ ಫ್ರಿಡ್ಜ್‌ನಿಂದ ಹೊರಗಡೆ ಇರುವಂತ ಹಾಲು ಬೇಕಿದೆ. ಗ್ರಾಹಕರ ಅಪೇಕ್ಷೆಯಂತೆ 90 ದಿನಗಳ ಕಾಲ ಬಳಸಬಹುದಾದ ನಂದಿನಿ ಹಾಲಿನ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದ್ದು, ಇನ್ನುಎರಡೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ವಿವರಿಸಿದರು.

ಹಾಲನ್ನು ಮಾರಾಟ ಮಾಡಲಾಗದೆ ಪೌಡರ್‌ ಮಾಡಲು ಹೊರ ರಾಜ್ಯಕ್ಕೆ ಕಳಿಸಿ ಹೆಚ್ಚಿನ ನಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಮೆಗಾ ಡೇರಿಯನ್ನು ನಿರ್ಮಾಣ ಮಾಡಲಾಗಿದೆ.ರೈತರ ಹಣದಿಂದ ಸ್ವತಂತ್ರವಾಗಿ ಇಂದು ಮೆಗಾ ಡೇರಿಯನ್ನು ಪ್ರಾರಂಭಿಸಿ ಉತ್ತಮ ಲಾಭಗಳಿಸಿದ್ದೇವೆ. ಸಂಸ್ಥೆಯು ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಮೂಲ್‌ ಅಭಿವೃದ್ಧಿಯಲ್ಲಿ ಸಹಕಾರ ನೀಡಿದ ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರನ್ನು ಶ್ಲಾಘಿಸಿದರು.

ಬಮೂಲ್‌ ನಿರ್ದೇಶಕ ಎಚ್.ಎಸ್‌.ಹರೀಶ್‌ಕುಮಾರ್‌ ಮಾತನಾಡಿ, ಬಮೂಲ್‌ ಕೆಎಂಎಫ್‌ನ 14 ಒಕ್ಕೂಟಗಳಲ್ಲಿ ಒಂದಾಗಿದ್ದು, ಈಗಾಗಲೆ ಮೆಗಾ ಡೇರಿಯನ್ನು ಶಿವನಹಳ್ಳಿ ಬಳಿ ತೆರೆದಿದೆ. ಇಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಡೇರಿಗೆ ಹೆಚ್ಚಿನ ಲಾಭ ಬರುವಂತಾಗಿದೆ. ಇಲ್ಲಿ ಮೆಗಾ ಡೇರಿ ನಿರ್ಮಿಸದಿದ್ದರೆ ಒಕ್ಕೂಟವು ಹೆಚ್ಚಿನ ನಷ್ಟ ಅನುಭವಿಸಬೇಕಿತ್ತು ಎಂದು ತಿಳಿಸಿದರು.

‘ವಲಸೆ ಬದಲು ಹೈನುಗಾರಿಕೆ ಮಾಡಿ’:ದೇಶದಲ್ಲಿ ಗುಜರಾತ್‌ ರಾಜ್ಯ ಬಿಟ್ಟರೆ ಬಮೂಲ್‌ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಹಾಲಿಗೆ ಅತಿ ಹೆಚ್ಚಿನ ಬೆಲೆಯನ್ನು ಕೊಡುತ್ತಿದ್ದು, ಲಾಕ್‌ಡೌನ್‌ ಪರಿಸ್ಥಿತಿಯಲ್ಲೂ ರೈತರಿಂದ ಹಾಲನ್ನು ಖರೀದಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆಗೆ ಉತ್ತಮ ಭವಿಷ್ಯವಿದ್ದು, ಯುವಕರು ಉದ್ಯೋಗ ಅರಸಿ ವಲಸೆ ಹೋಗುವುದರ ಬದಲು ಹಳ್ಳಿಗಳಲ್ಲೇ ಉಳಿದು ಹೈನುಗಾರಿಕೆ ಮಾಡುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದುಬಮೂಲ್‌ ನಿರ್ದೇಶಕ ಎಚ್.ಎಸ್‌.ಹರೀಶ್‌ಕುಮಾರ್‌ ಮನವಿ ಮಾಡಿದರು.

ಉತ್ತಮ ಬೆಲೆ ಕೊಡುತ್ತಿರುವುದರಿಂದ ರೈತರು ಹಾಲಿನ ಗುಣಮಟ್ಟ ಕಾಪಾಡಬೇಕು. ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ರೈತರ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.

ಮೆಗಾ ಡೇರಿ ವ್ಯವಸ್ಥಾಪಕ ಎಚ್‌.ಕೆ.ಮಂಜುನಾಥ್‌, ಉಪ ವ್ಯವಸ್ಥಾಪಕ ಮೋಹನ್‌ಕುಮಾರ್‌, ಚೀಸ್‌ ಪ್ಲಾಂಟ್‌ನ ಮೇಲ್ವಿಚಾರಕ ಎಸ್‌.ಜಿ.ವೇಣು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT