ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲುಗಡೆಯ ಸ್ಥಳಕ್ಕೆ ಬಾರದ ಪ್ರಯಾಣಿಕರು

ಸಂಚಾರ ದಟ್ಟಣೆ ನಿವಾರಿಸಲು ಪೊಲೀಸರು ಕೈಗೊಂಡ ಕ್ರಮ ವಿಫಲ * ಪರ್ಯಾಯಕ್ಕಾಗಿ ಮತ್ತೆ ಹುಡುಕಾಟ
Last Updated 17 ಡಿಸೆಂಬರ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ವ ಬೆಂಗಳೂರಿನ ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ದಟ್ಟಣೆ ತಗ್ಗಿಸಲು ಸಂಚಾರ ಪೋಲಿಸರು ಇಲ್ಲಿನ ಬಸ್‌ ನಿಲುಗಡೆ ಸ್ಥಳವನ್ನೇ ಬದಲಾಯಿಸಿದ್ದಾರೆ. ಆದರೆ, ಹೊಸ ನಿಲುಗಡೆಯ ಸ್ಥಳದತ್ತ ಜನರು ಪಾದಗಳನ್ನೇ ಬೆಳೆಸುತ್ತಿಲ್ಲವಾದ್ದರಿಂದ ಪೊಲೀಸರ ಪ್ರಯತ್ನ ಫಲ ನೀಡಿಲ್ಲ.

ಹೆಬ್ಬಾಳ ಮತ್ತು ನಗರದ ಕೇಂದ್ರ ಪ್ರದೇಶಗಳಿಂದ ಹಳೆ ಮದ್ರಾಸ್ ರಸ್ತೆಯ ಮೂಲಕ ಹೊಸಕೋಟೆ, ವೈಟ್‌ಫೀಲ್ಡ್‌ ಮತ್ತು ಸಿಲ್ಕ್‌ಬೋರ್ಡ್‌ ಕಡೆಗೆ ಸಂಚರಿಸುವ ಸಾವಿರಾರು ವಾಹನಗಳು ಈ ಜಂಕ್ಷನ್‌ನಿಂದಲೇ ಹಾದುಹೋಗುತ್ತವೆ. ಹಾಗಾಗಿ ದಿನದ ಬಹುತೇಕ ಸಮಯ ಇಲ್ಲಿ ದಟ್ಟಣೆ ಇದ್ದೇ ಇರುತ್ತದೆ. ಅಲ್ಲದೆ, ಇಲ್ಲಿ ಮೆಟ್ರೊ ಮಾರ್ಗ ನಿರ್ಮಾಣದ ಕಾಮಗಾರಿಯು ನಡೆಯುತ್ತಿದೆ. ರಸ್ತೆ ಮತ್ತಷ್ಟು ಕಿರಿದಾಗಿದೆ. ಹಾಗಾಗಿ ವಾಹನಗಳು ಇಲ್ಲಿ ಓಡುವುದಿಲ್ಲ; ತೆವಳುತ್ತವೆ.

ಈ ಸ್ಥಳದಿಂದಲೇ ಕೆ.ಆರ್‌.ಪುರದ ಮೇಲ್ಸೇತುವೆ ಆರಂಭವಾಗುತ್ತದೆ. ಈ ಸೇತುವೆಯನ್ನು ವಾಹನಗಳು ಹತ್ತುವ ಸ್ಥಳದಲ್ಲೇ ಕೆ.ಆರ್.ಪುರ, ಹೊಸಕೋಟೆ ಕಡೆ ಹೋಗುವ ಬಿಎಂಟಿಸಿ ಬಸ್‌ಗಳು ಮತ್ತು ಕೋಲಾರ, ತಿರುಪತಿಗೆ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಹಾಗೂ ಅಂತರರಾಜ್ಯ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಜತೆಗೆ ಖಾಸಗಿ ಬಸ್‌ಗಳ ಹಾವಳಿಯು ಇಲ್ಲಿ ಹೆಚ್ಚಿದೆ. ಇದರಿಂದ ಮೇಲ್ಸೇತುವೆ ಹತ್ತುವ ರಸ್ತೆಯಲ್ಲಿ ದಟ್ಟಣೆ ಉಂಟಾಗಿ, ವಾಹನಗಳು ಹತ್ತಾರು ನಿಮಿಷ ನಿಂತಲ್ಲೇ ನಿಲ್ಲುತ್ತಿವೆ.

ಈ ಸಂಚಾರ ಸಮಸ್ಯೆಯನ್ನು ಸಾಧ್ಯವಾದಷ್ಟು ಪರಿಹರಿಸಲು ಮೇಲ್ಸೇತುವೆ ಆರಂಭದಲ್ಲಿದ್ದ ಬಸ್‌ ನಿಲುಗಡೆ ಸ್ಥಳವನ್ನು ಪೈಲೇಔಟ್‌ನಲ್ಲಿನ ಯು–ಟರ್ನ್‌ ಸಮೀಪದ ರಸ್ತೆಗೆ ಬದಿಗೆ ಬದಲಾಯಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ಬಸ್‌ ಮಾರ್ಗ ರೂಪಿಸಲಾಗಿದೆ. ಸ್ಥಳ ಬದಲಾವಣೆಯ ಮಾಹಿತಿ ನೀಡಲು ಮೇಲ್ಸೇತುವೆಯ ಬಸ್‌ ನಿಲುಗಡೆ ಸ್ಥಳದಲ್ಲಿ ಬ್ಯಾನರ್‌ ಕೂಡ ಅಳವಡಿಸಲಾಗಿದೆ. ಆದರೆ, ಜನರು ಮಾತ್ರ ಹೊಸ ನಿಲುಗಡೆ ಸ್ಥಳದತ್ತ ದಾಪುಗಾಲು ಹಾಕುತ್ತಿಲ್ಲ.

‘ಬಸ್‌ ನಿಲುಗಡೆಗೆ ಹೊಸದಾಗಿ ಗುರುತಿಸಿರುವ ಸ್ಥಳದ ಹಿಂಬದಿಯಲ್ಲಿಯೇ ಪೈಲೇಔಟ್‌ನ ಯು–ಟರ್ನ್‌ ಇದೆ. ಇಲ್ಲಿ ಒಂದೆರಡು ಬಸ್‌ಗಳು ನಿಂತಾಗ, ಮತ್ತೆರಡು ವಾಹನಗಳು ಯು–ಟರ್ನ್‌ ತೆಗೆದುಕೊಂಡರೆ ಇಡೀ ರಸ್ತೆಯೇ ಬಂದ್‌ ಆಗುತ್ತಿದೆ. ಇಂಥಲ್ಲಿ ನಿಲುಗಡೆ ಸ್ಥಳವೆಂದು ಗುರುತಿಸಿರುವುದು ಅವೈಜ್ಞಾನಿಕ’ ಎಂದು ಬಿಎಂಟಿಸಿ ಚಾಲಕರೊಬ್ಬರು ಅಭಿಪ್ರಾಯಪಟ್ಟರು.

ನಗರದ ಪೂರ್ವ ಪ್ರದೇಶಗಳಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಗೆ, ಕೈಗಾರಿಕೆಗಳಿಗೆ ತೆರಳುವ ಉದ್ಯೋಗಿಗಳ ವಾಹನಗಳು, ಕೋಲಾರ, ಚೆನ್ನೈನೆಡೆಗೆ ಹೋಗುವ ಭಾರಿ ವಾಹನಗಳು ಟಿನ್‌ ಫ್ಯಾಕ್ಟರಿ ಮೂಲಕ ಹಾದುಹೋಗುತ್ತವೆ. ‘ಕಂಪನಿಗಳ ವಾಹನಗಳ ದಟ್ಟಣೆ ಬೆಳಗಿನ ಹತ್ತರವರೆಗೆ ಇರುತ್ತದೆ. ನಂತರ ಭಾರಿ ವಾಹನಗಳು ಹೆಬ್ಬಾಳದ ಕಡೆಯಿಂದ ಬರಲು ಶುರುವಾಗುತ್ತವೆ. ಹಾಗಾಗಿ ದಟ್ಟಣೆ ಸದಾಕಾಲ ಇರುತ್ತದೆ’ ಎನ್ನುತ್ತಾರೆ ಇಲ್ಲಿ ಕಾರ್ಯನಿರ್ವಹಿಸುವ ಸಂಚಾರ ಪೋಲಿಸರು.

ಕಪ್ಪು–ಬಿಳುಪು: ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಮಾಲಿನ್ಯದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಮಾಸ್ಕ್‌ಗಳನ್ನು ಹೆಚ್ಚುಕಾಲ ಧರಿಸುತ್ತಾರೆ. ಇದರಿಂದ ಅವರ ಮುಖ ಮಾತ್ರ ಬೆಳ್ಳಗಾಗಿ, ಉಳಿದ ಮುಖಭಾಗ ಬಹುತೇಕ ಕಪ್ಪಾಗಿದೆ. ನೆರಳಿಗಾಗಿ ಇಲ್ಲೊಂದು ಪೊಲೀಸ್‌ ಚೌಕಿ ಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಜನ ಯಾಕೆ ಬರುತ್ತಿಲ್ಲ?
ಮಾರತ್ತಹಳ್ಳಿ, ಸಿಲ್ಕ್‌ಬೋರ್ಡ್‌ ಕಡೆಗೆ ಹೋಗುವ ಬಸ್‌ಗಳ ನಿಲ್ದಾಣ ಮತ್ತು ಕೆಂಪೇಗೌಡ ಬಸ್‌ ನಿಲ್ದಾಣ, ಹೆಬ್ಬಾಳ ಕಡೆಗೆ ಹೋಗುವ ಬಸ್‌ಗಳ ನಿಲ್ದಾಣದಿಂದ (ಟಿನ್‌ ಫ್ಯಾಕ್ಟರಿ) ಪೈಲೇಔಟ್‌ನ ನಿಲುಗಡೆ ಸ್ಥಳ ಸರಾಸರಿ 300 ಮೀಟರ್‌ನಷ್ಟು ದೂರವಿದೆ. ಜತೆಗೆ ಈ ಸ್ಥಳ ಬೆನ್ನಿಗಾನಹಳ್ಳಿಯ ಎರಡು ಮೇಲ್ಸೇತುವೆಗಳ ನಡುವೆ ಇದೆ. ಪ್ರಯಾಣಿಕರು ಇಲ್ಲಿಗೆ ತಲುಪಲು ಸದಾ ದಟ್ಟಣೆಯಿಂದ ಕೂಡಿರುವ ಹೊರವರ್ತುಲ ರಸ್ತೆ, ಇಲ್ಲವೆ ಹಳೆ ಮದ್ರಾಸ್‌ ರಸ್ತೆಯನ್ನು ದಾಟಬೇಕಿದೆ. ಹಾಗಾಗಿ ಬಹುತೇಕ ಜನರು ಈ ದೂರವನ್ನು ಕ್ರಮಿಸಲು ಸಿದ್ಧರಿಲ್ಲ.

ಮೇಲ್ಸೇತುವೆಗಳನ್ನು ಹತ್ತಿಳಿಯುವ ವಾಹನಗಳಿಂದಾಗುವ ಶಬ್ದ ಮತ್ತು ವಾಯುಮಾಲಿನ್ಯವು ಪ್ರಯಾಣಿಕರು ಈ ಸ್ಥಳದಲ್ಲಿ ನಿಲ್ಲದಿರಲು ಮತ್ತೊಂದು ಕಾರಣವಾಗಿದೆ. ಪ್ರಯಾಣಿಕರು ಬಸ್‌ಗಾಗಿ ಕಾಯುವ ಸ್ಥಳವೂ ಅಷ್ಟೇನು ವಿಸ್ತಾರವಾಗಿಲ್ಲ.

*
ಬಸ್‌ ನಿಲುಗಡೆಯ ಹೊಸ ಸ್ಥಳಕ್ಕೆ ಜನ ಬರುತ್ತಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ದಟ್ಟಣೆ ನಿವಾರಣೆಗೆ ಪರ್ಯಾಯ ವ್ಯವಸ್ಥೆ ರೂಪಿಸುತ್ತೇವೆ.
–ಎಂ.ಜೆ.ಲೋಕೇಶ್‌, ಕೆ.ಆರ್.ಪುರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT