ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಲ್ಲಿ ಕನ್ನಡ ಬಳಕೆ; ಅಧಿಕಾರಿಗಳ ಬೇಜವಾಬ್ದಾರಿ

ಕ್ರಮಕ್ಕೆ ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪತ್ರ
Last Updated 4 ಜುಲೈ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೌಶಲ ಅಭಿವೃದ್ಧಿ ಇಲಾಖೆಯ ಜಾಲತಾಣದಲ್ಲಿ ಕನ್ನಡವನ್ನು ನಿಕೃಷ್ಟವಾಗಿ ಹಾಗೂ ಬೇಜವಾಬ್ದಾರಿಯಿಂದ ಬಳಸಲಾಗಿದೆ. ಜಿಲ್ಲೆಗಳ ಹೆಸರನ್ನೂ ತಪ್ಪಾಗಿ ಬರೆಯಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಉಪಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ರಾಜ್ಯದ ಯುವ ಪೀಳಿಗೆಗೆ ವಿವಿಧ ಉದ್ಯೋಗಗಳ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಇಲಾಖೆ ಇದು. ಆದರೆ, ತನ್ನದೇ ಆಡಳಿತ ಭಾಷೆಯ ಕೌಶಲ ಇಲ್ಲದಿರುವುದು ಸೋಜಿಗದ ಸಂಗತಿ. ಅಧಿಕೃತ ಆಡಳಿತ ಭಾಷೆಯನ್ನೇ ಸರಿಯಾಗಿ ಬರೆಯಲು ಬಾರದ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು ಯುವ ಪೀಳಿಗೆಗೆ
ಯಾವ ಬಗೆಯ ಕೌಶಲವನ್ನು ವೃದ್ಧಿಸುತ್ತಾರೆ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಎಲ್ಲ ಕಡೆ ಗೂಗಲ್ ಅನುವಾದ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಜಾಬ್ ಹುಡುಕಿ, ಮುಖಪುಟದ ಬದಲಿಗೆ ಮನೆ, ಕೌಶಲದ ಅಗತ್ಯವನ್ನು ಪೋಸ್ಟ್‌ ಮಾಡಿ, ಉದ್ಯೋಗಗಳನ್ನು ಬ್ರೌಸ್ ಮಾಡಿ, ಕುಕಿನೀತಿ ಸೇರಿದಂತೆ ಹಲವು ಗೂಗಲ್ ಅನುವಾದಿತ ಶಬ್ದಗಳು ಕಾಣಸಿಗುತ್ತವೆ. ಅದೇ ರೀತಿ, ಜಿಲ್ಲೆಗಳ ಹೆಸರನ್ನು ತಪ್ಪಾಗಿ ಬರೆದಿರುವುದು ವಿಷಾದನೀಯ. ಬೆಲ್ಗಾಂ (ಬೆಳಗಾವಿ), ಗಡಾಗ್ (ಗದಗ), ಹವೇರಿ (ಹಾವೇರಿ), ಯದ್ಗೀರ್ (ಯಾದಗಿರಿ), ಕೊಪ್ಪಲ್ (ಕೊಪ್ಪಳ), ಶಿಮೊಗ (ಶಿವಮೊಗ್ಗ), ಚಿಕ್ಕಬಲ್‌ಪುರ (ಚಿಕ್ಕಬಳ್ಳಾಪುರ) ಎಂದು ಬರೆಯಲಾಗಿದೆ. ಇದೇ ರೀತಿ ತಪ್ಪುಗಳು ವೆಬ್‌ಸೈಟ್‌ನಲ್ಲಿ ಕಾಣಸಿಗುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

*
ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು. ಇ- ಆಡಳಿತ ಇಲಾಖೆಯೊಂದಿಗೆ ಸೇರಿ ಹೊಸ ವೆಬ್‌ಸೈಟ್‌ ರೂಪಿಸಲು ಸೂಚಿಸಬೇಕು.
-ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT