ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಸಂಸ್ಥೆಗಳ ಆವರಣದಲ್ಲೇ ತಂಬಾಕು ಉತ್ಪನ್ನ!

ಕಾನೂನು ಬಾಹಿರವಾಗಿ ಮಕ್ಕಳು–ಯುವಜನರಿಗೆ ಮಾರಾಟ
Published 31 ಮೇ 2024, 23:37 IST
Last Updated 31 ಮೇ 2024, 23:37 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ–ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧಿಸಲ್ಪಟ್ಟಿದ್ದರೂ ಕಾನೂನು ಬಾಹಿರವಾಗಿ ಪೂರೈಕೆ ನಡೆಯುತ್ತಿದೆ. ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೋಟ್ಪಾ ಕಾಯ್ದೆಯಡಿ (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಮೂರು ವರ್ಷಗಳಲ್ಲಿ 30 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಿದೆ.

ತಂಬಾಕು ಉತ್ಪನ್ನಗಳ ಕಂಪನಿಗಳು ಮಕ್ಕಳು ಮತ್ತು ಯುವಜನರನ್ನೇ ಗುರಿಯಾಗಿಸಿಕೊಂಡು ಶಾಲಾ–ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುತ್ತಿವೆ. ಇದರಿಂದಾಗಿ ಮಕ್ಕಳು ಹಾಗೂ ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ತಂಬಾಕು ನಿಯಂತ್ರಣ ಘಟಕವು ಶ್ರಮಿಸುತ್ತಿದ್ದು, 2021–22ರಿಂದ 2023–24ರ ಅವಧಿಯಲ್ಲಿ ಕೋಟ್ಪಾ ಕಾಯ್ದೆಯ 6ಎ ಸೆಕ್ಷನ್ ಅಡಿ 21 ಸಾವಿರಕ್ಕೂ ಅಧಿಕ ಪ್ರಕರಣಗಳ್ನು ದಾಖಲಿಸಿದೆ. ಈ ಪ್ರಕರಣಗಳಲ್ಲಿ ₹21 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದೆ. ಕಾಯ್ದೆಯ 6ಬಿ ಸೆಕ್ಷನ್ ಅಡಿ 11 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ₹11 ಲಕ್ಷಕ್ಕೂ ಅಧಿಕ ದಂಡವನ್ನು ಕಲೆಹಾಕಿದೆ. 

ಕೋಟ್ಪಾ ಕಾಯ್ದೆಯ 6ಎ ಸೆಕ್ಷನ್ ಪ್ರಕಾರ 18 ವರ್ಷದ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಪರಾಧ. ಕಾಯ್ದೆಯ 6ಬಿ ಸೆಕ್ಷನ್ ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಗಜ (300 ಅಡಿ) ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಸೇವನೆ ಮಾಡುವಂತಿಲ್ಲ. ಸಾರ್ವಜನಿಕರ ದೂರಿನ ಆಧಾರ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಸ್ಥಳಕ್ಕೆ ತಂಬಾಕು ನಿಯಂತ್ರಣ ಘಟಕದ ತಂಡವು ಭೇಟಿ ನೀಡಿ, ಕೋಟ್ಪಾ ಕಾಯ್ದೆ ಅನುಸಾರ ಕ್ರಮ ಕೈಗೊಂಡಿದೆ. ಕೆಲ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಿಕೊಂಡು, ದಂಡ ಹಾಕಿದೆ. ಇದರಿಂದಾಗಿ ರಾಜ್ಯದಲ್ಲಿ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 

ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ತಂಬಾಕು ಮುಕ್ತ ಆರೋಗ್ಯಯುತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ.
ಡಾ. ರಜನಿ ಪಿ., ಮಾನಸಿಕ ಆರೋಗ್ಯ ವಿಭಾಗ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕಿ ಆರೋಗ್ಯ ಇಲಾಖೆ

ಕ್ಯಾನ್ಸರ್ ಪ್ರಕರಣ ಹೆಚ್ಚಳ: ತಂಬಾಕು ಉತ್ಪನ್ನಗಳ ಬಳಕೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ವಾರ್ಷಿಕ 87 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪ‍್ರಕರಣಗಳು ವರದಿಯಾಗುತ್ತಿವೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಕಾರ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ದೃಢಪಡುತ್ತಿರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 31.9ರಷ್ಟು ಪ್ರಕರಣಗಳು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಾಗಿವೆ.

ಕಿದ್ವಾಯಿ ಸಂಸ್ಥೆಯಲ್ಲಿ ವಾರ್ಷಿಕ ಸರಾಸರಿ 21 ಸಾವಿರ ಕ್ಯಾನ್ಸರ್ ‍ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿದ್ದು, 3.6 ಲಕ್ಷ ಮಂದಿ ಫಾಲೋ ಅಪ್ ಚಿಕಿತ್ಸೆಗೆ ಭೇಟಿ ನೀಡುತ್ತಿದ್ದಾರೆ. ಪುರುಷರಲ್ಲಿ ವರದಿಯಾಗುತ್ತಿರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 10.5ರಷ್ಟು ಬಾಯಿಗೆ ಸಂಬಂಧಿಸಿದ ಕ್ಯಾನ್ಸರ್ ಪ್ರಕರಣಗಳಾದರೆ, ಶೇ 10.2 ರಷ್ಟು ಪ್ರಕರಣಗಳು ಶ್ವಾಸಕೋಶಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. 

‘ತಂಬಾಕು ಕಂಪನಿಗಳು ಆಕರ್ಷಕ ಜಾಹೀರಾತುಗಳ ಮೂಲಕ ಜನರನ್ನು ಸೆಳೆಯುತ್ತಿವೆ. ತಂಬಾಕು ಉತ್ಪನ್ನಗಳನ್ನು ಬಳಸುವಂತೆ ಯುವಜನರು ಮತ್ತು ಮಕ್ಕಳಿಗೆ ಆಮಿಷ ಒಡ್ಡಲಾಗುತ್ತಿದೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು ಕೈಜೋಡಿಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.  

‘ಸ್ಟಾಪ್ ಟೊಬ್ಯಾಕೊ’ ಮೊಬೈಲ್ ಆ್ಯಪ್‌ ಕ್ಯೂಆರ್ ಕೋಡ್

‘ಸ್ಟಾಪ್ ಟೊಬ್ಯಾಕೊ’ ಮೊಬೈಲ್ ಆ್ಯಪ್‌ ಕ್ಯೂಆರ್ ಕೋಡ್

ಆ್ಯಪ್ ಮೂಲಕ ದೂರು ದಾಖಲು

ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ತಡೆಗೆ ರಾಜ್ಯ ತಂಬಾಕು ನಿಯಂತ್ರಣ ಘಟಕ ‘ಸ್ಟಾಪ್ ಟೊಬ್ಯಾಕೊ’ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರು ಮತ್ತು ಸೇವಿಸುತ್ತಿರುವವರ ವಿರುದ್ಧ ಈ ಆ್ಯಪ್ ನೆರವಿನಿಂದ ಜನರೇ ದೂರು ದಾಖಲಿಸಬಹುದಾಗಿದೆ. ಕಳೆದ ಆರು ತಿಂಗಳಲ್ಲಿ ಈ ಆ್ಯಪ್‌ ಮೂಲಕ ಘಟಕವು ನೂರಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ. ದೂರಿನ ಆಧಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಭೇಟಿ ನೀಡಿ ಕೋಟ್ಪಾ ಕಾಯಿದೆ ಅನುಸಾರ ಕ್ರಮ ಕೈಗೊಳ್ಳುತ್ತಿದೆ.

‘ಈ ಆ್ಯಪ್ ಮೂಲಕ ಸುಲಭವಾಗಿ ದೂರು ದಾಖಲಿಸುವ ಅವಕಾಶ ನೀಡಲಾಗಿದೆ. ನಿಗದಿತ ಸ್ಥಳದಿಂದ ಸೆಲ್ಫಿ ಕೂಡ ಅಪ್ಲೋಡ್ ಮಾಡಬಹುದಾಗಿದೆ. ದಾಖಲಾದ ಪ್ರಕರಣ ಯಾವ ಹಂತದಲ್ಲಿದೆ ಎಂಬ ಮಾಹಿತಿಯೂ ದೊರೆಯುತ್ತದೆ. ನಿಗದಿತ ಸ್ಥಳದ ಫೋಟೊ ದೊಂದಿಗೆ ದೂರು ದಾಖಲಿಸಿದ ಬಳಿಕ ಆ್ಯಪ್‌ನಲ್ಲಿ ದೂರಿಗೆ ಸಂಬಂಧಿಸಿದ ಕೆಲವೊಂದು ಪೂರಕ ಮಾಹಿತಿ ಸಲ್ಲಿಸುವ ಅವಕಾಶವಿದೆ. ದೂರು ನೀಡಿದವರ ಮಾಹಿತಿಯನ್ನು ತಂಬಾಕು ನಿಯಂತ್ರಣ ತಂಡ ಗೌಪ್ಯವಾಗಿ ಇಡಲಿದೆ’ ಎಂದು ಘಟಕದ ಅಧಿಕಾರಿಯೊಬ್ಬರು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT