ಮಂಗಳವಾರ, ಮಾರ್ಚ್ 9, 2021
18 °C

ಸ್ಕೂಲ್‌ ವ್ಯಾನ್‌ಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಚಾರ ಸಮಸ್ಯೆ ಕಡಿವಾಣ ಹಾಕುವ ದಿಸೆಯಲ್ಲಿ ಹೊಸ ಪ್ರಯೋಗಕ್ಕಿಳಿದಿರುವ ಸಂಚಾರ ಪೊಲೀಸರು ವಾಣಿಜ್ಯ ಪ್ರದೇಶಗಳಲ್ಲಿರುವ ಶಾಲೆಗಳ ಮುಂದೆ  ವಾಹನ ನಿಲುಗಡೆಗೆ ಹೇರಿರುವ ನಿರ್ಬಂಧಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ಬಿಷಪ್‌ ಕಾಟನ್‌ ಹಾಗೂ ಇತರ ಶಾಲೆಗಳ ನಂತರ ಅರಮನೆ ರಸ್ತೆಯಲ್ಲಿರುವ ಸೋಫಿಯಾ ಶಾಲೆಯ ಬಳಿ ‘ನೋ ಸ್ಟಾಪಿಂಗ್‌ ಜೋನ್‌’ ಪ್ರಯೋಗಕ್ಕೆ ಕೈ ಹಾಕಿದೆ. ಶಾಲೆಯ ಸುತ್ತ ಬಿಡಾರ ಹೂಡಿರುತ್ತಿದ್ದ ಶಾಲಾ ವಾಹನಗಳು ಕಾಣೆಯಾಗಿವೆ.  

ರೆಸಿಡೆನ್ಸಿ ರಸ್ತೆಯಲ್ಲಿ ಶಾಲಾ ವಾಹನಗಳ ನಿಲುಗಡೆಗೆ ಅವಕಾಶ ನಿರಾಕರಿಸಿದ ಬೆನ್ನಲ್ಲೇ ಚಾಲಕರು ಮತ್ತು ಪೋಷಕರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಟ್ರಾಫಿಕ್‌ ಪೊಲೀಸರು ಇದಕ್ಕೆ ಮಣಿದಿರಲಿಲ್ಲ. ‘ನೋ ಸ್ಟಾಪಿಂಗ್‌ ಜೋನ್‌’ ನಿರ್ಧಾರ ಕಂಡ ಯಶಸ್ಸಿನಿಂದ ಪ್ರೇರಿತರಾದ ಪೊಲೀಸರ ಲಕ್ಷ್ಯ ಅರಮನೆ ರಸ್ತೆಯತ್ತ ಹೊರಳಿತು. ಸೋಫಿಯಾ ಶಾಲೆ,ಗಾಲ್ಫ್ ಮೈದಾನದ ಸ್ಯಾಂಕಿ ರಸ್ತೆ ಮತ್ತು ಬಸವ ಭವನದ ಬಳಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಿದ ವಾರದಲ್ಲಿಯೇ ಫಲಿತಾಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ.  

ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರ ವಾಹನ ಶಾಲೆಯ ಎದುರು ಬಹಳ ಹೊತ್ತು ಠಿಕಾಣಿ ಹೂಡಲು ಮೈಕ್‌ ಹಿಡಿದು ನಿಂತ ಟ್ರಾಫಿಕ್‌ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಶಾಲೆಯ ಆಡಳಿತ ಮಂಡಳಿ ಕೂಡ ಟ್ರಾಫಿಕ್‌ ಪೊಲೀಸರ ಕೆಲಸಕ್ಕೆ ಕೈ ಜೋಡಿಸಿದೆ. ಪೊಲೀಸರ ಜತೆ ಸಹಕರಿಸುವಂತೆ ಪಾಲಕರಿಗೂ ಮನವಿ ಮಾಡಿದೆ. ಹೈಗ್ರೌಂಡ್ಸ್‌ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳು ಈಗಾಗಲೇ ಶಾಲೆಯ ಸಿಬ್ಬಂದಿ ಮತ್ತು ಪೋಷಕರ ಜತೆ ಸಭೆ ನಡೆಸಿ ಮನವರಿಕೆ ಮಾಡಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದೊಯ್ಯಲು ಬಂದಾಗ ಶಾಲೆಯ ಗೇಟ್‌ ಮತ್ತು ರಸ್ತೆಯಲ್ಲಿ ವಾಹನ ನಿಲ್ಲಿಸದಂತೆ ಮನವಿ ಮಾಡಿದ್ದಾರೆ. ಗುರುತು ಮಾಡಿದ ನಿರ್ದಿಷ್ಟ ಜಾಗದಲ್ಲಿ ವಾಹನ ಬಿಟ್ಟು, ಮಕ್ಕಳೊಂದಿಗೆ ನಡೆದು ಹೋಗುವಂತೆ ಸೂಚನೆ ನೀಡಿದ್ದಾರೆ.  

15 ನಿಮಿಷದ ನಿಯಮ

ಮಕ್ಕಳನ್ನು ಕರೆತರುವ ಮತ್ತು ಕರೆದೊಯ್ಯುವಾಗ ಖಾಸಗಿ ಶಾಲಾ ವಾಹನಗಳು ಕೂಡ 15 ನಿಮಿಷಕ್ಕಿಂತ ಹೆಚ್ಚು ಹೊತ್ತು ಶಾಲೆಯ ಮುಂದೆ ನಿಲ್ಲುವಂತಿಲ್ಲ. ಈ ನಿಯಮ ವಾಣಿಜ್ಯ ಪ್ರದೇಶದಲ್ಲಿರುವ ಎಲ್ಲ ಶಾಲೆಗಳಿಗೂ ಅನ್ವಯಿಸಲಿದೆ. ಮಕ್ಕಳನ್ನು ಇಳಿಸಿದ ಅಥವಾ ಹತ್ತಿಸಿಕೊಂಡ 15 ನಿಮಿಷದಲ್ಲಿ ವಾಹನಗಳು ಅಲ್ಲಿಂದ  ಹೊರಡಬೇಕು. ಪೋಷಕರಿಗೂ ಈ ನಿಯಮ ಅನ್ವಯಿಸುತ್ತದೆ ಎನ್ನುತ್ತಾರೆ ಹೆಚ್ಚುವರಿ ಪೊಲೀಸ್‌ ಆಯುಕ್ತ (ಟ್ರಾಫಿಕ್‌) ಪಿ.ಹರಿಶೇಖರನ್‌. 

ಪೋಷಕರ ಕಾರು ಮತ್ತು ವಾಹನಗಳಿಗೆ ಸ್ಯಾಂಕಿ ರಸ್ತೆ ಮತ್ತು ಮಾಧವ ಭವನದ ಬಳಿ ಒಂದು ಸಾಲಿನ ಪಾರ್ಕಿಂಗ್‌ ಜಾಗ ನೀಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಸ್ಕೈವಾಕ್‌ ಕೆಳಗೆ ಮೂಲೆಯಲ್ಲಿದ್ದ ಪುಟ್ಟ ಜಾಗ ಬಿಟ್ಟು ಕೊಡಲಾಗಿದೆ.

ಆರಂಭದಲ್ಲಿ ಪೊಲೀಸರ ಜತೆ ವಾಗ್ವಾದಕ್ಕೆ ಇಳಿಯುತ್ತಿದ್ದ ಪೋಷಕರು ಸಹಕರಿಸುತ್ತಿದ್ದಾರೆ. ಪೊಲೀಸರು ಸೂಚಿಸಿದ ಪಾರ್ಕಿಂಗ್‌ ಜಾಗ ಸಾಲದು ಮತ್ತು 15 ನಿಮಿಷದ ಹೊಸ ನಿಯಮದಿಂದ ಕಿರಿಕಿರಿಯಾಗುತ್ತಿದೆ ಎಂದು ಆಕ್ಷೇಪ ಎತ್ತಿದ್ದಾರೆ. ಪೊಲೀಸರು ಸೂಚಿಸಿದ ಸ್ಥಳದಲ್ಲಿ ಕಾರು ನಿಲ್ಲಿಸಿ ಪುಟ್ಟ ಮಕ್ಕಳನ್ನು ಕರೆ ತರುವುದು ಕಷ್ಟದ ಕೆಲಸ. ಇದೊಂದು ಅವೈಜ್ಞಾನಿಕ ನಿರ್ಧಾರ ಎನ್ನುವುದು ಕೆಲವು ಪೋಷಕರು ವಾದ.

ಮಕ್ಕಳು, ವಾಹನಗಳ ಜಾತ್ರೆ!

ಸೋಫಿಯಾ ಶಾಲೆಯ ಎದುರಿನ ರಸ್ತೆ ‘ನೋ ಸ್ಟಾಪ್‌ ಜೋನ್‌’ ಎಂದು ಘೋಷಣೆಯಾದ ಬಳಿಕ ಹತ್ತಾರು ವರ್ಷಗಳ ಸಂಚಾರ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.  

ಶಾಲೆ ಆರಂಭ ಮತ್ತು ಬಿಡುವ ವೇಳೆ (ಬೆಳಿಗ್ಗೆ 8 ಮತ್ತು ಮಧ್ಯಾಹ್ನ 2.30) ಸೋಫಿಯಾ ಶಾಲೆ ಮುಂದಿನ ರಸ್ತೆಯಲ್ಲಿ ಭಾರಿ ಸಂಚಾರ ಒತ್ತಡ ನಿರ್ಮಾಣವಾಗುತ್ತಿತ್ತು. ಬೆಳಿಗ್ಗೆ ಶಾಲೆಗೆ ಹೋಗುವ ಧಾವಂತ ಮತ್ತು ಶಾಲೆ ಬಿಟ್ಟ ನಂತರ ಸಾಗರದಂತೆ ರಸ್ತೆಗೆ ನುಗ್ಗುವ ಮಕ್ಕಳನ್ನು ಸಂಭಾಳಿಸುವುದು ಟ್ರಾಫಿಕ್‌ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು.

ಆಕಾಶಕ್ಕೆ ಏಣಿ ಹಾಕಿದಂತಿರುವ ಸ್ಕೈವಾಕ್‌ ಬಳಸುವ ಮಕ್ಕಳ ಸಂಖ್ಯೆ ತೀರಾ ಕಡಿಮೆ. ಮಣ ಬಾರದ ಸ್ಕೂಲ್ ಬ್ಯಾಗ್ ಹೊತ್ತುಕೊಂಡು  ಸ್ಕೈ ವಾಕ್‌ ಏರುವುದು ಕಷ್ಟದ ಕೆಲಸ. ಮಕ್ಕಳು ರಸ್ತೆ ದಾಟಲು ಟ್ರಾಫಿಕ್‌ ಪೊಲೀಸರು ನೆರವು ನೀಡುತ್ತಾರೆ.

ಮಕ್ಕಳನ್ನು ಶಾಲೆಗೆ ಬಿಡಲು ಬರುವ ಖಾಸಗಿ ವಾಹನಗಳು ಶಾಲೆ ಬಿಡುವವರೆಗೂ ಸುತ್ತಮುತ್ತ ಬಿಡಾರ ಹೂಡಿದರೆ, ಪೋಷಕರ ವಾಹನಗಳು ಅರ್ಧ ರಸ್ತೆ ಆಕ್ರಮಿಸಿಕೊಳ್ಳುತ್ತಿದ್ದವು. ಶಾಲೆ ದ್ವಾರದ ಬಳಿ ಇರುವ ತಂಗುದಾಣದಲ್ಲಿ ಬಿಎಂಟಿಸಿ ಬಸ್‌ ನಿಂತರೆ ಸಂಪೂರ್ಣ ಜಾಮ್‌ ಆಗುತ್ತದೆ.

ಸೋಫಿಯಾ ಶಾಲೆ ಅಧಿಕೃತ ಶಾಲಾ ವಾಹನಗಳನ್ನು ಹೊಂದಿಲ್ಲ. ಬಿಎಂಟಿಸಿ ಜತೆ ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಖಾಸಗಿ ವಾಹನ ಮತ್ತು ಪ್ರತ್ಯೇಕ ಬಿಎಂಟಿಸಿ ಬಸ್‌ಗಳನ್ನೇ ಆಶ್ರಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು