ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿದ್ದ ಗುಂಡಿಗಳನ್ನು ಸಂಚಾರ ಪೊಲೀಸರು ಮುಚ್ಚಿದ್ದು, ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ವಾಹನಗಳು ಸಹ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ದಟ್ಟಣೆಯೂ ಉಂಟಾಗುತ್ತಿತ್ತು.
ಸುಗಮ ಸಂಚಾರಕ್ಕೆ ರಸ್ತೆ ಗುಂಡಿಗಳು ಅಡ್ಡಿಯಾಗಿದ್ದನ್ನು ಗಮನಿಸಿದ್ದ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು, ತಾವೇ ಸಲಿಕೆ ಹಿಡಿದು ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲುಗಳಿಂದ ಗುಂಡಿ ಮುಚ್ಚಿದ್ದಾರೆ.
‘27ನೇ ಮುಖ್ಯರಸ್ತೆ ಹಾಗೂ ಅಗರ ಕೆಳ ಸೇತುವೆ ರಸ್ತೆಯಲ್ಲಿ ರಸ್ತೆ ಗುಂಡಿಗಳಿಂದ ಕೂಡಿತ್ತು. ರಸ್ತೆ ನಿರ್ವಹಣೆ ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿ ಮಾಡಿರಲಿಲ್ಲ. ಹೀಗಾಗಿ, ಸಂಚಾರ ಪೊಲೀಸರೇ ಗುಂಡಿಗಳನ್ನು ಮುಚ್ಚಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
ಪೊಲೀಸರು ರಸ್ತೆ ಗುಂಡಿ ಮುಚ್ಚಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪೋಟೊ ಹಂಚಿಕೊಂಡಿರುವ ಸಾರ್ವಜನಿಕರು, ‘ಬಿಬಿಎಂಪಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮಾಡದ ಕೆಲಸವನ್ನು ಪೊಲೀಸರು ಮಾಡಿದ್ದಾರೆ’ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.