ಮಂಗಳವಾರ, ಡಿಸೆಂಬರ್ 7, 2021
20 °C
ವಿಕ್ಟೋರಿಯಾ ಆಸ್ಪತ್ರೆ: ತುರ್ತು ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಟ್ರಾಮಾ ಕೇರ್: ಒಂದೇ ಹಾಸಿಗೆಯಲ್ಲಿ ಇಬ್ಬರಿಗೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್ ಕೇಂದ್ರದ ತುರ್ತು ಚಿಕಿತ್ಸೆ ವಿಭಾಗದಲ್ಲಿ ಹಾಸಿಗೆಗಳ ಕೊರತೆಯಿಂದ ಒಂದೇ ಹಾಸಿಗೆಯಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ಶುಕ್ರವಾರ ನಡೆದಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್) ಮುಖಂಡರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಆಗ್ರಹಿಸಿದರು. ವೈದ್ಯರು ಹಾಗೂ ಸಿಬ್ಬಂದಿ ಸೂಕ್ತವಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಗಳು ಈ ವೇಳೆ ಆರೋಪಿಸಿದರು. ವಿಜಯದಶಮಿ ಹಬ್ಬದಿಂದಾಗಿ ಕೆಲ ವೈದ್ಯರು ಹಾಗೂ ಸಿಬ್ಬಂದಿ ಗೈರಾಗಿದ್ದರು. ಇದರಿಂದಾಗಿ ರೋಗಿಗಳು ದಾಖಲಾತಿಗಾಗಿ ಆಸ್ಪತ್ರೆಯ ಹೊರಗಡೆಯೇ ಕೆಲವು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆಯ 80 ಐಸಿಯು ಹಾಸಿಗೆಗಳು ಭರ್ತಿಯಾಗಿದ್ದವು.

ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೆ.ಆರ್.ಎಸ್ ಪಕ್ಷದ ಮುಖಂಡರು, ಅಲ್ಲಿನ ವ್ಯವಸ್ಥೆನ್ನು ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರ ಮಾಡಿದರು. ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಕೆಲ ಕಾಲ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. 

ರೋಗಿಗಳ ನರಳಾಟ: ಆಸ್ಪತ್ರೆಯ ವಾರ್ಡ್‌ಗಳು ಹಾಗೂ ಆವರಣದಲ್ಲಿ ರೋಗಿಗಳು ನರಳಾಡುವ ದೃಶ್ಯ ಸಾಮಾನ್ಯವಾಗಿತ್ತು. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧೆಡೆಯಿಂದ ಬಂದ ಕೆಲ ರೋಗಿಗಳು ಐಸಿಯು ಹಾಸಿಗೆ ಸಿಗದೆಯೇ ಬೆರೆಡೆಗೆ ತೆರಳಿದರು. ದ್ರವರೂಪದ ಗ್ಲೂಕೋಸ್ ಬಾಟಲು ಸಂಪರ್ಕ ಹೊಂದಿದ್ದ ರೋಗಿಯೊಬ್ಬರು ಚಿಕಿತ್ಸೆಗೆ ಬೇರೆಡೆಗೆ ಕರೆದೊಯ್ಯುವಂತೆ ಆಸ್ಪತ್ರೆಯ ಆವರಣದಲ್ಲಿಯೇ ಗೋಗರೆಯುತ್ತಿದ್ದರು.

ಆಸ್ಪತ್ರೆಯಲ್ಲಿ ರೋಗಿಗಳನ್ನು ಕರೆದೊಯ್ಯಲು ಬೇಕಾದ ಗಾಲಿ ಕುರ್ಚಿ ಹಾಗೂ ಸ್ಟ್ರೆಚರ್‌ಗಳೂ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. 

‘ಗಾಲಿ ಕುರ್ಚಿ, ಸ್ಟ್ರೆಚರ್ ಆಸ್ಪತ್ರೆಯಲ್ಲಿ ಇಲ್ಲ ಎಂದು ರೋಗಿಯೊಬ್ಬರು ಕರೆ ಮಾಡಿ, ಅಳಲು ತೋಡಿಕೊಂಡರು. ಹೀಗಾಗಿ, ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ‌ಅಲ್ಲಿನ 80 ಐಸಿಯು ಹಾಸಿಗೆಗಳೂ ಭರ್ತಿಯಾಗಿದ್ದವು. ಶವ ಇರುವ ಹಾಸಿಗೆಯಲ್ಲಿಯೇ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮೂರು ಗಂಟೆ ಅವಧಿಯಲ್ಲಿ ಐವರು ಮೃತಪಟ್ಟರು’ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗರೆ ಬೇಸರ ವ್ಯಕ್ತಪಡಿಸಿದರು. 

‘ಇರುವ ವ್ಯವಸ್ಥೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಸಿಗೆಗಳು ಭರ್ತಿಯಾಗಿದ್ದರಿಂದ ಸ್ವಲ್ಪ ಸಮಸ್ಯೆಯಾಗಿತ್ತು. ರೋಗಿಗಳನ್ನು ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ. ಒಂದೇ ಹಾಸಿಗೆಯಲ್ಲಿ ಶವ ಮತ್ತು ರೋಗಿಯನ್ನು ಇರಿಸಿಲ್ಲ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

‘ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ’ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ. ಸಿ. ಆರ್. ಜಯಂತಿ ತಿಳಿಸಿದರು.

ಮಳೆಯಲ್ಲಿಯೇ ರೋಗಿಗಳ ಸಾಗಾಟ

ರೋಗಿಗಳನ್ನು ಕರೆದೊಯ್ಯಲು ನಿರ್ಮಿಸಲಾಗಿರುವ ಪಥಕ್ಕೆ ಚಾವಣಿ ನಿರ್ಮಿಸಿಲ್ಲ. ಇದರಿಂದಾಗಿ ಗಾಲಿ ಕುರ್ಚಿ ಹಾಗೂ ಸ್ಟ್ರೆಚರ್‌ ಮೂಲಕ ಮಳೆಯಲ್ಲಿಯೇ ರೋಗಿಯನ್ನು ಸಿಬ್ಬಂದಿ ಕರೆದೊಯ್ದರು. ಆಂಬುಲೆನ್ಸ್‌ಗಳಲ್ಲಿ ಕರೆತರಲಾದ ರೋಗಿಗಳನ್ನೂ ಮಳೆಯ ನಡುವೆಯೇ ಆಸ್ಪತ್ರೆಗೆ ಸಾಗಿಸಲಾಯಿತು. 

‘ಈ ರೀತಿ ಅವ್ಯವಸ್ಥೆಯಿಂದಲೇ ಸರ್ಕಾರಿ ಆಸ್ಪತ್ರೆಗಳು ಜನರಿಂದ ದೂರವಾಗುತ್ತಿವೆ. ಗಾಯಗೊಂಡವರಿಗೆ ಹಾಗೂ ಹೃದಯಾಘಾತವಾದವರಿಗೆ ನಿಗದಿತ ಅವಧಿಯೊಳಗೆ ಚಿಕಿತ್ಸೆ ನೀಡಿದಲ್ಲಿ ಮಾತ್ರ ಉಳಿಸಿಕೊಳ್ಳಲು ಸಾಧ್ಯ. ಸಾವು–ಬದುಕಿನ ನಡುವೆ ಹೋರಾಡುತ್ತಿರುವವರ ಜೀವ ಉಳಿಸುವ ಬದಲು, ಜೀವ ತೆಗೆಯುತ್ತಿರುವುದು ವಿಪರ್ಯಾಸ’ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು