ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಜಲಮಂಡಳಿಯಿಂದ ‘ತ್ರಿಬಲ್‌ ಆರ್‌’ ಜನಾಂದೋಲನ

ನಗರದಲ್ಲಿರುವ ಜಲಮೂಲಗಳ ಪುನಶ್ಚೇತನಕ್ಕೆ ಕೈಜೋಡಿಸಲು ನಾಗರಿಕರಿಗೆ ಮನವಿ
Published 10 ಏಪ್ರಿಲ್ 2024, 23:47 IST
Last Updated 10 ಏಪ್ರಿಲ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ನಗರಲ್ಲಿರುವ ಜಲಮೂಲಗಳ ಪುನಶ್ಚೇತನಕ್ಕೆ ‘ತ್ರಿಬಲ್‌ ಆರ್‌’ ಜನಾಂದೋಲನ ನಡೆಸಲು ಜಲಮಂಡಳಿ ಸಿಜ್ಜಾಗಿದ್ದು, ನಾಗರಿಕರು ಕೈಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ನಗರದಲ್ಲಿರುವ ಅರ್ಕಾವತಿ ನದಿ ಮತ್ತು ವೃಷಭಾವತಿ ನದಿ ಪಾತ್ರದ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಬುಧವಾರ ಮಾತನಾಡಿದರು.

‘ತ್ರಿಬಲ್ ಆರ್‌’ ಎಂದರೆ, ‘ರಿವೈವಲ್‌ ಆಫ್‌ ಅರ್ಕಾವತಿ ಮತ್ತು ವೃಷಭಾವತಿ (ಅರ್ಕಾವತಿ ಮತ್ತು ವೃಷಭಾವತಿ ಪುನಶ್ಚೇತನ), ರಿಚಾರ್ಜಿಂಗ್‌ ಆಫ್‌ ರೈನ್‌ ವಾಟರ್‌ (ಮಳೆನೀರು ಮರುಪೂರಣ) ಮತ್ತು ರಿಜ್ಯೂವಿನೇಷನ್‌ ಆಫ್‌ 185 ಲೇಕ್ಸ್‌ (185 ಕೆರೆಗಳ ಪುನರುಜ್ಜೀವನ)’ ಎಂದು ಅವರು ವಿವರಿಸಿದರು.

ನದಿ ಪುನಶ್ಚೇತನ: ‘ಅರ್ಕಾವತಿ ನದಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರಿಕರ ಪಾತ್ರವೂ ಬಹಳ ಮುಖ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪುನರುಜ್ಜೀವನ ಕಾರ್ಯದಲ್ಲಿ ಕೈಜೋಡಿಸಬೇಕು’ ಎಂದು ರಾಮ್‌ಪ್ರಸಾತ್‌ ಹೇಳಿದರು.

185 ಕೆರೆಗಳ ಪುನಶ್ಚೇತನ: ನಗರದಲ್ಲಿರುವಂತಹ ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 15ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವಂತಹ 185 ಕೆರೆಗಳನ್ನೂ ಪುನಃಶ್ಚೇತನಗೊಳಿಸುವುದು ಜಲಮಂಡಳಿಯ ಗುರಿಯಾಗಿದೆ. ಅವುಗಳಲ್ಲಿನ ಹೂಳು ತೆಗೆಯುವುದು, ಗುಣಮಟ್ಟದ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಹೆಸರಘಟ್ಟ ಕೆರೆಗೆ ಭೇಟಿ: ನಗರಕ್ಕೆ ಮೊದಲ ಬಾರಿಗೆ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಒದಗಿಸಿದ್ದ ಹೆಸರಘಟ್ಟ ಕೆರೆಗೆ ಭೇಟಿ ನೀಡಿದ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ಅವರು, ನೀರಿನ ಲಭ್ಯತೆ, ಪೂರೈಕೆ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಹೆಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ಅಡಿಗಳಷ್ಟು ನೀರಿದೆ. ಈ ಪ್ರದೇಶದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ಉತ್ತಮ ನೀರಿದೆ. ಜಲಮಂಡಳಿಯು ಹೆಸರಘಟ್ಟ ನೀರು ಸರಬರಾಜು ಕೇಂದ್ರದ ಮೂಲಕ ನಗರಕ್ಕೆ ಪ್ರತಿ ದಿನ 10 ಎಂಎಲ್‌ಡಿ ನೀರು ಸರಬರಾಜು ಮಾಡಬಹುದಾಗಿದೆ. ಮೇ ತಿಂಗಳಲ್ಲಿ ನೀರಿನ ಕೊರತೆ ಕಂಡು ಬಂದಲ್ಲಿ ಜಲಮಂಡಳಿಯ ನೀರು ಸರಬರಾಜು ವ್ಯವಸ್ಥೆಯನ್ನು ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.

ನೀರು ಶುದ್ಧೀಕರಿಸಲು ಹೆಸರಘಟ್ಟ ಜಲಮಂಡಳಿ ನೀರು ಸರಬರಾಜು ಕೇಂದ್ರವನ್ನು ಸಜ್ಜುಗೊಳಿಸಬೇಕು. ಇಲ್ಲಿಂದ ಎಲ್ಲಿಯವರೆಗೆ ಪೈಪ್‌ಲೈನ್‌ ಇದೆಯೋ ಅಲ್ಲಿಯವರೆಗೆ ನೀರು ಕೊಂಡೊಯ್ಯಲು ಮಾರ್ಗ ಸಿದ್ಧಪಡಿಸಬೇಕು. ಉಳಿದ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ಹೆರಸಘಟ್ಟ ಕೆರೆಯ ನೀರು ಸರಬರಾಜು ಮಾಡಬೇಕು ಎಂದು ಹೇಳಿದರು.

ಮೇ ತಿಂಗಳಿನಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದರೆ ಅದಕ್ಕೆ ಸಿದ್ಧವಾಗಿ, ಹೆಸರಘಟ್ಟ ಸೇರಿದಂತೆ ವಿವಿಧ ಕೆರೆಗಳಿಂದ ನೀರು ಪೂರೈಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ಕಾವೇರಿ ಕಾರ್ಯಾಚರಣೆ ರಾಜಶೇಖರ್‌), ಮುಖ್ಯ ಎಂಜಿನಿಯರ್‌ಗಳಾದ ಗಂಗಾಧರ್‌ ಮತ್ತು ದೇವರಾಜ್‌, ಅಧೀಕ್ಷಕ ಎಂಜಿನಿಯರ್‌ಗಳಾದ ನಾರಾಯಣಸ್ವಾಮಿ, ಬಿಂದು ಉಪಸ್ಥಿತರಿದ್ದರು.

‘ಹೆಮ್ಮೆಯ ಬೆಂಗಳೂರು ನಾಗರಿಕ’

ಮಳೆ ನೀರು ಸಂಗ್ರಹ ಹಾಗೂ ಅದರ ಮರುಪೂರಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರನ್ನು ಸಂಗ್ರಹಿಸುವ ವ್ಯವಸ್ಥೆ ಹೊಂದಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಇಂತಹ ವ್ಯವಸ್ಥೆ ಇಲ್ಲದ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ‘ಹೆಮ್ಮೆಯ ಬೆಂಗಳೂರು ನಾಗರಿಕ’ ಅಭಿಯಾನ ನಡೆಸಲಾಗುವುದು  ಎಂದು ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು. ಈ ಅಭಿಯಾನದ ಮೂಲಕ ಸಮರ್ಪಕವಾಗಿ ಮಳೆ ನೀರು ಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿಯ ವತಿಯಿಂದ ‘ನಮ್ಮ ಹೆಮ್ಮೆಯ ಬೆಂಗಳೂರು ನಾಗರಿಕ’ ಎಂಬ ಭಿತ್ತಿಪತ್ರ ಅಂಟಿಸಲಾಗುವುದು. ನೀರಿನ ಬಿಲ್‌ನಲ್ಲೂ ಇದನ್ನು ನಮೂದಿಸಲಾಗುವುದು ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT