ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತೆಯನ್ನೇ ಕೊಲ್ಲಿಸಿದ ಸೊಸೆ; ಬಿಎಂಟಿಸಿ ಚಾಲಕ ಬಂಧನ

ಹಳಿ ಮೇಲೆ ಮುಂಡ, ಲಾರಿನಲ್ಲಿ ರುಂಡ ಪತ್ತೆಯಾಗಿದ್ದ ಪ್ರಕರಣ * ರೈಲ್ವೆ ಪೊಲೀಸರ ತನಿಖೆ
Last Updated 26 ಜುಲೈ 2021, 21:13 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಬಳಿ ರೈಲು ಹಳಿ ಮೇಲೆ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಲಾರಿಯಲ್ಲಿ ರುಂಡ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ರೈಲ್ವೆ ಪೊಲೀಸರು, ನಿಂಗಮ್ಮ (70) ಎಂಬುವರನ್ನು ಕೊಂದಿರುವ ಆರೋಪದಡಿ ಬಿಎಂಟಿಸಿ ಚಾಲಕ ಎಂ.ಬಿ. ಬಾಲಚಂದ್ರ (42) ಎಂಬಾತನನ್ನು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದ ನಿಂಗಮ್ಮ ಅವರನ್ನು ಕೊಂದು ಸಾಕ್ಷಿ ನಾಶ ಮಾಡಲು ರುಂಡವನ್ನು ಲಾರಿಯಲ್ಲಿ ಹಾಕಿದ್ದ ಪ್ರಕರಣದಲ್ಲಿ ಬಾಲಚಂದ್ರನನ್ನು ಬಂಧಿಸಲಾಗಿದೆ. ಮೃತ ನಿಂಗಮ್ಮ ಅವರ ಸೊಸೆಯೂ ಆಗಿರುವ ಪ್ರಮುಖ ಆರೋಪಿ ಲತಾ ತಲೆಮರೆಸಿಕೊಂಡಿದ್ದಾಳೆ’ ಎಂದು ರೈಲ್ವೆ ಎಡಿಜಿಪಿ ಭಾಸ್ಕರ್‌ ರಾವ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ವ್ಯಾಪ್ತಿಯ ನಿಡವಂದ ಮತ್ತು ಹಿರೇಹಳ್ಳಿ ನಿಲ್ದಾಣಗಳ ನಡುವಿನ ಹಳಿ ಮೇಲೆ ಜುಲೈ 20ರಂದು ಮುಂಡ ಸಿಕ್ಕಿತ್ತು. ಗುರುತು ಪತ್ತೆಯಾಗಿರಲಿಲ್ಲ. ಮುಂಡದ ಫೋಟೊಗಳನ್ನು ಎಲ್ಲ ಠಾಣೆಗಳಿಗೆ ಕಳುಹಿಸಲಾಗಿತ್ತು. ಇದರ ನಡುವೆಯೇ ನಿಂಗಮ್ಮ ಅವರ ಮಗ ಸತೀಶ್, ತಾಯಿ ಕಾಣೆಯಾದ ಬಗ್ಗೆ ತುಮಕೂರು ಠಾಣೆಗೆ ಜುಲೈ 23ರಂದು ದೂರು ನೀಡಿದ್ದರು. ಹಳಿ ಮೇಲೆ ವೃದ್ಧೆಯೊಬ್ಬರ ಮುಂಡ ಸಿಕ್ಕಿರುವ ಕುರಿತು ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಮಗ ಸತೀಶ್, ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ನೋಡಿದ್ದರು. ವೃದ್ಧೆಯ ಎಡಗೈಯಲ್ಲಿದ್ದ ಹಚ್ಚೆಗಳನ್ನು ಗುರುತಿಸಿದ್ದ ಮಗ, ನಿಂಗಮ್ಮ ಅವರದ್ದೇ ಮುಂಡವೆಂದು ಹೇಳಿದ್ದರು’ ಎಂದೂ ತಿಳಿಸಿದರು.

ರುಂಡ ಸಿಗುತ್ತಿದ್ದಂತೆ ತನಿಖೆ ಚುರುಕು; ‘ಇದೊಂದು ಅಸ್ವಾಭಾವಿಕ ಸಾವೆಂದು ಆರಂಭದಲ್ಲಿ ತಿಳಿಯಲಾಗಿತ್ತು. ಆದರೆ, ತಮಿಳುನಾಡಿನಿಂದ ಬೆಂಗಳೂರು ಮಾರ್ಗವಾಗಿ ಇಳಕಲ್‌ಗೆ ಗ್ರಾನೈಟ್‌ ಹೊತ್ತೊಯ್ದಿದ್ದ ಲಾರಿಯಲ್ಲಿ ರುಂಡ ಪತ್ತೆಯಾಗಿತ್ತು. ರುಂಡದ ಫೋಟೊ ಗಮಸಿದಾಗ, ನಿಂಗಮ್ಮ ಅವರದ್ದು ಎಂಬುದು ತಿಳಿಯಿತು. ಕೊಲೆ ಎಂಬುದು ಖಾತ್ರಿಯಾಗಿ ತನಿಖೆ ಚುರುಕುಗೊಳಿಸಲಾಗಿತ್ತು’ ಎಂದೂ ಹೇಳಿದರು.

ಪಂಚಾಯಿತಿ ಸೇರಿಸಿ ಪರಿಹಾರ ಪಡೆದಿದ್ದ ವೃದ್ಧೆ; ‘ನಿಂಗಮ್ಮ ಅವರಿಗೆ ಇಬ್ಬರು ಪುತ್ರರು. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಪುತ್ರ ತೀರಿಕೊಂಡಿದ್ದು, ಅವರ ಪತ್ನಿಯೇ ಆರೋಪಿ ಲತಾ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತಿ ತೀರಿಕೊಂಡ ನಂತರ, ಅತ್ತೆಯನ್ನು ಚೆನ್ನಾಗಿ ನೋಡಿಕೊಂಡಿರಲಿಲ್ಲ. ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಸೇರಿಸಿದ್ದ ನಿಂಗಮ್ಮ, ಜೀವನಾಂಶ ಕೊಡಿಸುವಂತೆ ಕೋರಿದ್ದರು. ‘ಅತ್ತೆಗೆ ₹ 2 ಲಕ್ಷ ಪರಿಹಾರ ಕೊಡಬೇಕು’ ಎಂಬುದಾಗಿ ಹಿರಿಯರು ಸೊಸೆಗೆ ತಾಕೀತು ಮಾಡಿದ್ದರು. ಆರಂಭದಲ್ಲಿ ₹ 50 ಸಾವಿರ ಮಾತ್ರ ಕೊಟ್ಟಿದ್ದಳು’ ಎಂದೂ ತಿಳಿಸಿದರು.

‘ತುಮಕೂರಿನ ಬಾಲಚಂದ್ರ, ಬಿಎಂಟಿಸಿ ಬಸ್ ಚಾಲಕ. ಆತನಿಗೆ ಲತಾ ಪರಿಚಯವಾಗಿ, ಸಲುಗೆ ಬೆಳೆದಿತ್ತು. ಈ ಸಂಗತಿ ತಿಳಿದಿದ್ದ ನಿಂಗಮ್ಮ, ಊರಿನಲ್ಲೆಲ್ಲ ಹೇಳಿಕೊಂಡು ಓಡಾಡುತ್ತಿದ್ದರು. ಪರಿಹಾರದ ಬಾಕಿ ಹಣ ₹1.50 ಲಕ್ಷ ನೀಡುವಂತೆ ಲತಾಳನ್ನು ಒತ್ತಾಯಿಸಲಾರಂಭಿಸಿದ್ದರು. ಕೋಪಗೊಂಡ ಲತಾ, ಬಾಲಚಂದ್ರ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು’ ಎಂದೂ ವಿವರಿಸಿದರು.

ಹಣ ಕೊಡುವುದಾಗಿ ಕರೆಸಿ ಕೊಲೆ; ‘ಪರಿಹಾರದ ಮೊತ್ತ ಕೊಡುವುದಾಗಿ ಹೇಳಿದ್ದ ಲತಾ, ನಿಂಗಮ್ಮ ಅವರನ್ನು ಜುಲೈ 19ರಂದು ತುಮಕೂರಿನಲ್ಲಿರುವ ಬಾಲಚಂದ್ರ ಮನೆಗೆ ಕಳುಹಿಸಿದ್ದಳು. ನಂತರ, ತಾನು ತವರು ಮನೆಯಾದ ಮಳವಳ್ಳಿಗೆ ಹೋಗಿದ್ದಳು. ಹಣ ಪಡೆಯಲು ಮನೆಗೆ ಬಂದ ವೃದ್ಧೆ ಮೇಲೆ ಹಲ್ಲೆ ಮಾಡಿದ್ದ ಬಾಲಚಂದ್ರ, ಹಗ್ಗದಿಂದ ಕತ್ತು ಬಿಗಿದು ಕೊಂದಿದ್ದ. ಮೃತದೇಹವನ್ನು ರೈಲು ಹಳಿ ಮೇಲೆ ಎಸೆದಿದ್ದ. ರೈಲು ಹರಿದು ರುಂಡ ಬೇರ್ಪಟ್ಟಿತ್ತು. ರುಂಡದಿಂದ ಗುರುತು ಸಿಗಬಹುದೆಂದು ತಿಳಿದ ಆರೋಪಿ, ಅದೇ ರುಂಡವನ್ನು ಎತ್ತಿಕೊಂಡು ತುಮಕೂರು ಟೋಲ್‌ಗೇಟ್‌ ಬಳಿ ಹೋಗಿ ಲಾರಿಯೊಳಗೆ ಎಸೆದಿದ್ದ. ಅದೇ ಲಾರಿ ಇಳಕಲ್‌ಗೆ ಹೋಗಿತ್ತು’ ಎಂದೂ ಭಾಸ್ಕರ್‌ ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT