ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರ ಸ್ಫೋಟ: ರಿಮ್‌ನಲ್ಲೇ ಅತಿ ವೇಗವಾಗಿ ಕಾರು ಚಾಲನೆ, ಚಾಲಕನ ವಿರುದ್ಧ ಎಫ್‌ಐಆರ್

Last Updated 26 ಮಾರ್ಚ್ 2023, 6:34 IST
ಅಕ್ಷರ ಗಾತ್ರ

ಬೆಂಗಳೂರು: ಚಕ್ರ ಸ್ಫೋಟಗೊಂಡರೂ ರಿಮ್‌ನಲ್ಲೇ ಅತಿ ವೇಗವಾಗಿ ಕಾರು ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಕುತ್ತು ತರಲು ಯತ್ನಿಸಿದ್ದ ಆರೋಪದಡಿ ಚಾಲಕ ನಿತಿನ್ ಯಾದವ್ (26) ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸ್ಥಳೀಯ ನಿವಾಸಿ ನಿತಿನ್, ಮದ್ಯ ಕುಡಿದು ಕಾರು ಚಲಾಯಿಸುತ್ತಿದ್ದ. ಕಾರಿನಲ್ಲಿದ್ದ ಈತನ ಸ್ನೇಹಿತರೂ ಮದ್ಯ ಕುಡಿದಿದ್ದರು. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪದಡಿ ನಿತಿನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಹಾಗೂ ಚಾಲನಾ ಪರವಾನಗಿ (ಡಿ.ಎಲ್) ಜಪ್ತಿ ಮಾಡಲಾಗಿದೆ’ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.

‘ನಿತಿನ್ ಹಾಗೂ ಸ್ನೇಹಿತರು ಶುಕ್ರವಾರ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದರು. ಶನಿವಾರ ನಸುಕಿನಲ್ಲಿ 3 ಗಂಟೆ ಸುಮಾರಿಗೆ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ಕಾರಿನ ಮುಂಭಾಗದ ಎಡಬದಿಯ ಚಕ್ರ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಟೈರ್ ಸಂಪೂರ್ಣ ಸುಟ್ಟಿತ್ತು. ರಿಮ್ ಮಾತ್ರ ಉಳಿದಿತ್ತು.’

‘ಕಾರು ನಿಲ್ಲಿಸದ ನಿತಿನ್, ರಿಮ್‌ನಲ್ಲೇ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು 2 ಕಿ.ಮೀ.ವರೆಗೂ ಸಾಗಿದ್ದ. ರಸ್ತೆ ಅಕ್ಕ– ಪಕ್ಕದಲ್ಲಿದ್ದ ಜನ ಕಾರಿನ ವೇಗ ಕಂಡು ಆತಂಕಗೊಂಡಿದ್ದರು. ಠಾಣೆಗೂ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕಾರು ಬೆನ್ನಟ್ಟಿ ತಡೆದಿದ್ದರು. ಬಳಿಕ ಸಂಚಾರ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮದ್ಯದ ಅಮಲಿನಲ್ಲಿದ್ದಿದ್ದರಿಂದ ಸ್ಫೋಟದ ಸಂಗತಿ ಗಮನಕ್ಕೆ ಬಂದಿರಲಿಲ್ಲವೆಂದು ಚಾಲಕ ನಿತಿನ್ ಹೇಳಿಕೆ ನೀಡಿದ್ದಾನೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT