ಶುಕ್ರವಾರ, ಜನವರಿ 24, 2020
27 °C
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

ಕೊಳೆತ ಸ್ಥಿತಿಯಲ್ಲಿ ನಂಜುಂಡನ್‌ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನುವಾದರೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಾಂಖ್ಯಿಕ ವಿಭಾಗದ ಪ್ರಾಧ್ಯಾಪಕ ಜಿ. ನಂಜುಂಡನ್ (58) ಅವರ ಮೃತದೇಹ ನಾಗದೇವನಹಳ್ಳಿಯಲ್ಲಿರುವ ಸ್ವಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.

ನಾಲ್ಕು ದಿನಗಳಿಂದ ನಂಜುಂಡನ್ ಅವರು ವಿಭಾಗಕ್ಕೆ ಹೋಗಿರಲಿಲ್ಲ. ಅವರನ್ನು ಕರೆಯಲೆಂದು ವಿಭಾಗದ ಸಹಾಯಕ ಮನೆಗೆ ಹೋಗಿದ್ದರು. ಬಾಗಿಲು ತೆಗೆದಿರಲಿಲ್ಲ. ಅನುಮಾನಗೊಂಡ ಸಹಾಯಕ, ಚೆನ್ನೈಯಲ್ಲಿದ್ದ ನಂಜುಂಡನ್‌ ಅವರ ಪತ್ನಿಗೆ ಮಾಹಿತಿ ನೀಡಿದ್ದರು.

ಶನಿವಾರ ಬೆಳಿಗ್ಗೆ ಪತ್ನಿ ಹಾಗೂ ಮಗ ಸಹ ಮನೆಗೆ ಬಂದಿದ್ದರು. ಆಗಲೂ ಬಾಗಿಲು ತೆರೆಯದಿದ್ದಾಗ ಕೆಂಗೇರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡಿದೆ.

‘ಪತ್ನಿ ಹಾಗೂ ಮಗ ಚೆನ್ನೈಯಲ್ಲಿ ನೆಲೆಸಿದ್ದರು. ನಂಜುಂಡನ್ ಅವರು ಒಬ್ಬರೇ ನಾಗದೇವನಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಇತ್ತೀಚೆಗೆ ವಿಭಾಗದ ಮುಖ್ಯಸ್ಥರು ಕೆಲಸ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದರು.  ಹೀಗಾಗಿ ನಂಜುಂಡನ್ ಅವರಿಗೆ ವಿಭಾಗದ ಉಸ್ತುವಾರಿ ನೀಡಲಾಗಿತ್ತು. ವಿಭಾಗದ ಕೆಲಸಗಳು ಬಾಕಿ ಇದ್ದಿದ್ದರಿಂದಲೇ ಅವರನ್ನು ಕರೆಯಲೆಂದು ಸಹಾಯಕ ಮನೆಗೆ ಹೋಗಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಹೃದಯಾಘಾತದಿಂದ ನಂಜುಂಡನ್ ಅವರು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ’ ಎಂದು ಮೂಲಗಳು ಹೇಳಿವೆ.

ತಮಿಳು ಲೇಖಕರೂ ಆಗಿದ್ದ ನಂಜುಂಡನ್ 2011ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಯು.ಆರ್. ಅನಂತಮೂರ್ತಿಯವರ ಕೃತಿಗಳೂ ಸೇರಿದಂತೆ ಅನೇಕ ಕನ್ನಡ ಪುಸ್ತಕಗಳನ್ನು ತಮಿಳಿಗೆ ಅನುವಾದಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು