ಬುಧವಾರ, ಜುಲೈ 28, 2021
21 °C
ಎದ್ದು ಕಂಡ ಬಸ್‌ಗಳ ಕೊರತೆ * ಮೆಟ್ರೊ ರೈಲು ಬಳಕೆಗೂ ಉತ್ಸಾಹ

ಬೆಂಗಳೂರು: ನಗರದಲ್ಲಿ ಬಸ್‌–ರೈಲುಗಳ ಸದ್ದು ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎರಡು ತಿಂಗಳ ಬಳಿಕ ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಸೋಮವಾರದಿಂದ ಮರುಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದರೆ, ಎರಡೂ ಮಾರ್ಗಗಳಲ್ಲಿ ಮೆಟ್ರೊ ರೈಲುಗಳು ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ಸಂಚರಿಸಿದವು. 13 ತಾಸಿಗೂ ಹೆಚ್ಚು ಹೊತ್ತು ಬಸ್‌ ಸೇವೆ ಲಭ್ಯವಿತ್ತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ನಿಲ್ದಾಣಗಳಲ್ಲಿ ಪರ ಊರುಗಳಿಂದ ಬಂದಿಳಿದ ಪ್ರಯಾಣಿಕರು, ಕಚೇರಿ ಮತ್ತಿತರ ಕೆಲಸಗಳಿಗೆ ತೆರಳುವವರು, ಬಸ್ ಅಥವಾ ಮೆಟ್ರೊ ರೈಲು ಸೇವೆಗಳನ್ನು ಅವಲಂಬಿಸಿದರು. ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲಾಯಿತು.

ಒಟ್ಟು ಆಸನಗಳಲ್ಲಿ ಶೇ 50ರಷ್ಟು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಹುತೇಕ ಬಸ್‌ಗಳಲ್ಲಿ ಎಲ್ಲ ಸೀಟುಗಳು ಭರ್ತಿ ಆಗಿದ್ದವು. ನಿಂತು ಪ್ರಯಾಣಿಸಲು ಅವಕಾಶವಿರಲಿಲ್ಲ. ಆದರೆ, ಕೆಲವು ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿದ್ದು, ಪ್ರಯಾಣಿಕರು ಹೆಚ್ಚಾಗಿದ್ದ ಕಾರಣ ಕೆಲವರು ನಿಂತು ಕೂಡ ಪ್ರಯಾಣಿಸಿದರು.

ಟೋಕನ್‌ ನೀಡದ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇರಲಿಲ್ಲ. ಸ್ಮಾರ್ಟ್‌ಕಾರ್ಡ್‌ಗೆ ₹50, ಅದರಲ್ಲಿ ಕನಿಷ್ಠ ಮೊತ್ತ ಉಳಿಸಬೇಕೆಂದರೆ ₹50 ಮತ್ತು ಸಂಚಾರಕ್ಕೆ ₹100 ರಿಚಾರ್ಜ್‌ ಮಾಡಿಸಬೇಕಾಗಿದ್ದರಿಂದ ಒಂದು ಬಾರಿ ಮಾತ್ರ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಬೇಕೆಂದಿದ್ದವರು, ಆಟೊಗಳ ಮೊರೆ ಹೋದರು.

ಪರಿಶೀಲನೆ:

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಅವರು, ಎಂ.ಜಿ. ರಸ್ತೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಅಲ್ಲಿಂದ  ವಿಧಾನಸೌಧವರೆಗೆ ಮೆಟ್ರೊ ರೈಲಿನಲ್ಲಿಯೇ ಪ್ರಯಾಣಿಸಿದರು. ಈ ವೇಳೆ ಸಾಮಾನ್ಯ ಪ್ರಯಾಣಿಕರ ಅಭಿಪ್ರಾಯ, ಸಲಹೆ ಕೇಳಿದರು. ನಿಗಮದ ನಿರ್ದೇಶಕ ಎನ್.ಎಂ. ಧೋಕೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಮತ್ತಿತರ ಅಧಿಕಾರಿಗಳು ಇದ್ದರು.

ಹೋಟೆಲ್‌ಗಳಲ್ಲೂ ಸೇವೆ ಆರಂಭ:

ನಗರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಸೇವೆ ಪುನರಾರಂಭವಾಯಿತು. ದರ್ಶಿನಿಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಸೇವೆ ಲಭ್ಯವಿತ್ತು. ಸಂಜೆಯ ನಂತರ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. 

‘ನಿರೀಕ್ಷಿಸಿದಷ್ಟು ಗ್ರಾಹಕರು ಮೊದಲ ದಿನ ಬಂದಿಲ್ಲ. ಮುಂದೆ ಪರಿಸ್ಥಿತಿ ಸುಧಾರಿಸಬಹುದು. ಗ್ರಾಹಕರ ಸಂಖ್ಯೆ ಹೆಚ್ಚಬಹುದು’ ಎಂದು ಹೋಟೆಲೊಂದರ ಮಾಲೀಕರು ಹೇಳಿದರು.

ಚಿನ್ನಾಭರಣ ಮಳಿಗೆಗಳೂ ಸೋಮವಾರದಿಂದ ವ್ಯಾಪಾರ–ವಹಿವಾಟವನ್ನು ಪುನರಾರಂಭಿಸಿದವು.

ಅಂಕಿ–ಅಂಶ

24,602: ಮೆಟ್ರೊ ರೈಲಿನಲ್ಲಿ ಸೋಮವಾರ ಪ್ರಯಾಣಿಸಿದವರು

160 ಬಾರಿ: ರೈಲುಗಳ ಸಂಚರಿಸಿದ ಸಂಖ್ಯೆ

₹10 ಲಕ್ಷ: ನಿಗಮಕ್ಕೆ ಹರಿದು ಬಂದ ಆದಾಯ

3,154: ಸೋಮವಾರ ಸಂಚರಿಸಿದ ಬಿಎಂಟಿಸಿ ಬಸ್‌ಗಳು

ಶುರುವಾಯಿತು ದಟ್ಟಣೆ ಸಮಸ್ಯೆ

ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆಯೇ, ರಾಜಧಾನಿಯು ಎಂದಿನಂತೆ ಸಂಚಾರ ದಟ್ಟಣೆ ಸಮಸ್ಯೆಗೆ ಸಾಕ್ಷಿಯಾಯಿತು.

ರಾಜ್ಯ ಸಾರಿಗೆ ಮತ್ತು ಬಿಎಂಟಿಸಿ ಬಸ್‌ ಸಂಚಾರ ಆರಂಭವಾಗುತ್ತಿದ್ದಂತೆ ಮೆಜೆಸ್ಟಿಕ್‌ನಲ್ಲಿ ವಾಹನಗಳ ದಟ್ಟಣೆ ಉಂಟಾಯಿತು. ಪರ ಊರುಗಳಿಂದ ಮೆಜೆಸ್ಟಿಕ್‌ಗೆ ಬಂದಿಳಿದ ಅನೇಕರು ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದರಿಂದ ದಟ್ಟಣೆ ಉಂಟಾಗಿತ್ತು. ಮೆಜೆಸ್ಟಿಕ್‌ ಸುತ್ತ–ಮುತ್ತ ಅಲ್ಲದೆ, ಪ್ರಮುಖ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿತ್ತು.

2000 ಬಸ್‌ಗಳ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದ ಬಿಎಂಟಿಸಿ, ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ 3,000ಕ್ಕೂ ಹೆಚ್ಚು ಬಸ್‌ಗಳನ್ನು ರಸ್ತೆಗಿಳಿಸಿತು. ಬೆಳಿಗ್ಗೆ ಮತ್ತು ಸಂಜೆಯ ವೇಳೆ ಬಸ್‌ಗಳ ಕೊರತೆ ಕಾಡಿತು. ಪ್ರಯಾಣಿಕರು ಬಸ್‌ಗಾಗಿ ತಾಸುಗಟ್ಟಲೇ ಕಾಯಬೇಕಾಯಿತು.

‘ಮಂಗಳವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ, ಬಸ್‌ಗಳ ಸಂಖ್ಯೆಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು’ ಎಂದು ಬಿಎಂಟಿಸಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು