ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡುಗೆ ಸರಿಯಿಲ್ಲವೆಂದು ಗಲಾಟೆ: ಬೋರ್‌ವೆಲ್‌ ಕೊರೆಯುವ ಲಾರಿ ಚಾಲಕನ ಕೊಲೆ

ಕೃತ್ಯ ಎಸಗಿದ ಆರೋಪದ ಅಡಿ ಐವರ ಬಂಧನ
Published 12 ಆಗಸ್ಟ್ 2024, 16:09 IST
Last Updated 12 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ವಿಚಾರಕ್ಕೆ ಪದೇ ಪದೇ ನಿಂದನೆ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಲಾರಿ ಚಾಲಕನನ್ನು ಜತೆಗಿದ್ದವರೇ ಕಬ್ಬಿಣದ ರಾಡ್‌ ಹಾಗೂ ಸುತ್ತಿಗೆಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದು, ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುಚ್ಚಿಯ ಚಾಲಕ ಸುರೇಶ್‌(47) ಕೊಲೆಯಾದವರು.

ಕೃತ್ಯ ಎಸಗಿದ ಆರೋಪದ ಅಡಿ ಮಧ್ಯಪ್ರದೇಶದ ಸಹದೇವ್(32), ಸುನೀಲ್ ನಾವ್ಡೆ(30), ದಿನೇಶ್(31) ಮತ್ತು ಅಲಕೇಶ್(30), ಸಂಜಯ್(28) ಹಾಗೂ ರಾಜೇಶ್(35) ಎಂಬುವವರನ್ನು ಬಂಧಿಸಲಾಗಿದೆ.

ಕೊಲೆಯಾದ ಸುರೇಶ್ ಅವರ ಸಂಬಂಧಿ ರವಿಚಂದ್ರನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಅಡುಗೆ ಸರಿಯಾಗಿ ಮಾಡುವುದಿಲ್ಲ. ಅಲ್ಲದೇ ಕೆಲಸವನ್ನೂ ಜವಾಬ್ದಾರಿಯಿಂದ ನಿರ್ವಹಿಸಿಲ್ಲ’ ಎಂದು ತಮಿಳಿನಲ್ಲಿ ನಿಂದಿಸುತ್ತಿದ್ದರು ಎಂಬ ವಿಚಾರಕ್ಕೆ ಸುರೇಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಪೊಲೀಸ್‌ ಮೂಲಗಳು ಹೇಳಿವೆ.

ಅಮೃತ ಬೋರ್‌ವೆಲ್‌ ಕಲ್ಕಿ ಎಂಟರ್‌ಪ್ರೈಸಸ್‌ನಲ್ಲಿ ಲಾರಿ ಚಾಲಕರಾಗಿ ಸುರೇಶ್ ಹಾಗೂ ಡ್ರಿಲ್ಲರ್ ಆಗಿ ರವಿಚಂದ್ರನ್ ಅವರು ಕೆಲಸ ಮಾಡುತ್ತಿದ್ದರು. ಭಾನುವಾರ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನ ನಿವೇಶನವೊಂದರಲ್ಲಿ ಬೋರ್‌ವೆಲ್ ಕೊರೆಯಲು ಆರೋಪಿಗಳು, ಸುರೇಶ್ ಹಾಗೂ ದೂರುದಾರ ಬಂದಿದ್ದರು. ಭಾನುವಾರ ಕೆಲಸ ಸ್ಥಗಿತಗೊಳಿಸಿ ನಿವೇಶನದ ಶೆಡ್‌ನಲ್ಲಿ ಎಲ್ಲರೂ ತಂಗಿದ್ದರು. ರಾತ್ರಿ ಆರೋಪಿಗಳ ಪೈಕಿ ಸಹದೇವ್ ಅಡುಗೆ ಮಾಡುತ್ತಿದ್ದ. ಆಗ ಸುರೇಶ್, ‘ನಿನಗೆ ಸರಿಯಾಗಿ ಅಡುಗೆ ಮಾಡುವುದಕ್ಕೆ ಬರುವುದಿಲ್ಲ’ ಎಂದು ನಿಂದಿಸಿದ್ದರು ಎನ್ನಲಾಗಿದೆ.

ಗಲಾಟೆ ವಿಕೋಪಕ್ಕೆ ಹೋದಾಗ, ಉಳಿದವರು ಬಿಡಿಸಿದ್ದರು. ಎಲ್ಲರೂ ಒಟ್ಟಿಗೆ ಊಟ ಮಾಡಿ, ಶೆಡ್‌ನಲ್ಲೇ ಮಲಗಿದ್ದರು. ನಂತರ, ಸಂಚು ರೂಪಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

‘ತಡರಾತ್ರಿ 11.30ರ ಸುಮಾರಿಗೆ ಸಹದೇವ್ ಹಾಗೂ ಇತರರು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಸುರೇಶ್‌ನ ಮುಖ, ತಲೆ ಹಾಗೂ ದೇಹದ ಇತರೆ ಭಾಗಕ್ಕೆ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT