ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನನಗಳ ಸುತ್ತ ಬೇಲಿ ಎದ್ದಿದೆ; ಒತ್ತುವರಿಗೆ ತಡೆ ಬಿದ್ದಿದೆ!

Last Updated 9 ಆಗಸ್ಟ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ಕೆರೆಗಳು, ಅರಣ್ಯ ಪ್ರದೇಶಗಳೆಲ್ಲವೂ ಒತ್ತುವರಿ ಸಂಚಿಗೆ ಬಲಿಯಾಗುತ್ತಿವೆ ಎಂಬ ದೂರುಗಳು ಹೆಚ್ಚಾಗಿರುವ ಮಧ್ಯೆಯೇ ಅರಣ್ಯ ಇಲಾಖೆ ಸದ್ದಿಲ್ಲದೆ ಕಾನನಗಳಿಗೆ ಬೇಲಿ ಹಾಕುವ ಕೆಲಸ ಮಾಡುತ್ತಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗ ಒಟ್ಟು 7,235 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಈಗಾಗಲೇ ಶೇ 60ರಷ್ಟು ಅರಣ್ಯ ಪ್ರದೇಶಕ್ಕೆ ಬೇಲಿ ಹಾಕಲಾಗಿದೆ. ಕೆಲವು ಪ್ರದೇಶಗಳು ವ್ಯಾಜ್ಯದಲ್ಲಿರುವುದರಿಂದ ಅವುಗಳಿಗೆ ಬೇಲಿ ಹಾಕಲು ಸಾಧ್ಯವಾಗಿಲ್ಲ ಎನ್ನುವುದು ಅರಣ್ಯ ಇಲಾಖೆಯ ಅಧಿಕಾರಿಗಳ ವಿವರಣೆ.

‘ಅರಣ್ಯ ಪ್ರದೇಶಗಳಿಗೆ ಬೇಲಿ ಹಾಕಿ ಸಂರಕ್ಷಿಸುವುದು ನಮ್ಮ ಪ್ರಮುಖ ಕೆಲಸ. ಹಣ ಬಿಡುಗಡೆಗೆ ಅನುಗುಣವಾಗಿ ಬೇಲಿ ನಿರ್ಮಾಣ ಕೆಲಸ ನಡೆಯುತ್ತಿದೆ. ಒತ್ತುವರಿ ಅಪಾಯವಿರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ಬೇಲಿ ಹಾಕಲಾಗುತ್ತಿದೆ. ಅರಣ್ಯ ಪ್ರದೇಶಗಳ ಸ್ಥಿತಿಗೆ ಅನುಗುಣವಾಗಿ ಸುರಕ್ಷಿತ ತಡೆಗೋಡೆ, ತಂತಿ ಬೇಲಿ ಹಾಕುತ್ತೇವೆ. ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಎತ್ತರದ ಗೋಡೆಗಳನ್ನು ನಿರ್ಮಿಸುತ್ತೇವೆ’ ಎಂದು ಡಿಸಿಎಫ್ ದೀಪಿಕಾ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಸೂಚಿತ ಅರಣ್ಯ ಪ್ರದೇಶಗಳಿಗೆ ಬೇಲಿ ಹಾಕಲು ಸರ್ಕಾರದಿಂದ ಹಣ ದೊರೆಯುತ್ತದೆ. ಆದರೆ, ನಮ್ಮ ಇಲಾಖೆಯಿಂದ ಅರಣ್ಯ ಪ್ರದೇಶವಾಗಿ ಮಾರ್ಪಡಿಸಿರುವ ಸಿಎನ್‌ಡಿ (ಕಂದಾಯ ಇಲಾಖೆ ನೀಡಿದ ಭೂಮಿ) ಭೂಪ್ರದೇಶಗಳು ಒತ್ತುವರಿಯಾಗುವ ಸಂಭವ ಹೆಚ್ಚಿರುತ್ತದೆ. ಅವುಗಳಿಗೆ ಬೇಲಿ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಯಾರಾದರೂ ನೆರವು ನೀಡಿದರೆ, ಸುಮಾರು 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಬೇಲಿ ಹಾಕಬಹುದು’ ಎಂದು ಅವರು ಹೇಳಿದರು.

ಮೈಸೂರು ಮಹಾರಾಜರ ಕಾಲದಲ್ಲಿ ನಗರದಲ್ಲಿ 11 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿತ್ತು. 1950–1965ರಲ್ಲಿ ಬಹಳಷ್ಟು ಅರಣ್ಯ ಪ್ರದೇಶವನ್ನು ಶಿಕ್ಷಣ ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ ಹಾಗೂ ಇತರೆ ಉದ್ದೇಶಗಳಿಗೆ ನೀಡಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಇವೆಲ್ಲವೂ ಅರಣ್ಯ ಪ್ರದೇಶವೇ ಆಗಿವೆ.

‘‍ಪ್ರತಿ ವರ್ಷ 4 ಲಕ್ಷ ಗಿಡಗಳನ್ನು ನೆಡುವಷ್ಟು ಸಾಮರ್ಥ್ಯ ಇಲಾಖೆಗೆ ಇದೆ. ಆದರೆ, ಅಷ್ಟು ಗಿಡಗಳನ್ನು ನೆಡಲು ನಗರದಲ್ಲಿ ಭೂಮಿ ಎಲ್ಲಿದೆ? ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಬೇಕೆಂದಿದೆ. ಆದರೆ, ಲೋಕೋಪಯೋಗಿ ಇಲಾಖೆಯವರು ಸ್ವಲ್ಪವೂ ಜಾಗ ಬಿಡದಂತೆ ರಸ್ತೆ ನಿರ್ಮಿಸಿರುತ್ತಾರೆ. ಜನರು ಒತ್ತಾಯ ಮಾಡಿದರಷ್ಟೇ ನಗರದೊಳಗೆ ಮರಗಳನ್ನು ಬೆಳೆಸಲು ಸಾಧ್ಯವಾಗುತ್ತದೆ’ ಎಂದು ದೀಪಿಕಾ ಅಭಿಪ್ರಾಯಪಟ್ಟರು.
**

ಡೀಮ್ಡ್‌ ಅರಣ್ಯ

ಸಿಎನ್‌ಡಿ ಅರಣ್ಯ ಪ್ರದೇಶವನ್ನು ಡೀಮ್ಡ್‌ ಅರಣ್ಯ ಎಂದು ಪರಿಗಣಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದು ಒಪ್ಪಿತವಾದರೆ, ಆ ಪ್ರದೇಶವನ್ನು ಯಾವುದೇ ಅರಣ್ಯೇತರ ಚುಟುವಟಿಕೆಗಳಿಗೆ ಬಳಸಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.

ಕಂದಾಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಒಂದಷ್ಟು ಮರಗಳು ಬೆಳೆದಿದ್ದರೆ ಅಲ್ಲಿ ಮತ್ತಷ್ಟು ಹಸಿರು ಬೆಳೆಸುವ ದೃಷ್ಟಿಯಿಂದ ಜಮೀನನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸಲಾಗಿತ್ತು. ಕಾಲಕ್ರಮೇಣ ಅದು ದಾಖಲೆಗಳಲ್ಲಿ ಅರಣ್ಯ ಜಮೀನು ಎಂದೇ ನಮೂದಾಗಿತ್ತು. ಅವುಗಳನ್ನು ಡೀಮ್ಡ್‌ ಅರಣ್ಯ ಎನ್ನಲಾಗುತ್ತದೆ. ನಗರದಲ್ಲಿ 2,161 ಹೆಕ್ಟೇರ್‌ 64 ಗುಂಟೆ ಡೀಮ್ಡ್‌ ಅರಣ್ಯ ಪ್ರದೇಶವಿದೆ.
**

ಪರಿಸರ ಸೂಕ್ಷ್ಮ ವಲಯ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ಸಮೃದ್ಧ ಸಸ್ಯ ಮತ್ತು ಪ್ರಾಣಿ ವೈವಿಧ್ಯವನ್ನು ಹೊಂದಿರುವ ಹಾಗೂ ಕಾವೇರಿ ನದಿಯ ಉಪನದಿಗಳ ಜಲಾನಯನ ಪ್ರದೇಶ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು 2016ರಲ್ಲಿ ಗುರುತಿಸಿದೆ. ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿಕೊಂಡ ಇಲ್ಲಿನ ಅರಣ್ಯ ಘಟಕಗಳನ್ನು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಹಾಗೂ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ರಕ್ಷಣೆ ಮಾಡಬೇಕಾಗಿದೆ.

ರಾಷ್ಟ್ರೀಯ ಉದ್ಯಾನದ ಗಡಿಯುದ್ದಕ್ಕೂ ಮೀಸಲು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದ್ದು, ಇದು 100 ಮೀಟರ್‌ನಿಂದ 4.5 ಕಿ.ಮೀ.ವರೆಗೂ ವ್ಯಾಪಿಸಿದೆ. ಅಧಿಸೂಚಿತ ಸಂರಕ್ಷಿತ ಪ್ರದೇಶವು 268.96 ಚದರ ಕಿ.ಮೀ.ವರೆಗೆ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 77 ಗ್ರಾಮಗಳು, 17 ಹಳ್ಳಿಗಳು ಇದರ ವ್ಯಾಪ್ತಿಯಲ್ಲಿವೆ. ಪರಿಸರ ಸೂಕ್ಷ್ಮ ವಲಯದ ಕೆಲವು ಪ್ರದೇಶಗಳು ಮಹಾನಗರದ ವ್ಯಾಪ್ತಿಯೊಳಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT