ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ರೈತರ ನೆರವಿಗೆ ಒತ್ತಾಯ

ತೋಟಗಳಲ್ಲೇ ನಾಶವಾಗುತ್ತಿರುವ ಬೆಳೆ
Last Updated 22 ಮೇ 2021, 3:29 IST
ಅಕ್ಷರ ಗಾತ್ರ

ಯಲಹಂಕ: ಲಾಕ್‌ಡೌನ್‌ನಿಂದ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ತೋಟಗಳಲ್ಲೇ ನಾಶವಾಗುತ್ತಿದ್ದು, ಇದರಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂದು ರೈತರು ಹಾಗೂ ರೈತಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ವಿದ್ಯುತ್ ಕಣ್ಣಾಮುಚ್ಚಾಲೆ, ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆ, ಕೂಲಿಕಾರ್ಮಿಕರ ಸಮಸ್ಯೆ, ರಸಗೊಬ್ಬರಗಳ ಬೆಲೆ ಏರಿಕೆಯಂತಹ ತೊಂದರೆಗಳ ನಡುವೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದಿದ್ದರೂ, ಈಗ ಕೊರೊನಾ ಲಾಕ್‌ಡೌನ್ ಪರಿಣಾಮ, ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಯ.

ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮಧುಗಿರಿ, ಕೊರಟಗೆರೆ, ಆನೇಕಲ್, ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರು ಬೆಳೆದಿರುವ ತರಕಾರಿ, ಹಣ್ಣು ಹಾಗೂ ಹೂವಿನ ಬೆಳೆಗಳನ್ನು ಮಾರಾಟಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಬೆಲೆಗಳು ಕುಸಿದಿರುವುದರಿಂದ ಬೆಳೆಗಳನ್ನು ಕೇಳುವವರೇ ಇಲ್ಲದಂತಾಗಿ ತೋಟಗಳಲ್ಲೇ ಕೊಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳನ್ನು ಕಳೆದುಕೊಂಡಿರುವ ಕೆಲವು ರೈತರು ಭೋಗ್ಯಕ್ಕೆ ಭೂಮಿ ಪಡೆದು ಕೃಷಿ ಮಾಡುತ್ತಿದ್ದಾರೆ. ಕುಂಬಳಕಾಯಿ, ಸೋರೇಕಾಯಿ ಮತ್ತಿತರ ತರಕಾರಿಗಳು, ಸೀಬೆ, ಸಪೋಟ, ಪಪ್ಪಾಯ, ನೇರಳೆಹಣ್ಣು ಸೇರಿದಂತೆ ಹೂವಿನ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಬೆಳೆಗಳನ್ನು ಸಾಗಿಸಲು ಅವರಿಗೆ ಯಾವುದೇ ಪಾಸ್ ವಿತರಿಸಿಲ್ಲ. ಮಾರಾಟ ಮಾಡಲು ತೆರಳುವ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ವಿ.ಆರ್.ನಾರಾಯಣ ರೆಡ್ಡಿ ಆಗ್ರಹಿಸಿದರು.

ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬೆಳೆಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಬೆಳೆಗಳನ್ನು ಖರೀದಿಸಿ ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ ರೈತರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು ಎಂದು ನಾರಾಯಣ ರೆಡ್ಡಿ ಒತ್ತಾಯಿಸಿದರು.

ಪೆಟ್ರೋಲ್, ಡೀಸೆಲ್ ಹಾಗೂ ರಸಗೊಬ್ಬರಗಳ ಬೆಲೆಗಳು ಹೆಚ್ಚಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಒಂದೆಡೆ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳುತ್ತಿದ್ದರೂ ಇನ್ನೊಂದೆಡೆ ಲಾಕ್‌ಡೌನ್‌ ಜಾರಿಗೊಳಿಸಿ ಬೆಳಿಗ್ಗೆ 6 ರಿಂದ 10 ಗಂಟೆಯೊಳಗೆ ಮಾರಾಟ ಮಾಡಬೇಕೆಂದು ಸಮಯ ನಿಗದಿಪಡಿಸಿದೆ. ಈ ಸಮಯದೊಳಗೆ ರೈತರು ತೋಟಗಳಿಂದ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸಿ ಮಾರಾಟ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಕೊರೊನಾದಿಂದ ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಭಯ ಮತ್ತು ಸಂಕಷ್ಟ ಪರಿಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಹಗಲಿರುಳು ಕೃಷಿಕಾರ್ಯದಲ್ಲಿ ತೊಡಗಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುವುದರ ಜೊತೆಗೆ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ರೈತ ಹರೀಶ್ ಅದ್ದೆ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT