ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕ್ಷೇತ್ರಗಳಲ್ಲೂ ಸೌರಶಕ್ತಿ ಬಳಕೆ ಅನಿವಾರ್ಯ; ಹರೀಶ್ ಹಂದೆ

ಸೆಲ್ಕೊ ಫೌಂಡೇಷನ್‌ ಸಿಇಒ ಹರೀಶ್ ಹಂದೆ ಅಭಿಮತ
Published 17 ಡಿಸೆಂಬರ್ 2023, 15:53 IST
Last Updated 17 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಸ್ಥಿರ ಅಭಿವೃದ್ಧಿ ಗುರಿ ಮುಟ್ಟಲು ಎಲ್ಲ ಸ್ತರಗಳಲ್ಲೂ ದೀರ್ಘಕಾಲದ ದೊಡ್ಡಮಟ್ಟದ ಸಂಘಟನಾತ್ಮಕ ಸಹಯೋಗ ಅಗತ್ಯವಾಗಿದೆ’ ಎಂದು ಸೆಲ್ಕೊ ಫೌಂಡೇಷನ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಹಂದೆ ಹೇಳಿದರು.

ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜಯನಗರದಲ್ಲಿ ನಡೆದ ಸೌರಶಕ್ತಿಯ ಅನ್ವಯಿಕಗಳ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಬೇಕೆಂದರೆ ಅದು ಕುಕ್ಕುಟೋದ್ಯಮವೇ ಇರಲಿ, ಗಿರಣಿ, ಗಾಣ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸೌರಶಕ್ತಿ ಬಳಕೆ ಅನಿವಾರ್ಯ’ ಎಂದರು.

ಕೇಂದ್ರದ ಗ್ರಾಮೀಣ ವಿದ್ಯುದೀಕರಣ ನಿಗಮದ(ಆರ್‌ಇಸಿ) ಕಾರ್ಯಕ್ರಮಗಳ ಹಿರಿಯ ವ್ಯವಸ್ಥಾಪಕ ಸೌಮ್ಯಕಾಂತ್ ಮಾತನಾಡಿ, ‘ಪಳೆಯುಳಿಕೆಗಳ ಮೇಲೆ ಅವಲಂಬಿತವಾಗಿರುವ ಈಗಿನ ಇಂಧನ ಮೂಲಗಳನ್ನು ಭವಿಷ್ಯದಲ್ಲಿ ಹಸಿರು ಮತ್ತು ಶುದ್ಧ ಇಂಧನ ಮೂಲಗಳಾದ ಗಾಳಿ, ನೀರು ಮತ್ತು ಸೌರಶಕ್ತಿ ಆಧಾರಿತವಾಗಿ ರೂಪಿಸಲು ಆರ್‌ಇಸಿ ಬದ್ಧವಾಗಿದೆ‘ ಎಂದರು.

‘ಗ್ರಾಮೀಣ ಜನರಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಪರಿಸರಕ್ಕೆ ಪೂರಕವಾದ ವಿಶ್ವಾಸಾರ್ಹ ಮತ್ತು ಕೈಗೆಟಕುವ ಇಂಧನವನ್ನು ಒದಗಿಸುವ ಮೂಲಕ ಅವರ ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಆರ್‌ಇಸಿ ಫೌಂಡೇಷನ್ ಆರಂಭಿಸಲಾಗಿದ್ದು, ಇದಕ್ಕೆ ಸುಸ್ಥಿರ ಅಭಿವೃದ್ಧಿಯೇ ಮೂಲ ಮಂತ್ರವಾಗಿದೆ’ ಎಂದು ಅವರು ವಿವರಿಸಿದರು.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಪ್ರಿಯಾ ಖಾನ್ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸೆಲ್ಕೊ ಸಂಸ್ಥೆ ಜತೆ ಕೈ ಜೋಡಿಸಲು ಮಹಾರಾಷ್ಟ್ರ ಸರ್ಕಾರ ಹೆಚ್ಚು ಉತ್ಸುಕವಾಗಿದೆ ಎಂದರು.

ಸುಸ್ಥಿರ ಇಂಧನವನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಬಲವರ್ಧನೆಯಲ್ಲಿ ತೊಡಗಿರುವ ಬಿಹಾರದ ಜೆ. ವೈರ್ಸ್ ನಿರ್ದೇಶಕಿ ಸಂಜುದೇವಿ, ತಮ್ಮ ಸಂಸ್ಥೆಯ ಯಶೋಗಾಥೆಯನ್ನು ಹಂಚಿಕೊಂಡರು.

ಸೆಲ್ಕೊ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ, ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್, ಸೆಲ್ಕೊ ಫೌಂಡೇಷನ್‌ನ ನಿರ್ದೇಶಕಿ ಹುದಾ ಜಾಫರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT