ಶುಕ್ರವಾರ, ಆಗಸ್ಟ್ 23, 2019
21 °C
ಅಪರಿಚಿತರ ಬಗ್ಗೆ ಎಚ್ಚರವಿರುವಂತೆ ಪೊಲೀಸರ ಮನವಿlಅನುಮಾನವಿದ್ದರೆ ಠಾಣೆಗೆ ಮಾಹಿತಿ ನೀಡಲು ಕೋರಿಕೆ

‘ಉತ್ತರ ಪ್ರವಾಹ’ದ ಹೆಸರಿನಲ್ಲಿ ಚಂದಾ

Published:
Updated:
Prajavani

ಬೆಂಗಳೂರು: ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ನೆರವು ನೀಡುವ ನೆಪದಲ್ಲಿ ಕೆಲವರು ಮನೆ ಮನೆಗೆ ಹೋಗಿ ಹಣ ಸಂಗ್ರಹಿಸುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನಗರದ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

‘ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಪರಿಹಾರ’ ಎಂದು ಡಬ್ಬದ ಮೇಲೆ ಬರೆದುಕೊಂಡು ಕೆಲವರು ನನ್ನ ಬಳಿ ಬಂದಿದ್ದರು. ನಮಗೂ ಉತ್ತರ ಕರ್ನಾಟಕಕ್ಕೆ ಹೋಗಿ ಹಣ ನೀಡಲು ಆಗುವುದಿಲ್ಲ. ಹೀಗಾಗಿ, ಡಬ್ಬದಲ್ಲಿ ಹಣ ಹಾಕಿದೆ’ ಎಂದು ಹೊಸಕೆರೆಹಳ್ಳಿ ಮಹಿಳೆಯೊಬ್ಬರು ಹೇಳಿದರು.

ಇದೇ ರೀತಿಯಲ್ಲೇ ಸಾಕಷ್ಟು ಜನ ಹಣ ನೀಡುತ್ತಿದ್ದಾರೆ. ಜನರ ಸಹಾಯ ಮಾಡುವ ಮನೋಭಾವವನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು, ಹಣ ಸಂಗ್ರಹಿಸಿ ವಂಚಿಸುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಕಮಿಷನ್ ಎಸ್. ಮುರುಗನ್, ‘ಅಪರಿಚಿತರಿಗೆ ಹಣ ನೀಡಬೇಡಿ. ಯಾರಾದರೂ ಹಣ ದುರುಪಯೋಗಪಡಿಸಿಕೊಳ್ಳುವ ಅನುಮಾನವಿದ್ದರೆ ಠಾಣೆಗೆ ದೂರು ನೀಡಿ’ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಹೆಚ್ಚುವರಿ ಪೊಲೀಸ್ ಕಮಿಷನರ್ ಉಮೇಶ್‌ಕುಮಾರ್, ‘ಕಷ್ಟದಲ್ಲಿರುವವರಿಗೆ ಸ್ಪಂದಿಸುವ ನೆಪದಲ್ಲಿ ಹಣ ಸಂಗ್ರಹಿಸಿ ವಂಚಿಸುವುದು ಸರಿಯಲ್ಲ. ಇಂಥ ವಂಚಕರ ಬಗ್ಗೆ ಸಾರ್ವಜನಿಕರು ದೂರು ನೀಡಬೇಕು. ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಹಣ ಸಂಗ್ರಹಕ್ಕೆ ಭಿನ್ನ ಜಾಹೀರಾತು

‘ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಸಹಾಯ ಮಾಡಲು ಈ ಮೊಬೈಲ್ ನಂಬರ್‌ಗೆ ವಾಲೆಟ್ ಮೂಲಕ ಹಣ ಕಳುಹಿಸಿ’ ಎಂಬ ಭಿನ್ನ ಭಿನ್ನ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳ ನೈಜತೆ ಬಗ್ಗೆ ಯಾರೊಬ್ಬರೂ ಪರಿಶೀಲನೆ ನಡೆಸುತ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿರುವ ಖ್ಯಾತ ನಟರು, ರಾಜಕಾರಣಿಗಳು ಹಾಗೂ ಸಮಾಜ ಸೇವಕರ ಖಾತೆಯಲ್ಲೇ ಇಂಥ ಜಾಹೀರಾತುಗಳು ಹರಿದಾಡುತ್ತಿವೆ.ಇಂಥ ಪ್ರಕರಣಗಳು ಸೈಬರ್ ಕ್ರೈಂ ಪೊಲೀಸರ ವ್ಯಾಪ್ತಿಗೆ ಬರುತ್ತವೆ. ಸೈಬರ್ ಪೊಲೀಸರೇ ಸೂಕ್ತ ತನಿಖೆ ನಡೆಸಿ, ನಿರಾಶ್ರಿತರ ಹೆಸರಿನಲ್ಲಿ ನಡೆಯುತ್ತಿರುವ ಚಂದಾ ವಸೂಲಿಗೆ ಅಂತ್ಯ ಹಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ. 

ಸರ್ಕಾರದ ಅಧಿಕೃತ ಬ್ಯಾಂಕ್‌ ಖಾತೆ ವಿವರ

ನಿರಾಶ್ರಿತರಿಗೆ ಸಹಾಯ ಮಾಡಲಿಚ್ಛಿಸುವವರು ರಾಜ್ಯ ಸರ್ಕಾರದ ಅಧಿಕೃತ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಬಹುದಾಗಿದೆ. 

* ಖಾತೆ ಹೆಸರು: ಮುಖ್ಯಮಂತ್ರಿಯವರ ನೈಸರ್ಗಿಕ ವಿಕೋಪ ನಿಧಿ, 
ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ವಿಧಾನಸೌಧ ಶಾಖೆ

* ಖಾತೆ ಸಂಖ್ಯೆ: 37887098605  

* ಐಎಫ್‌ಎಸ್‌ಸಿ ಕೋಡ್‌: SBIN0040277

* ಎಂಐಸಿಆರ್ ಸಂಖ್ಯೆ: 560002419

* ಚೆಕ್‌ ಕಳುಹಿಸಬೇಕಾದ ವಿಳಾಸ: ನಂ. 235–ಎ, 2ನೇ ಮಹಡಿ, 
ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು–560001

Post Comments (+)