ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯುವಿಸಿಇ) ಸ್ವಾಯತ್ತ ಸಂಸ್ಥೆಯಾಗಿ ಎರಡು ವರ್ಷವಾದರೂ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅಲ್ಲದೆ ಅಗತ್ಯವಿರುವ ಅನುದಾನವನ್ನೂ ನೀಡಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಳಿಸಿ, 2023ರಲ್ಲೇ ಸ್ವಾಯತ್ತ ಸಂಸ್ಥೆಯನ್ನಾಗಿ ಘೋಷಿಸಲಾಗಿದೆ. ಆದರೆ, ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿದ ಉದ್ದೇಶ ಇನ್ನೂಈಡೇರಿಲ್ಲ ಎಂಬ ಅಸಮಾಧಾನ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯಿಂದಲೇ ವ್ಯಕ್ತವಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಒಟ್ಟು 3,600 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಸರ್ಕಾರಿ ಸಂಸ್ಥೆಯಾಗಿದ್ದು, ಶುಲ್ಕ ಕಡಿಮೆ ಎಂಬ ಕಾರಣಕ್ಕೆ ಬಡವರು, ಮಧ್ಯಮ ವರ್ಗದವರು ಹಾಗೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಪ್ರವೇಶ ಪಡೆಯಲು ಪೈಪೋಟಿ ಇದ್ದು ಮಂಜೂರಾದ ಎಲ್ಲ ಸೀಟುಗಳು ಭರ್ತಿಯಾಗುತ್ತವೆ.

ಬೋಧಕರ ವಿಭಾಗದಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 139. ಆದರೆ, ಪ್ರಸ್ತುತ 66 ಮಂದಿ ಅಷ್ಟೇ ಕಾಯಂ ಸಿಬ್ಬಂದಿ ಇದ್ದಾರೆ. ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿದ್ದು, ಕೆಲವು ವಿಭಾಗಗಳು ಬಹುತೇಕ ಅವರ ಮೇಲೆ ಅವಲಂಬನೆಯಾಗಿವೆ. ಇನ್ನು ಬೋಧಕೇತರ ವಿಭಾಗದಲ್ಲಿ 294 ಹುದ್ದೆಗಳು ಮಂಜೂರಾಗಿದ್ದು ಕೇವಲ 30 ಮಂದಿ ಅಷ್ಟೇ ಕಾಯಂ ಸಿಬ್ಬಂದಿ ಇದ್ದಾರೆ.

ಇನ್ನೂ ಸಿಗದ ಒಪ್ಪಿಗೆ: ‘ಮಂಜೂರಾಗಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 20 ಬೋಧಕ ಮತ್ತು 30 ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ವರ್ಷದ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಒಪ್ಪಿಗೆ ಸಿಕ್ಕಿಲ್ಲ‘ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ನೋವು ತೋಡಿಕೊಂಡರು.

2023ರ ನಂತರ 17 ಪ್ರಾಧ್ಯಾಪಕರು ನಿವೃತ್ತಿಯಾಗಿದ್ದಾರೆ. ಇನ್ನು ಎರಡು ವರ್ಷದಲ್ಲಿ 13 ಮಂದಿ ನಿವೃತ್ತಿಯಾಗಲಿದ್ದಾರೆ. ಈ ಹುದ್ದೆಗಳನ್ನು ತುಂಬದೆ ಇದ್ದರೆ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಂಜೂರಾಗಿರುವ ಹುದ್ದೆಗಳನ್ನು ಸರ್ಕಾರ ಆದ್ಯತೆ ಮೇಲೆ ಭರ್ತಿ ಮಾಡಬೇಕು. 12 ವರ್ಷಗಳ ಹಿಂದೆ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲಾಗಿತ್ತು. ಅದಾದ ಬಳಿಕ ಯಾವುದೇ ನೇಮಕಾತಿಗಳು ನಡೆದಿಲ್ಲ ಎಂದು ತಿಳಿಸಿದರು.

‘ಸ್ವಾಯತ್ತ ಸಂಸ್ಥೆಯಾದ ನಂತರ ಎರಡು ಹಂತಗಳಲ್ಲಿ ಸರ್ಕಾರ ₹40 ಕೋಟಿ ಅಷ್ಟೇ ಅನುದಾನ ನೀಡಿದೆ. ಇದು ತುಂಬಾ ಕಡಿಮೆ. ಹಳೆಯ ಕಟ್ಟಡಗಳ ನವೀಕರಣ, ಬಣ್ಣ ಬಳಿಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ಐಐಟಿ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲು ₹500 ಕೋಟಿ ಅಗತ್ಯವಿದೆ. ಆದರೆ, ಅಷ್ಟೊಂದು ಅನುದಾನ ಬಿಡುಗಡೆಯಾಗಿಲ್ಲ’ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

ಯುವಿಸಿಇಗೆ 108 ವರ್ಷಗಳ ಇತಿಹಾಸವಿದೆ. 1917ರಲ್ಲಿ ಮೈಸೂರಿನ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಪದವಿ ವಿಭಾಗದಲ್ಲಿ ಎಂಟು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 24 ವಿಷಯಗಳಲ್ಲಿ ವ್ಯಾಸಂಗ ಮಾಡಲು ಇಲ್ಲಿ ಅವಕಾಶವಿದೆ.

ಪಠ್ಯಕ್ರಮ ಪರಿಷ್ಕರಣೆಗೆ ಸಮಿತಿ

ಪಠ್ಯಕ್ರಮ ಪರಿಷ್ಕರಣೆ ಸಂಬಂಧ ಈಗಾಗಲೇ ಸಮಿತಿ ರಚನೆಯಾಗಿದ್ದು ದೇಶದಲ್ಲಿನ ವಿವಿಧ ಐಐಟಿಗಳು ಮತ್ತು ಕಂಪನಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಬದಲಾದ ಕಾಲಘಟ್ಟದಲ್ಲಿ ಯಾವ ರೀತಿಯ ಪಠ್ಯಕ್ರಮ ಅಗತ್ಯವಿದೆ ಎಂಬ ಬಗ್ಗೆ ಸಮಿತಿ ಪರಾಮರ್ಶೆ ನಡೆಸಿ ವರದಿ ನೀಡಲಿದೆ. ಅದನ್ನು ಆಧರಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ ಅಳವಡಿಸಿಕೊಳ್ಳಲಾಗುವುದು ಎಂದು ಯುವಿಸಿಇ ನಿರ್ದೇಶಕ ಸುಭಾಶಿಷ್ ತ್ರಿಪಾಠಿ ‘ಪ್ರಜಾವಾಣಿ‘ಗೆ ತಿಳಿಸಿದರು. ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಮಾರುಕಟ್ಟೆಯಲ್ಲಿನ ಉದ್ಯೋಗಾವಕಾಶ ಬೇಡಿಕೆಗೆ ತಕ್ಕಂತೆ ಕಾಲಕಾಲಕ್ಕೆ ಪಠ್ಯಕ್ರಮ ಪರಿಷ್ಕರಣೆ ಮಾಡುತ್ತಿವೆ. ಆದರೆ ಯುವಿಸಿಇ ಹಲವು ವರ್ಷಗಳಿಂದ ಪಠ್ಯಕ್ರಮ ಪರಿಷ್ಕರಣೆ ಮಾಡಿಲ್ಲ. ವಾಸ್ತವದಲ್ಲಿ ಉಪಯೋಗಕ್ಕೆ ಬಾರದ ತುಂಬಾ ಹಳೆಯ ಪಠ್ಯಕ್ರಮವಿದೆ ಎಂಬ ಅಸಮಾಧಾನ ವಿದ್ಯಾರ್ಥಿಗಳಿಂದ ವ್ಯಕ್ತವಾಗಿತ್ತು. ಇದನ್ನು ಗಮನಿಸಿ ಪಠ್ಯಕ್ರಮ ಬದಲಾವಣೆಗೆ ಸಂಸ್ಥೆಯ ಆಡಳಿತ ಮಂಡಳಿ ಮುಂದಾಗಿದೆ.

ಹೊಸ ಕ್ಯಾಂಪಸ್ಗೆ 52 ಎಕರೆ ಮಂಜೂರು

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಯುವಿಸಿಇಯ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ 52 ಎಕರೆ ಜಾಗ ಮಂಜೂರಾಗಿದೆ. ಇದರ ನೀಲನಕ್ಷೆ ಕಟ್ಟಡದ ನಕ್ಷೆ ಸಿದ್ಧಪಡಿಸಲು ಸರ್ಕಾರ ₹6.5 ಕೋಟಿ ಮಂಜೂರು ಮಾಡಿದೆ. ಸಿದ್ಧತಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದಕ್ಕೆ ಬೇಕಾದ ಹಣವನ್ನು ಸರ್ಕಾರ ಮಂಜೂರು ಮಾಡುವ ವಿಶ್ವಾಸವಿದೆ ಎಂದು ಆಡಳಿತ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.