ಶನಿವಾರ, ಸೆಪ್ಟೆಂಬರ್ 18, 2021
22 °C

ಜಾತಿ ಎಂಬ ಕಲ್ಮಶದಿಂದ ಹೊರಬರಬೇಕಿದೆ: ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮನ್ನು ಆಳುವವರು ಜಾತಿ ಎಂಬ ಕಲ್ಮಶದಿಂದ ಹೊರಬಂದು ಸಾಮಾಜಿಕ ನ್ಯಾಯ ಒದಗಿಸುವ ದಿಶೆಯಲ್ಲಿ ಹೆಜ್ಜೆ ಇಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ. ಎಲ್ಲರನ್ನೂ ಸಂತೃಪ್ತಿಗೊಳಿಸುವ ಸಲುವಾಗಿ ಮನಸ್ಸಿಗೆ ತೋಚಿದ ರೀತಿಯಲ್ಲಿ ಆಯೋಗ, ಸಮಿತಿ, ನಿಗಮಗಳನ್ನು ರಚಿಸುತ್ತಿರುವುದನ್ನು ನೋಡಿದರೆ ಇಂದಿನ ರಾಜಕಾರಣ ಹೇಸಿಗೆ ಹುಟ್ಟಿಸುತ್ತದೆ’ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಯು.ಭೂಪತಿ ಸ್ಮಾರಕ ಟ್ರಸ್ಟ್‌, ಆನ್‌ಲೈನ್‌ ಮೂಲಕ ಆಯೋಜಿಸಿದ್ದ ‘ಸ್ವಾತಂತ್ರ್ಯದ ಪರಿಕಲ್ಪನೆ; ಮಾತು–ಕವಿತೆ’ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ಮಠಗಳಿಗೆ ಹಣ ಹಂಚುವ ಮೂಲಕ ನಮ್ಮ ವಿತ್ತ ನೀತಿಯನ್ನು ನಾಶಗೊಳಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅದರ ಪರಿಕಲ್ಪನೆಯೇ ಸಾಧಿತವಾಗಿಲ್ಲ. ಸಂವಿಧಾನವನ್ನೇ ಬದಲಿಸುತ್ತೀವಿ ಎಂದು ಹೇಳುವವರು ಮೂರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುತ್ತಾರೆ. ಪಕ್ಷಾಂತರಿಗಳು ಮತ್ತೆ ಚುನಾವಣೆಗಳಲ್ಲಿ ಗೆದ್ದು ಬರುತ್ತಾರೆ. ಇದನ್ನು ನೋಡಿದರೆ ಜನ ಎಷ್ಟು ಭ್ರಷ್ಟರಾಗಿದ್ದಾರೆ ಎಂಬುದು ಮನದಟ್ಟಾಗುತ್ತದೆ. ಶಿಕ್ಷಣ ವ್ಯವಸ್ಥೆ ಸುಧಾರಿಸುವ ಜೊತೆಗೆ ಮಕ್ಕಳೂ ಜಾಗೃತರಾಗಬೇಕು. ಇಲ್ಲದೆ ಹೋದರೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.   

‘ಗಳಿಸಿರುವ ಸ್ವಾತಂತ್ರ್ಯವನ್ನು ಸಮಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಅದರಲ್ಲಿ ನಾವು ವಿಫಲವಾಗಿದ್ದೇವೆ. ಶಿಕ್ಷಣ ವ್ಯವಸ್ಥೆ ಹಿಂದಕ್ಕೆ ಹೋಗುತ್ತಿದೆ. ಕೋವಿಡ್‌ ನಂತರ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಿಮುಖರಾಗಿದ್ದಾರೆ. 52 ಸಾವಿರ ಇದ್ದ ಸರ್ಕಾರಿ ಶಾಲೆಗಳು ಈಗ 30 ಸಾವಿರಕ್ಕೆ ಇಳಿದಿವೆ’ ಎಂದು ತಿಳಿಸಿದರು.

ಸಾಹಿತಿ ಬಿ.ಟಿ.ಲಲಿತಾ ನಾಯಕ್‌ ‘ಪ್ರಭುತ್ವವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಪ್ರಜ್ಞೆಯನ್ನು ಯುವ ಸಮುದಾಯದಲ್ಲಿ ಮೂಡಿಸಬೇಕು. ಜಾತಿ ಪದ್ಧತಿ, ಬಡವರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇವೆ. ಇವುಗಳನ್ನು ತೊಡೆದು ಹಾಕುವ ಮಾರ್ಗದ ಬಗ್ಗೆ ಯೋಚಿಸಬೇಕಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಕೆಲವು ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದು ಖುಷಿಯ ವಿಚಾರ’ ಎಂದರು. 

ಕಮ್ಯುನಿಸ್ಟ್‌ ಮುಖಂಡ ಸಿದ್ದನಗೌಡ ಪಾಟೀಲ ‘ಮೇಕ್‌ ಇನ್‌ ಇಂಡಿಯಾ ಹೆಸರಿನಲ್ಲಿ ನಾವು ಕಂಪನಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದಾಗಿ ಕೋವಿಡ್‌ ಎದುರಿಸುವಲ್ಲಿ ಸರ್ಕಾರ ಎಡವಿದೆ. ದ್ರವ ರೂಪದ ಆಮ್ಲಜನಕ ಸಿಗದೆ ಜನ ಬೀದಿಗಳಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ದೇಶದ ಪ್ರಧಾನಿ, ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ದೇಶವು ಕಾರ್ಪೊರೇಟ್‌ ಕಂಪನಿಗಳ ಹಿಡಿತದಲ್ಲಿ ಇರುವುದಕ್ಕೆ ಇದೊಂದು ನಿದರ್ಶನ. ನಾವು ಕಂಪನಿ ರಾಜ್ಯದಿಂದ ಕಲ್ಯಾಣ ರಾಜ್ಯದೆಡೆ ಸಾಗಬೇಕಿರುವುದು ಈಗ ತುಂಬಾ ಅವಶ್ಯ’ ಎಂದು ಹೇಳಿದರು. 

ವಸುಂಧರಾ ಭೂಪತಿ, ಅಭಿಮನ್ಯು ಭೂಪತಿ, ಡಾ.ಸುರೇಶ್‌ ಸಗರದ, ಪ್ರೊ.ಜಿ.ಶರಣಪ್ಪ, ಅಬ್ದುಲ್‌ ಹೈ ತೋರಣಗಲ್ಲು, ತಿಪ್ಪೇರುದ್ರ ಸಂಡೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.