ಶುಕ್ರವಾರ, ಮಾರ್ಚ್ 31, 2023
22 °C
‘ವೀರ ಸಾವರ್ಕರ್‌’ ಇಂಗ್ಲಿಷ್‌ ಪುಸ್ತಕ ಬಿಡುಗಡೆ

ಸಾವರ್ಕರ್‌ ಅರ್ಥವಾದರೆ ಕೊಳಕು ವಿಚಾರ ಸ್ವಚ್ಛವಾಗುತ್ತವೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬ್ರಿಟಿಷರ ಪಾಲಿಗೆ ಅಣ್ವಸ್ತ್ರದಂತಿದ್ದ ಪ್ರಖರ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರು 14 ವರ್ಷಗ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿದರು ಎಂಬುದನ್ನು ಆಳವಾಗಿ ಅರ್ಥಮಾಡಿಕೊಂಡಿದ್ದೇ ಆದರೆ, ಅವರನ್ನು ವಿವಾದ ಮಾಡಲು ಹೊರಡುವವರ ಕೊಳಕು ವಿಚಾರಗಳು ಸ್ವಚ್ಛಗೊಳ್ಳುತ್ತವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಕೇಂದ್ರ ಮಾಹಿತಿ ಆಯುಕ್ತ ಉದಯ ಮಹೂರ್ಕರ್‌ ಹಾಗೂ ಚಿರಾಯು ಪಂಡಿತ್‌ ಬರೆದಿರುವ ‘ವೀರ್‌ ಸಾವರ್ಕರ್‌’ ಇಂಗ್ಲಿಷ್‌ ಪುಸ್ತಕವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಬೊಮ್ಮಾಯಿ, ‘ಜಗತ್ತಿನ ಕೆಲ ಧರ್ಮಗಳು ಹಿಂಸೆಯಿಂದಲೇ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರೆ ಹಿಂದೂ ಧರ್ಮ ಮಾತ್ರ ಇವತ್ತಿನ ಜಾಗತೀಕರಣ, ಖಾಸಗೀಕರಣದ ಯುಗದಲ್ಲೂ ಅಂತಃಕರಣದ ಸಂಸ್ಕೃತಿಯ ಆಧಾರದಲ್ಲಿ ಮುನ್ನಡೆದಿದೆ’ ಎಂದರು.

‘ಬ್ರಿಟಿಷರ ಹೊಡೆತದ ನಡುವೆಯೂ ಸಾವರ್ಕರ್‌ ತಮ್ಮ ಆಲೋಚನೆಗಳ ಮೂಲಕ ಹಿಂದೂತ್ವದ ವೈಚಾರಿಕತೆಯನ್ನು ಬೆಳೆಸಿದರು. ಅವರ ಶಕ್ತಿ ಬಹಳ ಅಗಾಧವಾದ್ದು. ಹಾಗಾಗಿಯೇ ಇವರನ್ನು ರಾಷ್ಟ್ರೀಯ ಚಳವಳಿಯಿಂದ ದೂರ ಇರಿಸಬೇಕೆಂಬ ಏಕೈಕ ಉದ್ದೇಶದಿಂದ ಬ್ರಿಟಿಷರು ಕರಿನೀರಿನ ಶಿಕ್ಷೆ ವಿಧಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಲ್ಲೇ ಸಾವರ್ಕರ್‌ ಒಬ್ಬ ಬಂಡಾಯಗಾರನಾಗಿದ್ದರು’ ಎಂದು ಬಣ್ಣಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್ ಮಾತನಾಡಿ, ‘ಬೇರೆ ಬೇರೆ ಕಾರಣಕ್ಕಾಗಿ ಜೈಲಿಗೆ ಹೋದವರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಸಾವರ್ಕರ್‌ ಅವರನ್ನು ಟೀಕಿಸುತ್ತಾರೆ’ ಎಂದು ಗೇಲಿ ಮಾಡಿದರು.

‘ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬಂದಿರುವುದು ಅಸಲು ಇದ್ದಂತೆ. ಅವರ ಅತ್ಯಂತ ಸ್ಫೂರ್ತಿದಾಯಕ ಮಾತುಗಳು ಬಡ್ಡಿಯಿದ್ದಂತೆ. ನಿರ್ಮಲಾನಂದನಾಥ ಸ್ವಾಮೀಜಿಯವರ ಜೊತೆಗೆ ಮಾದಾರ ಚನ್ನಯ್ಯ ಸ್ವಾಮೀಜಿ ಆಹ್ವಾನವಿಲ್ಲದೇ ಇಲ್ಲಿಗೆ ಬಂದಿರುವುದನ್ನು ನೋಡಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುವವರಿಗೆ ಇದರಿಂದ ಬೆಂಕಿ ಬಿದ್ದಂತಾಗಿರುತ್ತದೆ. ಈ ಪುಸ್ತಕ ಕರ್ನಾಟಕದ ತರುಣರ ನಡುವೆಯೇ ಆಗಬೇಕೆಂಬ ಇರಾದೆಯೊಂದಿಗೆ ಇಲ್ಲಿ ಬಿಡುಗಡೆಯಾಗುತ್ತಿದೆ’ ಎಂದರು. 

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ಅಂಬೇಡ್ಕರ್‌ ಮತ್ತು ಸಾವರ್ಕರ್‌ ದೂರ ದೂರ ಇದ್ದು ಸ್ವಾತಂತ್ರ್ಯ ಹೋರಾಟ ನಡೆಸಿದ ಪರಿಣಾಮವನ್ನು ನಾವಿವತ್ತು ಅನುಭವಿಸುತ್ತಿದ್ದೇವೆ. ಅವರು ತಮ್ಮ ಕಾಲಘಟ್ಟದಲ್ಲಿ ಒಟ್ಟಿಗೇ ಕಲೆತು ಕೆಲಸ ಮಾಡಬೇಕಿತ್ತು’ ಎಂದರು.

ಪತ್ರಕರ್ತೆ ಲಕ್ಷ್ಮಿ ರಾಜಕುಮಾರ್ ಕೃತಿ ಪರಿಚಯ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು