ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಭದ್ರನಗರ ಬಳಿ ನಿತ್ಯವೂ ದಟ್ಟಣೆ: ಸಾಲುಗಟ್ಟಿ ನಿಲ್ಲುವ ವಾಹನ, ಸವಾರರು ಹೈರಾಣ

ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಕಿರಿಕಿರಿ
Last Updated 7 ಜನವರಿ 2022, 19:17 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪು ದೀಪ ಬೆಳಗುವುದರೊಳಗೆ ದಟ್ಟಣೆಯಿಂದ ಪಾರಾಗಬೇಕೆಂಬ ಧಾವಂತದಲ್ಲಿ ಮುಂದಕ್ಕೆ ದಾಂಗುಡಿ ಇಡುವ ವಾಹನಗಳು. ಅಣತಿ ದೂರ ಕ್ರಮಿಸಿದೊಡನೆಯೇ ಧಕ್ಕನೆ ನಿಂತು ಮತ್ತೆ ಹಸಿರು ದೀಪದತ್ತ ದೃಷ್ಟಿ ನೆಟ್ಟು ಕಾಯುವ ಸವಾರರು...

ನೈಸ್‌ ರಸ್ತೆ ಬಳಿಯ ವೀರಭದ್ರನಗರ ವೃತ್ತದಲ್ಲಿ ಕಂಡುಬರುವ ದೃಶ್ಯವಿದು.

ರೇಷ್ಮೆ ಸಂಸ್ಥೆಯಿಂದ ಮೈಸೂರು ರಸ್ತೆ ವೃತ್ತಕ್ಕೆ ಸಂಪರ್ಕ ಬೆಸೆಯುವ ಈ ಹೊರ ವರ್ತುಲ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ.ನಾಗರಬಾವಿಯಿಂದ ಬನಶಂಕರಿ, ಜೆ.ಪಿ.ನಗರ, ಕನಕಪುರ ಹೀಗೆ ನಗರದ ಪ್ರಮುಖ ಸ್ಥಳಗಳು ಹಾಗೂ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಬೆಸೆಯುವ ಈ ರಸ್ತೆ ವಾಹನಗಳಿಂದ ಸದಾ ಗಿಜಿಗುಡುತ್ತಿರುತ್ತದೆ. ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಇತರ ಕಾರ್ಯಗಳಿಗೆ ಹೋಗುವವರೂ ಇದೇ ಮಾರ್ಗವನ್ನು ಅವಲಂಬಿಸುತ್ತಾರೆ. ಹೀಗಾಗಿ, ವೀರಭದ್ರನಗರ ವೃತ್ತದ ಬಳಿ ನಿತ್ಯವೂ ದಟ್ಟಣೆ ಉಂಟಾಗುತ್ತಿದೆ. ದಟ್ಟಣೆಯಲ್ಲಿ ಸಿಲುಕಿ‍ಪ್ರಯಾಣಿಕರು ಹೈರಾಣಾಗುವುದು ಸಾಮಾನ್ಯವಾಗಿದೆ.

ಇದು ಹೆಸರಿಗಷ್ಟೇ‘ಸಿಗ್ನಲ್‌ ಫ್ರಿ’ ಕಾ‌ರಿಡಾರ್‌. ದಟ್ಟಣೆ ತಗ್ಗಿಸುವ ಉದ್ದೇಶದಿಂದ ಹೊಸಕೆರೆಹಳ್ಳಿ ಬಳಿಯ ಕೆ.ಇ.ಬಿ.ಜಂಕ್ಷನ್‌ ಹತ್ತಿರ 300 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ. ಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನ ಆಗಿಲ್ಲ. ಅಲ್ಲಿ ಏಕಮುಖ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬನಶಂಕರಿ, ಕತ್ರಿಗುಪ್ಪೆ, ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್ ಕಡೆಯಿಂದ ನಾಗರಬಾವಿ, ನಾಯಂಡಹಳ್ಳಿ ಹಾಗೂ ಕೆಂಗೇರಿ ಕಡೆ ಹೋಗುವವರಿಗೆ ಸಮಸ್ಯೆ ತಪ್ಪಿಲ್ಲ. ಈ ಭಾಗಗಳಿಂದ ಬರುವ ನೂರಾರು ವಾಹನಗಳು ಪಿಇಎಸ್‌ ವಿಶ್ವವಿದ್ಯಾಲಯ ದಾಟಿದೊಡನೆಯೇ ದಟ್ಟಣೆಯಲ್ಲಿ ಸಿಲುಕುತ್ತವೆ. ಮುಂಜಾನೆ ಹಾಗೂ ಸಂಜೆಯ ಹೊತ್ತಿನಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದಿಂದ ವೀರಭದ್ರನಗರದವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.

ಪ್ರಯೋಜನಕ್ಕಿಲ್ಲದ ಸರ್ವಿಸ್‌ ರಸ್ತೆ: ಪಿಇಎಸ್‌ ವಿಶ್ವವಿದ್ಯಾಲಯದಿಂದ ವೀರಭದ್ರನಗರ ವೃತ್ತದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ‘ಸರ್ವಿಸ್‌’ ರಸ್ತೆಗಳಿವೆ. ಅವುಗಳ ಸ್ಥಿತಿ ಶೋಚನೀಯವಾಗಿದೆ. ಈ ರಸ್ತೆಗಳಿಗೆ ಹಾಕಲಾಗಿರುವ ಡಾಂಬರು ಕಿತ್ತು ಹೋಗಿ ಜಲ್ಲಿ ಕಲ್ಲುಗಳೆಲ್ಲಾ ಹರಡಿಕೊಂಡಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳೂ ಬೆಳೆದುಕೊಂಡಿವೆ. ಆದ್ದರಿಂದ ವಾಹನ ಸವಾರರು ಅತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ, ಈ ರಸ್ತೆಗಳು ತ್ಯಾಜ್ಯ ಸಂಗ್ರಹಿಸುವ ಟಿಪ್ಪರ್‌ಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿವೆ.

‘ಸಂಜೆ ಹಾಗೂ ಬೆಳಿಗ್ಗೆಯ ಸಮಯದಲ್ಲಿ ಈ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲು. ಒಮ್ಮೊಮ್ಮೆ ಆಂಬುಲೆನ್ಸ್‌ಗಳೂ ದಟ್ಟಣೆಯಲ್ಲಿ ಸಿಲುಕಿ ಅದರೊಳಗಿರುವ ರೋಗಿಗಳೂ ಪರದಾಡಿದ ಉದಾಹರಣೆಗಳಿವೆ. ಈ ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಬೇಕು’ ಎಂದು ವೀರಭದ್ರನಗರ ನಿವಾಸಿ ನಂಜುಂಡಸ್ವಾಮಿ ಆಗ್ರಹಿಸಿದರು.

‘ಸರ್ವಿಸ್‌ ರಸ್ತೆ’ ಸರಿಪಡಿಸಲು ಆಗ್ರಹ

‘ದಟ್ಟಣೆ ನಿಯಂತ್ರಿಸುವ ಸಲುವಾಗಿ ಸರ್ವಿಸ್‌ ‌ರಸ್ತೆ ನಿರ್ಮಿಸಲಾಗಿದೆ. ಆ ‌ರಸ್ತೆಗಳು ಸಂಚಾರ ಯೋಗ್ಯವಾದರೆ ವಾಹನ ಸವಾರರು ಸಹಜವಾಗಿಯೇ ಆ ಮಾರ್ಗಗಳನ್ನು ಬಳಸುತ್ತಾರೆ. ಅದರಿಂದ ದಟ್ಟಣೆ ಸಮಸ್ಯೆಯೂ ನೀಗುತ್ತದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗಿರಿನಗರ ನಿವಾಸಿ ಟಿ.ವಿನೋದ್‌ ಒತ್ತಾಯಿಸಿದರು.

‘ದಟ್ಟಣೆಯಲ್ಲಿ ಸಿಲುಕುವ ವಾಹನಗಳು ವಿಷಯುಕ್ತ ಅನಿಲ ಹೊರ ಸೂಸುತ್ತವೆ. ಜೊತೆಗೆ ಕರ್ಕಶ ಶಬ್ದಗಳನ್ನೂ ಹೊರಹೊಮ್ಮಿಸುತ್ತವೆ. ಅದರಿಂದಾಗಿ ರಸ್ತೆಗೆ ಹೊಂದಿಕೊಂಡಂತಿರುವ ಬಡಾವಣೆಗಳ ನಿವಾಸಿಗಳು ವಿಷಗಾಳಿ ಸೇವಿಸುವಂತಾಗಿದೆ. ಅವರ ಆರೋಗ್ಯದ ಮೇಲೂ ದುಷ್ಪರಿಣಾಮಗಳು ಉಂಟಾಗುತ್ತಿವೆ’ ಎಂದು ಅವರು ದೂರಿದರು. ‘ವೀರಭದ್ರನಗರ ವೃತ್ತದಿಂದ ಕೆರೆಕೋಡಿ ಹಾಗೂ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿರಿದಾಗಿವೆ. ಹೀಗಾಗಿ ಈ ರಸ್ತೆಗಳಲ್ಲಿಯೂ ದಟ್ಟಣೆ ಏರ್ಪಡುತ್ತದೆ. ಈ ರಸ್ತೆಗಳ ಅಗಲೀಕರಣ ಕಾರ್ಯ ನಡೆದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

‘ದ್ವಿಪಥ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ’

‘ಪಿಇಎಸ್‌ ವಿಶ್ವವಿದ್ಯಾಲಯದ ಎದುರಿನ ಸಿಗ್ನಲ್‌ ಬಳಿಯಿಂದ ವೀರಭದ್ರನಗರ ವೃತ್ತದವರೆಗೂ ದ್ವಿಪಥದ ಮೇಲ್ಸೇತುವೆ ನಿರ್ಮಿಸುವ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಸೇತುವೆಯ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆ ಕೂಡ ಇರಲಿದೆ. ಈಗಾಗಲೇ ಮಣ್ಣಿನ ಪರೀಕ್ಷೆಯನ್ನೂ ನಡೆಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಸಂಚಾರ ಸಮಸ್ಯೆ ತಪ್ಪಲಿದೆ’ ಎಂದು ಸಿ.ವಿ.ಕಾಂಡ್‌ ಕನ್ಸಲ್ಟೆನ್ಸ್‌ ಕಂಪನಿಯ ಎಂಜಿನಿಯರ್‌ ವರುಣ್‌ ಕುಮಾರ್‌ ಹೇಳಿದರು.

‘ಗಿರಿನಗರ, ಶ್ರೀನಗರ, ಆವಲಹಳ್ಳಿ ಹಾಗೂ ಇತರ ಬಡಾವಣೆಗಳಿಗೆ ಹೋಗುವವರು ಸರ್ವಿಸ್‌ ರಸ್ತೆ ಬಳಸಬಹುದು. ಈ ಭಾಗದ ಸಂಚಾರವನ್ನು ಅಧ್ಯಯನ ಮಾಡಲಾಗಿದೆ. ಮೇಲ್ಸೇತುವೆ ನಿರ್ಮಾಣದ ಬಳಿಕ ದಟ್ಟಣೆ ಎಷ್ಟು ತಗ್ಗಲಿದೆ, ವಾಯು ಮಾಲಿನ್ಯ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂಬುದರ ಕುರಿತೂ ಅಧ್ಯಯನ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT