ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೊಯಿಲಿ ಅವರ ‘ನನ್ನ ಬೊಗಸೆಯ ಆಕಾಶ’ ಆತ್ಮ ಕಥನ ಬಿಡುಗಡೆ

Last Updated 12 ಮಾರ್ಚ್ 2022, 17:05 IST
ಅಕ್ಷರ ಗಾತ್ರ

ಬೆಂಗಳೂರು: ‘ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಡೀ ದೇಶದಲ್ಲಿ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆ ಜಾರಿಗೆ ತಂದಿದ್ದು ಎಂ.ವೀರಪ್ಪ ಮೊಯಿಲಿ ಅವರು’ ಎಂದು ಕಾಂಗ್ರೆಸ್‌ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

ಸಪ್ನ ಬುಕ್ ಹೌಸ್ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಎಂ.ವೀರಪ್ಪ ಮೊಯಿಲಿ ಅವರ ಆತ್ಮ ಕಥನ ‘ನನ್ನ ಬೊಗಸೆಯ ಆಕಾಶ’ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಮೊಯಿಲಿ ಅವರ ಮನಸನ್ನು ಘಾಸಿಗೊಳಿಸಿತ್ತು. ಸಿಇಟಿ ಜಾರಿಗೆ ತರುವ ಚಿಂತನೆಯನ್ನು ಅವರು ಮಾಡಿದರು. ಇದೆಲ್ಲವನ್ನೂ ಆತ್ಮ ಕಥನದಲ್ಲಿ ಮೊಯಿಲಿ ಅವರು ದಾಖಲಿಸಿದ್ದಾರೆ’ ಎಂದರು.

‘ಬಳಿಕ ಈ ರೀತಿಯ ಪರೀಕ್ಷೆ ದೇಶದೆಲ್ಲೆಡೆ ಜಾರಿಗೆ ಬಂತು. ‘ನೀಟ್’ ಅದರ ಮುಂದುವರಿದ ಭಾಗ. ಬಡವರ ಮಕ್ಕಳು ಕೂಡ ಎಂಜಿನಿಯರ್ ಮತ್ತು ವೈದ್ಯರಾಗಲು ಸಾಧ್ಯವಾಯಿತು’ ಎಂದರು.

‘ಮುಖ್ಯಮಂತ್ರಿ ಆಗಿದ್ದ ಎರಡೂವರೆ ವರ್ಷಗಳ ಅವಧಿಯಲ್ಲೇ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ, ಮಾಹಿತಿ ತಂತ್ರಜ್ಞಾನದ ಕ್ರಾಂತಿಗೆ ಅಡಿಗಲ್ಲು ಹಾಕಿದವರು ಮೊಯಿಲಿ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಜನೆ ರೂಪಿಸಿದ್ದರು. ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಶಂಕುಸ್ಥಾಪನೆ ನೆರವೇರಿಸಲು ಚುನಾವಣಾ ಆಯೋಗ ಅವರಿಗೆ ಅವಕಾಶ ಕೊಡಲಿಲ್ಲ. ಈಗ ಬೇರೆ ನಾಯಕರು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಪುಸ್ತಕದ ಕುರಿತು ಮಾತನಾಡಿದ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ‘ಮೊಯಿಲಿ ಅವರ ಈ ಆತ್ಮ ಕಥನವು ಅವರು ಬದುಕಿನ ಮೂರು ಆಯಾಮಗಳನ್ನು ತೆರೆದಿಡುತ್ತದೆ. ಅಲಕ್ಷಿತ ಸಮುದಾಯಗಳ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇತ್ತು ಎಂಬುದು ಅರ್ಥವಾಗುತ್ತದೆ’ ಎಂದರು.

ಶಿಕ್ಷಣ ತಜ್ಞ ಕೆ.ಈ.ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಕೆ.ರೆಹಮಾನ್ ಖಾನ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗೌರವ ಸಲಹೆಗಾರ ಎನ್.ಆರ್.ಶೆಟ್ಟಿ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕೆ.ಆರ್‌.ಕಮಲೇಶ್, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT