ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳಪಂಗಡಗಳನ್ನೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ’-ಈಶ್ವರ ಖಂಡ್ರೆ

ವೀರಶೈವ ಮಹಾಸಭಾದ ಬಿಬಿಎಂಪಿ ಯುವಘಟಕ ಉದ್ಘಾಟನೆ
Last Updated 14 ಮಾರ್ಚ್ 2021, 18:34 IST
ಅಕ್ಷರ ಗಾತ್ರ

ಬೆಂಗಳೂರು: ‘ವೀರಶೈವ ಲಿಂಗಾಯತದಲ್ಲಿ 112ಕ್ಕೂ ಒಳಪಂಗಡಗಳಿದ್ದು, ಇವುಗಳನ್ನು ಕೇಂದ್ರದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಮಹಾಸಭಾದ ಬಿಬಿಎಂಪಿ ಯುವಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದ 3ಬಿ ಮೀಸಲಾತಿಯಲ್ಲಿ ನಾವು ಇದ್ದು, ಶೇ 5ರಷ್ಟು ಮೀಸಲಾತಿ ಸಿಗುತ್ತಿದೆ. ಆದರೆ, ನಮ್ಮ ಸಮುದಾಯದ ಸಂಖ್ಯೆ ಹೆಚ್ಚಿರುವುದರಿಂದ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿದರೆ, ಶೇ 27ರಷ್ಟು ಮೀಸಲಾತಿ ದೊರಕುತ್ತದೆ. ಇದರಿಂದ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ’ ಎಂದರು.

‘ವೀರಶೈವ ಸಮುದಾಯ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ವರ್ಗ. ಈಗ ನಾವೇ ಸಾಮಾಜಿಕ ನ್ಯಾಯ ಕೇಳಬೇಕಾಗಿದೆ. ನಮಗಿಂತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಿರುವ ಸಮುದಾಯಗಳು ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ನಮ್ಮನ್ನೂ ಈ ವರ್ಗಕ್ಕೆ ಪರಿಗಣಿಸಬೇಕು’ ಎಂದರು.

‘ರಾಜ್ಯಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ನೀಡಿದೆ. ಇದು ಸದ್ಬಳಕೆಯಾಗಬೇಕು. ಎಲ್ಲ ಒಳಪಂಗಡಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಸೌಲಭ್ಯ ದೊರಕಿಸಿಕೊಡಬೇಕು’ ಎಂದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ‘ವೀರಶೈವ ಲಿಂಗಾಯತ ಧರ್ಮದ ಸ್ಥಾಪಕರು ಬಸವೇಶ್ವರರೋ, ರೇಣುಕಾಚಾರ್ಯರೋ ಎಂದು ಚರ್ಚೆ ಮಾಡುವುದಕ್ಕಿಂತ, ನಮ್ಮ ಧರ್ಮದಲ್ಲಿನ ತತ್ವಗಳನ್ನು ಪಾಲಿಸಲು ಮುಂದಾಗಬೇಕು. ಸಮುದಾಯದ ಯುವಕ–ಯುವತಿಯರು ಲಿಂಗ ಧರಿಸಬೇಕು. ಲಿಂಗಪೂಜೆ ಮಾಡುವುದನ್ನು ಮಕ್ಕಳಿಗೂ ಹೇಳಿಕೊಡಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಕೊಕ್ಕೊ ಸಂಸ್ಥೆ ಅಧ್ಯಕ್ಷ ಟಿ.ಎಸ್. ಲೋಕೇಶ್, ‘ಸಮುದಾಯದ ಸಂಘಟನೆಯ ವೇಳೆ ಸಂಖ್ಯೆಯೂ ಮುಖ್ಯವಾಗುತ್ತದೆ. ಸಮಾವೇಶಗಳಿಗೆ, ಪ್ರತಿಭಟನೆ ವೇಳೆ ಜನರನ್ನು ಒಗ್ಗೂಡಿಸುವುದು ಅವಶ್ಯವಾಗುತ್ತದೆ. ರಾಜ್ಯದ ವೀರಶೈವ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಮಹಾಸಭಾದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಹಾಸ್ಟೆಲ್‌ಗೆ ಸೇರಿಸಿಕೊಳ್ಳುವ ಸಂದರ್ಭದಲ್ಲಿಯೇ ಮಹಾಸಭಾದ ಸದಸ್ಯತ್ವ ಅರ್ಜಿಯನ್ನೂ ನೀಡಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಹಾಸಭಾದ ಬಿಬಿಎಂಪಿ ಯುವಘಟಕದ ನೂತನ ಅಧ್ಯಕ್ಷ ಎಚ್.ಡಿ. ರೇಣುಕಾರಾಧ್ಯ, ‘ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಮಹಾಸಭಾದ ಪದಾಧಿಕಾರಿಗಳು ಇರುವಂತೆ ನೋಡಿಕೊಳ್ಳಲಾಗುವುದು. ಮುಂದಿನ ಬಿಬಿಎಂಪಿ ಚುನಾವಣೆ ವೇಳೆ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವಂತೆ ಸಮುದಾಯದ ರಾಜಕೀಯ ಮುಖಂಡರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದರು.

ಬಿಬಿಎಂಪಿ ಯುವಘಟಕಕ್ಕೆ 29 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT