ಶುಕ್ರವಾರ, ಜನವರಿ 27, 2023
26 °C

ಹಲೋ.ಹಲೋ.. ‘ಮಿನಿಸ್ಟರ್‌ ಸಾಹೇಬ್ರು ಕಚೇರಿಯಲ್ಲಿ ಇಲ್ಲ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸೌಧದಲ್ಲಿ ಸಚಿವಾಲಯಗಳು ಜನಸಾಮಾನ್ಯರಿಗೆ ಎಷ್ಟು ಹತ್ತಿರ? ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳು ಜನರಿಗೆ ಎಷ್ಟು ಸುಲಭವಾಗಿ ಸಿಗುತ್ತಾರೆ? ಹೀಗೊಂದು ರಿಯಾಲ್ಟಿ ಚೆಕ್‌. ‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ’ ಅವಳಿ ಪತ್ರಿಕೆಗಳ ‘ಮೆಟ್ರೊ’ ವಿಭಾಗದಿಂದ ಜನಸಾಮಾನ್ಯರ ಹಾಗೆ ಸಚಿವರ ಕಾರ್ಯಾಲಯಗಳಿಗೆ ಕರೆ ಮಾಡಿದಾಗ ಕೇಳಿ ಬಂದ ಉತ್ತರಗಳಿವು. ಅಕ್ಷರೂಪದಲ್ಲಿ ಓದುಗರ ಮುಂದಿಡುತ್ತಿದ್ದೇವೆ. ಎಲ್ಲಿಯೂ ಪತ್ರಿಕಾ ಕಚೇರಿಯಿಂದ ದೂರವಾಣಿ ಕರೆ ಮಾಡಲಾಗುತ್ತಿದೆ ಎಂಬ ಸಣ್ಣ ಸುಳಿವು ಕೂಡ ಬಿಟ್ಟು ಕೊಟ್ಟಿರಲಿಲ್ಲ. ಜನಸಾಮಾನ್ಯರೊಂದಿಗೆ ಸಚಿವಾಲಯದ ಅಧಿಕಾರಿಗಳು, ಸಚಿವರ ಆಪ್ತ ಸಹಾಯಕರು, ಸಿಬ್ಬಂದಿ ಹೇಗೆ ಮಾತನಾಡುತ್ತಾರೆ ಎಂಬ ಹಲವು ಸ್ಯಾಂಪಲ್‌ಗಳು ಇಲ್ಲಿವೆ.

‘ಸಾಹೇಬ್ರು... ವಿಧಾನಸೌಧಕ್ಕೆ ಬರಲ್ಲ‘

ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ

ವರದಿಗಾರ: ಹಲೋ, ಇದು ಡಿ.ಕೆ. ಶಿವಕುಮಾರ್‌ ಅವರ ಕಚೇರಿಯಾ? 

ಸಚಿವಾಲಯದ ಸಿಬ್ಬಂದಿ: ನಮಸ್ಕಾರ, ಹೌದು ಇದು ಸಚಿವರ ಕಚೇರಿ.

ವರದಿಗಾರ: ಸಚಿವರೊಂದಿಗೆ ಮಾತನಾಡಬಹುದಾ?

ಸಿಬ್ಬಂದಿ: ನಿಮಗೆ ಸಾಹೇಬ್ರ ಮನೆಯ ಫೋನ್‌ ನಂಬರ್‌ ಕೊಡುತ್ತೇನೆ. 080–22200642. ಅಲ್ಲಿಗೆ ಮಾತನಾಡಿ.

ವರದಿಗಾರ: ಹಾಗಾದರೆ ಮಿನಿಸ್ಟರ್‌ ಇವತ್ತು ಕಚೇರಿಗೆ ಬರುವುದಿಲ್ಲವಾ?

ಸಿಬ್ಬಂದಿ: ಇಲ್ಲ, ಅವರು ಕಚೇರಿಗೆ ಬರಲ್ಲ...

ವರದಿಗಾರ: ಹಾಗಾದರೆ ಸಾಮಾನ್ಯವಾಗಿ ಯಾವಾಗ ಬರುತ್ತಾರೆ. ಯಾವಾಗ ಭೇಟಿಯಾಗಬಹುದು?

ಸಿಬ್ಬಂದಿ: ಇಲ್ಲ, ಸಾಹೇಬ್ರು ಆಫಿಸ್‌ಗೆ ಬರುವುದಿಲ್ಲ. ಮೀಟಿಂಗ್‌ ಅಥವಾ ಸಭೆಗಳಿದ್ದರೆ ಮಾತ್ರ ಅವರು ಬರುತ್ತಾರೆ.

ವರದಿಗಾರ: ಹಾಗಾದರೆ ಅವರ ಮನೆಗೆ ಕರೆ ಮಾಡಬೇಕಾ?

ಸಿಬ್ಬಂದಿ: ಹೌದು, ಅಲ್ಲಿಗೆ ಕರೆ ಮಾಡಿ. ನಿಮಗೆ ಸಾಹೇಬ್ರು ಯಾವಾಗ ಸಿಗುತ್ತಾರೆ ಎಂದು ಹೇಳುತ್ತಾರೆ.

 * * * 

‘ಮೇಲ್‌ ಮಾಡಿ ಬನ್ನಿ‘ 

ಆರ್‌.ವಿ ದೇಶಪಾಂಡೆ, ಕಂದಾಯ ಸಚಿವರು

ವರದಿಗಾರ: ಹಲೋ! ಮಿನಿಸ್ಟರ್ ಜತೆ ಮಾತನಾಡಬಹುದಾ?

ಕಚೇರಿ ಸಿಬ್ಬಂದಿ: ಇಲ್ಲ, ಸಚಿವರು ಊರಲ್ಲಿ ಇಲ್ಲ. ಹೊರಗಡೆ ಹೋಗಿದ್ದಾರೆ.

ವರದಿಗಾರ: ಹಾಗಾದರೆ ಯಾವಾಗ ಬರಬಹುದು?

ಸಿಬ್ಬಂದಿ: ಬಹುಶಃ ನಾಡಿದ್ದು ಸಿಗಬಹುದು...

ವರದಿಗಾರ: ಅವರನ್ನು ಭೇಟಿಯಾಗುವುದು ಹೇಗೆ?

ಸಿಬ್ಬಂದಿ: ಅವರ ಇ–ಮೇಲ್‌ ಬರೆದುಕೊಳ್ಳಿ. ಮೇಲ್‌ ಮಾಡಿ ಭೇಟಿಯಾಗಲು ಸಮಯ ಕೇಳಿ. ಅವರೇ ನಿಮಗೆ ಸಮಯ ನೀಡುತ್ತಾರೆ. ಇ–ಮೇಲ್‌ ವಿಳಾಸ ಬರೆದುಕೊಳ್ಳಿ...raghunath1947@yahoo.com

ವರದಿಗಾರ: ವಿಧಾನಸೌಧದಲ್ಲಿ ಭೇಟಿಯಾಗಬೇಕು ಎಂದರೆ..?

ಸಿಬ್ಬಂದಿ: ಇ–ಮೇಲ್‌ ಮಾಡಿ ಸಾಕು. ಅವರೇ ಭೇಟಿಯಾಗುವ ಸಮಯ, ಸ್ಥಳ ತಿಳಿಸುತ್ತಾರೆ.

 * * * 

ಕರೆದರೂ ಕೆಳದೆ...

ಜಯಮಾಲ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಸಚಿವರ ಕಚೇರಿ ಸಂಖ್ಯೆ 080–22255282 ಸಂಖ್ಯೆಗೆ ಹಲವಾರು ಬಾರಿ ಕರೆ ಮಾಡಿದರೂ ಅತ್ತ ಕಡೆಯಿಂದ ಯಾವುದೇ ಉತ್ತರವಿಲ್ಲ. ಅರ್ಧ ತಾಸಿಗೊಮ್ಮೆಯಂತೆ ಹತ್ತಾರು ಬಾರಿ ಕರೆ ಮಾಡಲಾಯಿತು. ದೂರವಾಣಿ ಬಡಿದುಕೊಳ್ಳುತ್ತಲೇ ಇತ್ತು. ಅದನ್ನು ಯಾರೂ ಎತ್ತಲಿಲ್ಲ.

 * * * 

ಅತ್ತಕಡೆಯಿಂದ ಉತ್ತರವಿಲ್ಲ...

ಜಿ. ಪರಮೇಶ್ವರ್‌

ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರು

ಸಚಿವರ ಕಚೇರಿ ಎರಡು ಸ್ಥಿರ ದೂರವಾಣಿ ಸಂಖ್ಯೆಗಳಿಗೆ (080–22254661 ಮತ್ತು 22251176) ಕರೆ ಮಾಡಲಾಯಿತು. ಫೋನ್‌ ರಿಂಗ್‌ ಆಯಿತಾದಾರೂ ಯಾರೂ ಉತ್ತರ ನೀಡಲಿಲ್ಲ.

 * * * 

ಅಸ್ತಿತ್ವದಲ್ಲಿ ಇಲ್ಲ..!

ಬಿ.ಜೆಡ್‌. ಜಮೀರ್‌ ಅಹ್ಮದ್

ಆಹಾರ ಮತ್ತು ನಾಗರಿಕ ಪೂರೈಕಾ ಸಚಿವ

ಜಮೀರ್‌ ಅಹ್ಮದ್‌ ಅವರ ಕಚೇರಿ ದೂರವಾಣಿ ಸಂಖ್ಯೆ 080–225 3659 ಅಸ್ತಿತ್ವದಲ್ಲಿ ಇಲ್ಲ ಎಂಬ ಉತ್ತರ ಬಂತು. ಸಚಿವರ ಎರಡು ಮೊಬೈಲ್‌ ಸಂಖ್ಯೆ (98459 11111 ಮತ್ತು 9844025075) ರಿಂಗ್‌ ಆದರೂ ಎತ್ತಿಕೊಳ್ಳಲಿಲ್ಲ. ಪದೇ ಪದೇ ಮಾಡಿದಾಗ ‘ನೀವು ಕರೆ ಮಾಡಿದ ಗ್ರಾಹಕರು ಸಂಭಾಷಣೆಯಲ್ಲಿ ನಿರತರಾಗಿದ್ದಾರೆ’ ಎಂಬ ಸಿದ್ಧ ಉತ್ತರ ಬಂತು. ಅಲ್ಲಿಂದ ಮರಳಿ ಕರೆ ಬರಲಿಲ್ಲ.

 * * *  

ಭೇಟಿಯಾಗಲು ಬೇಕು ಅಪಾಯಿಂಟ್‌ಮೆಂಟ್‌! 

ಯು.ಟಿ. ಖಾದರ್

ನಗರಾಭಿವೃದ್ಧಿ ಸಚಿವ

ವರದಿಗಾರ: ವಿಧಾನಸೌಧಕ್ಕೆ ಬಂದರೆ ಸಚಿವರು ಕಚೇರಿಯಲ್ಲಿ ಸಿಗುತ್ತಾರಾ?

ಸಿಬ್ಬಂದಿ: ಮಿನಿಸ್ಟರ್‌ ಸದ್ಯ ಇಲ್ಲ, ಇನ್ನೂ ಒಂದು ತಾಸಿನಲ್ಲಿ ಬರಬಹುದು.

ವರದಿಗಾರ: ಅವರನ್ನು ಭೇಟಿಯಾಗಬೇಕಿತ್ತಲ್ಲ...

ಸಿಬ್ಬಂದಿ: ಸಚಿವರ ಸಹಾಯಕರ ಮೊಬೈಲ್‌ ನಂಬರ್‌ ನೀಡುತ್ತೇನೆ. ಅವರನ್ನು ಸಂಪರ್ಕಿಸಿ ಭೇಟಿ ಸಮಯ ನಿಗದಿ ಮಾಡಿಕೊಳ್ಳಿ. 

ವರದಿಗಾರ: ಸಚಿವರು ಬೆಂಗಳೂರಿನಲ್ಲಿಯೇ ಇದ್ದಾರೆ ತಾನೆ?

ಸಿಬ್ಬಂದಿ: ಹೌದು. ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಇದ್ದರೆ ಆಫೀಸ್‌ಗೆ ಖಂಡಿತ ಬಂದು ಹೋಗುತ್ತಾರೆ.

 * * * 

ಕೆ.ಜೆ. ಜಾರ್ಜ್‌,
ಬೃಹತ್‌ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಚಿವ

ಸಚಿವ ಜಾರ್ಜ್‌ ಅವರ ಸಚಿವಾಲಯದ ಕಚೇರಿಯ ಸ್ಥಿರ ದೂರವಾಣಿಗೆ ಮೇಲಿಂದ ಮೇಲೆ ಕರೆ ಮಾಡಿದರೂ ಯಾರೂ ಸ್ವೀಕರಿಸಲಿಲ್ಲ. ಕೊನೆಗೆ ಸಚಿವರ ಮೊಬೈಲ್‌ಗೆ ನೇರವಾಗಿ ಕರೆ ಮಾಡಿದಾಗ ಜಾರ್ಜ್‌ ಕರೆ ಸ್ವೀಕರಿಸಿ ಮಾತನಾಡಿದರು. ಲಿಂಗರಾಜಪುರ ಸರ್ಕಾರಿ ಶಾಲೆ ಉದ್ಘಾಟನೆಗೆ ತೆರಳುತ್ತಿರುವುದಾಗಿ ಅವರು ಹೇಳಿದರು. ‘ಯಾವುದೇ ಪೂರ್ವನಿಗದಿತ ಕಾರ್ಯಕ್ರಮ, ಸಭೆ, ಸಮಾರಂಭಗಳು ಇಲ್ಲದಿದ್ದರೆ ಬೆಳಿಗ್ಗೆ ಸರಿಯಾಗಿ 10 ಅಥವಾ 10.30ಕ್ಕೆ ಕಚೇರಿಯಲ್ಲಿ ಹಾಜರಿರುತ್ತೇನೆ. ನಿರ್ದಿಷ್ಟ ಸಮಯ ಇಲ್ಲ. ಕ್ಯಾಬಿನೆಟ್‌ ಮೀಟಿಂಗ್‌, ಮುಖ್ಯಮಂತ್ರಿ ಜತೆ ಮೀಟಿಂಗ್‌ ಇದ್ದರೆ ವಿಧಾನಸೌಧಕ್ಕೆ ತೆರಳುತ್ತೇನೆ. ಇಲ್ಲದಿದ್ದರೆ ಖನಿಜ ಭವನದ ಕಚೇರಿಯಲ್ಲಿರುತ್ತೇನೆ’ ಎಂದರು. 

 * * * 

ಕೃಷ್ಣ ಬೈರೇಗೌಡ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ಕೃಷ್ಣ ಬೈರೇಗೌಡ ಅವರ ಕಚೇರಿ ದೂರವಾಣಿ ಸಂಖ್ಯೆ (080–22256093) ರಿಂಗ್‌ ಆದರೂ ಯಾರೂ ಸ್ವೀಕರಿಸಲಿಲ್ಲ. ಮತ್ತೆರೆಡು ಬಾರಿ ಕರೆ ಮಾಡಿದಾಗಲೂ  ಲೈನ್‌ ಬ್ಯುಸಿಯಾಗಿತ್ತು. ಮತ್ತೊಂದು ಸಂಖ್ಯೆ ಕೂಡ ಬ್ಯುಸಿಯಾಗಿತ್ತು. ಮೂರನೇ ಸಂಖ್ಯೆ (080–23343968) ಅಸ್ತಿತ್ವದಲ್ಲಿ ಇಲ್ಲ ಎಂಬ ಸಂದೇಶ ಬಂತು. ಮೂರು ದೂರವಾಣಿ ಸಂಖ್ಯೆಗಳು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯದ ಕಚೇರಿ ಸ್ಥಿರ ದೂರವಾಣಿ ಸಂಖ್ಯೆ ಎಂದು ವೆಬ್‌ಸೈಟ್‌ನಲ್ಲಿ ನಮೂದಾಗಿವೆ. 

ಸಚಿವರ ಕಡ್ಡಾಯ ಹಾಜರಾತಿ ನಿಯಮ ಇಲ್ಲ

ಸಚಿವರು ಬೆಳಿಗ್ಗೆ 10ಗಂಟೆಗೆ ಕಚೇರಿಯಲ್ಲಿ ಇರಲೇಬೇಕು ಎಂಬ ನಿಯಮ ಇಲ್ಲ. ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಸಚಿವರಿಗೆ ಕಚೇರಿಗೆ ಬರಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಕಚೇರಿಯಲ್ಲಿರಬೇಕು ಎಂಬ ನಿಯಮ ಅವರಿಗೆ ಅನ್ವಯಿಸುವುದಿಲ್ಲ. ಆದರೆ, ಸಚಿವಾಲಯದ ಸಿಬ್ಬಂದಿಗೆ ಇದು ಅನ್ವಯಿಸುತ್ತದೆ. ಸಚಿವಾಲಯದ ಸಿಬ್ಬಂದಿ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಕಚೇರಿಯಲ್ಲಿರುತ್ತಾರೆ. ಸಚಿವಾಲಯದಲ್ಲಿ ಸಿಬ್ಬಂದಿಯ ಹಾಜರಾತಿ ಪರೀಕ್ಷಿಸಲು ಬಯೊಮೆಟ್ರಿಕ್‌ ವ್ಯವಸ್ಥೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ವಕ್ತಾರ ಹೇಳುತ್ತಾರೆ.

‘ಸಚಿವರು ಇಲ್ಲದಿದ್ದರೂ ಕಚೇರಿಗೆ ಬಂದ ದೂರವಾಣಿ ಕರೆಗಳನ್ನು ಸ್ವೀಕರಿಸಲು ಮತ್ತು ಉತ್ತರಿಸಲು ಸಿಬ್ಬಂದಿ ಇರುತ್ತಾರೆ. ಇದು ಸಿಬ್ಬಂದಿ ಕೆಲಸ’ ಎಂದು ಹೇಳುತ್ತಾರೆ.

ಮಧ್ಯಾಹ್ನದ ನಂತರ ಸಾರ್ವಜನಿಕರಿಗೆ ಮುಕ್ತ

ಸಾರ್ವಜನಿಕರಿಗೆ ವಿಧಾನಸೌಧ ಮತ್ತು ವಿಕಾಸಸೌಧ ಬಾಗಿಲು ಮಧ್ಯಾಹ್ನ 2.45ರಿಂದ ಸಂಜೆ 5.30ರವರೆಗೆ ತೆರೆದಿರುತ್ತವೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿಯಾಗಲು ಪೂರ್ವಾನುಮತಿ ಬೇಕಾಗಿಲ್ಲ. ನೇರವಾಗಿ ಭೇಟಿಯಾಗಬಹುದು. ಭದ್ರತಾ ತಪಾಸಣೆ ನಂತರ ಪಾಸ್‌ ನೀಡಿ ಸಾರ್ವಜನಿಕರನ್ನು ಒಳ ಬಿಡಲಾಗುತ್ತದೆ. ಗೇಟ್‌ 1 ಮತ್ತು 3ರ ಮೂಲಕ ಸಾರ್ವಜನಿಕರು ವಿಧಾನಸೌಧ ಮತ್ತು ವಿಕಾಸ ಸೌಧ ಪ್ರವೇಶಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು