ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಾಹನ ದುರ್ಬಳಕೆ: ಡಿಸಿಪಿ ವಿರುದ್ಧ ಚಾಲಕನ ಆರೋ‍ಪ

Last Updated 28 ಜೂನ್ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಅಶೋಕ ಜುಂಜರವಾಡ ತಮ್ಮ ಮಕ್ಕಳ ಓಡಾಟಕ್ಕಾಗಿ ಸರ್ಕಾರಿ ವಾಹನ ಬಳಸುತ್ತಿದ್ದಾರೆ’ ಎಂದು ಡಿಸಿಪಿಯವರ ಚಾಲಕ ಪವನ್ ಆರೋಪಿಸಿದ್ದಾರೆ.

‘ರಜೆ ನೀಡದೇ ದಿನಕ್ಕೆ 15 ಗಂಟೆ ದುಡಿಸಿಕೊಳ್ಳಲಾಗುತ್ತಿದೆ’ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿ ಡಿಸಿಪಿ ಅಶೋಕ ಅವರಿಗೇ ಪತ್ರ ಬರೆದಿರುವ ಪವನ್ ಅಳಲು ತೋಡಿಕೊಂಡಿದ್ದಾರೆ. ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ನಾನೂ ಶಿಸ್ತಿನಿಂದ ಕೆಲಸ ಮಾಡುತ್ತಿದ್ದೇನೆ. ಕೆಲ ತಿಂಗಳಿನಿಂದ ವಿಧಾನಸೌಧ ಭದ್ರತಾ ವಿಭಾಗದ ನಿಮ್ಮ (ಡಿಸಿಪಿ) ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಎರಡು ಕಾರುಗಳಿದ್ದು, ಒಂದನ್ನು ಮಾತ್ರ ಕಚೇರಿ ಉಪಯೋಗಕ್ಕೆ ಬಳಸುತ್ತಿದ್ದೀರಿ. ಇನ್ನೊಂದನ್ನು ನಿಮ್ಮ ಮಕ್ಕಳನ್ನು ಶಾಲೆ, ಮಾರುಕಟ್ಟೆ ಹಾಗೂ ಇತರೆಡೆ ಕರೆದೊಯ್ಯಲು ಉಪಯೋಗಿಸುತ್ತಿದ್ದಿರಿ’ ಎಂದು ಪವನ್ ಪತ್ರದಲ್ಲಿ ಬರೆದಿದ್ದಾರೆ.

‘ನಿಮಗೆ (ಡಿಸಿಪಿ) ನಾನೂ ಸೇರಿ ಇಬ್ಬರು ಚಾಲಕರು. ಒಬ್ಬ ಚಾಲಕನನ್ನು ನಿಮ್ಮ ಮಕ್ಕಳ ಓಡಾಟದ ಕಾರಿಗೆ ನಿಯೋಜಿಸಿದ್ದೀರಿ. ನನ್ನನ್ನು ಮಾತ್ರ ಕಚೇರಿ, ರಾತ್ರಿ ಗಸ್ತು ಹಾಗೂ ಇತರೆಡೆ ಕರೆದೊಯ್ಯುತ್ತೀರಿ. ನಿತ್ಯವೂ 15 ಗಂಟೆ ಕೆಲಸ ಮಾಡಿಸಿಕೊಳ್ಳುತ್ತೀರಿ. ಇದರಿಂದ ನನ್ನ ವೈಯಕ್ತಿಕ ಜೀವನಕ್ಕೆ ಸಮಯ ನೀಡಲು ಆಗುತ್ತಿಲ್ಲ. ರಜೆ ಕೇಳಿದರೆ ಕೊಡುವುದಿಲ್ಲವೆಂದು ಮಾನಸಿಕವಾಗಿ ನೋಯಿಸುತ್ತೀರಿ’ ಎಂದು ಪವನ್ ದೂರಿದ್ದಾರೆ.

‘ಕಾನ್‌ಸ್ಟೆಬಲ್ ಆಗಿರುವ ನಾನು, ಪೊಲೀಸ್ ಇಲಾಖೆ ನಿಯಮ ಹಾಗೂ ಹುದ್ದೆಗೆ ತಕ್ಕಂತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಅನಧಿಕೃತವಾಗಿ ಕೆಲಸ ಮಾಡಲು ನನ್ನಿಂದ ಆಗುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಶೋಕಜುಂಜರವಾಡ ಲಭ್ಯರಾಗಲಿಲ್ಲ.

ಬೇರೆಡೆ ನಿಯೋಜನೆ: ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರ ಹರಿದಾಡುತ್ತಿದ್ದಂತೆ ಚಾಲಕ ಪವನ್ ಅವರನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT