ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಗುರುತಿನ ಚೀಟಿ ಸಂಗ್ರಹ: ಮಹಿಳೆ ವಿಚಾರಣೆ

Published 4 ಮೇ 2023, 21:02 IST
Last Updated 4 ಮೇ 2023, 21:02 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಮನೆಗೆ ಹೋಗಿ ಮತದಾನ ಗುರುತಿನ ಚೀಟಿ ಹಾಗೂ ಆಧಾರ್ ಸಂಗ್ರಹಿಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿದ್ದ ಭಾರತಿನಗರ ಠಾಣೆ ಪೊಲೀಸರು, ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

‘ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮಕಾನ್ ರಸ್ತೆಯಲ್ಲಿರುವ ಕೆಲ ಮನೆಗಳಿಗೆ ಹೋಗಿದ್ದ ಮಮ್ತಾಜ್ ಬೇಗಂ ಎಂಬುವವರು ಮತದಾರರ ಬಳಿಯ ಮತದಾನ ಗುರುತಿನ ಚೀಟಿ ಹಾಗೂ ಆಧಾರ್ ಸಂಗ್ರಹಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಚುನಾವಣಾಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಿತ್ತು. ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಮಹಿಳೆ ವಿರುದ್ಧ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಮ್ತಾಜ್ ಅವರ ಬಳಿ ನಾಲ್ಕು ಮತದಾನ ಗುರುತಿನ ಚೀಟಿ ಹಾಗೂ ನಾಲ್ಕು ಆಧಾರ್ ಪತ್ತೆಯಾಗಿವೆ. ಅವುಗಳನ್ನು ಜಪ್ತಿ ಮಾಡಲಾಗಿದೆ. ‘ಹಬ್ಬದ ಉಡುಗೊರೆ ನೀಡುವ ಸಲುವಾಗಿ ಗುರುತಿನ ಚೀಟಿ ಸಂಗ್ರಹಿಸುತ್ತಿದ್ದೆ’ ಎಂಬುದಾಗಿ ಮಹಿಳೆ ತಿಳಿಸಿದ್ದಾರೆ. ಅವರ ಹೇಳಿಕೆ ದಾಖಲಿಸಿಕೊಂಡು, ಬಿಟ್ಟು ಕಳುಹಿಸಲಾಗಿದೆ’ ಎಂದು ತಿಳಿಸಿದರು.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮತದಾನ ಗುರುತಿನ ಚೀಟಿ ಸಂಗ್ರಹಿಸುವುದು ಕಾನೂನು ಬಾಹಿರ. ಹೀಗಾಗಿ, ಮಹಿಳೆ ವಿರುದ್ಧ ಸದ್ಯಕ್ಕೆ ಎನ್‌ಸಿಆರ್ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನಂತೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

₹1 ಸಾವಿರ ಆಮಿಷ

‘ಮತದಾನ ಗುರುತಿನ ಚೀಟಿ ನೀಡಿದವರಿಗೆ ತಲಾ ₹ 1 ಸಾವಿರ ನೀಡುವುದಾಗಿ ಮಹಿಳೆ ಆಮಿಷವೊಡ್ಡಿರುವ ಮಾಹಿತಿ ಇದೆ. ಆದರೆ, ಮಹಿಳೆ ಬಳಿ ಯಾವುದೇ ಹಣ ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT