ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದಾಸೀನ ಬೇಡ; ತಪ್ಪದೇ ಮತದಾನ ಮಾಡಿ- ಸಾಹಿತಿ ಚಿಕ್ಕ ಹೆಜ್ಜಾಜಿ ಮಹಾದೇವ್

ಮತದಾನ ಜಾಗೃತಿ ಕವಿ ಗೋಷ್ಠಿಯಲ್ಲಿ ಚಿಕ್ಕಹೆಜ್ಜಾಜಿ ಮಹಾದೇವ್‌
Published 15 ಏಪ್ರಿಲ್ 2024, 15:43 IST
Last Updated 15 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ‘ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ. ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತ ಹಾಕುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ...’

– ಹೀಗೆಂದು ಮನವಿ ಮಾಡಿದವರು ಸಾಹಿತಿ ಚಿಕ್ಕ ಹೆಜ್ಜಾಜಿ ಮಹಾದೇವ್ ಅವರು.

ಲಗ್ಗೆರೆಯ ಮಂಜುನಾಥ ಸ್ವಾಮಿ ದೇವಸ್ಥಾನದ ಉದ್ಯಾನದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು ಸರಿಯಿಲ್ಲ’ ಅನ್ನುವುದಕ್ಕಿಂತ ನಮ್ಮ ಮತವನ್ನು ಒಳ್ಳೆಯ ಮತ್ತು ಸೂಕ್ತ ಅಭ್ಯರ್ಥಿಗೆ ಚಲಾಯಿಸಬೇಕು. ಆಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮತದಾನ ನಮ್ಮ ಹಕ್ಕು. ಅದನ್ನು ಪ್ರತಿಯೊಬ್ಬರೂ ಚಲಾಯಿಸಬೇಕು’ ಎಂದರು.

‘ಮತವನ್ನು ಹಣ ಹಾಗೂ ಆಮಿಷಗಳಿಗೆ ಮಾರಿಕೊಳ್ಳದೇ ಅದು ನನ್ನ ಕರ್ತವ್ಯವೆಂದು ಭಾವಿಸಿ, ನೀವು ಮತದಾನ ಮಾಡಿ. ಅಕ್ಕಪಕ್ಕದ ಮನೆಯವರಿಗೂ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ’ ಎಂದರು.

ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ, ‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಶೇ 54ರಷ್ಟು ಮತದಾನವಾಗುತ್ತದೆ. ಚುನಾವಣೆ ದಿನ ಏನೇ ಕೆಲಸವಿರಲಿ, ಪ್ರತಿಯೊಬ್ಬರೂ ‌ದೇಶದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಿ’ ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. 20ಕ್ಕೂ ಹೆಚ್ಚು ಕವಿಗಳು ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸಿದರು.

ಕಾದಂಬರಿಗಾರರಾದ ಮಮತಾ ವಾರನಹಳ್ಳಿ, ಸಂಸ್ಥೆಯ ಅಧ್ಯಕ್ಷ ಈ.ರವೀಶ ಹಾಗೂ ಗೀತಾ, ಭಾರತಿ ಕೋಕಲೆ, ಕಾವೇರಿ, ಲತಾ ಕುಂದರಗಿ, ಬಿ.ಎಂ. ಪ್ರಮೀಳಾ, ಚಿತ್ತು ನಾಯಕ, ಚಿ.ದೇ.ಸೌಮ್ಯ, ಕೆ.ಎಸ್.ಕಾವೇರಿ, ಪುರುಷೋತ್ತಮ್, ಮಂಜುನಾಥ ನಂದಿ, ದೇವಸ್ಥಾನದ ಟ್ರಸ್ಟಿ ನಾಗೇಂದ್ರಪ್ಪ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT