ಮಂಗಳವಾರ, ಮಾರ್ಚ್ 31, 2020
19 °C
ಅನಗತ್ಯವಾಗಿ ಓಡಾಡುತ್ತಿದ್ದ ಯುವಕರು ವಶಕ್ಕೆ l ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು l ಬೆಂಗಳೂರು ಬಿಡುವ ಅವಸರದಲ್ಲಿ ಜನರು

ನಿಷೇಧಾಜ್ಞೆ ನಡುವೆಯೂ ಓಡಾಟ, ಹಬ್ಬಕ್ಕೆ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ನಗರದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದರ ಮಧ್ಯೆಯೇ ಮಂಗಳವಾರ ಹಲವೆಡೆ ಜನರ ಓಡಾಟ ಕಂಡುಬಂತು. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿದರು. ನಗರದೊಳಗೆ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಯುಗಾದಿ ಹಬ್ಬದ ಮುನ್ನಾದಿನವಾದ ಮಂಗಳವಾರ ಹಲವರು ಬೆಳಿಗ್ಗೆಯೇ ಮಾರುಕಟ್ಟೆಗಳತ್ತ ಬಂದಿದ್ದರು. ಕೆ.ಆರ್‌.ಮಾರುಕಟ್ಟೆ ಸೇರಿ ಎಲ್ಲ ಮಾರುಕಟ್ಟೆಯಲ್ಲಿ ತಡರಾತ್ರಿಯಿಂದಲೇ ಮೊಕ್ಕಾಂ ಹೂಡಿದ್ದ ಪೊಲೀಸರು, ಎಲ್ಲ ಅಂಗಡಿಗಳನ್ನು ಮುಚ್ಚಿಸಿದ್ದರು. ಹೀಗಾಗಿ, ರಸ್ತೆ ಬದಿಯಲ್ಲೇ ಜನರು ಖರೀದಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಹಣ್ಣು, ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಸರ್ಕಾರ ವಿನಾಯಿತಿ ನೀಡಿತ್ತು. ಆದರೆ, ಪೊಲೀಸರು ಹಲವೆಡೆ ಅಂಥ ಅಂಗಡಿಗಳನ್ನು ತೆರೆಯಲೂ ಅವಕಾಶ ನೀಡಲಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಯಿತು.

ಇದೇ ಸಂದರ್ಭ ಬಳಸಿಕೊಂಡ ಕೆಲ ವ್ಯಾಪಾರಿಗಳು, ತರಕಾರಿ ಹಾಗೂ ಹಣ್ಣು ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದರು. 

‘ಹರಳೂರಿನ ಕೆಲಭಾಗಗಳಲ್ಲಿ ಸಣ್ಣ ದಿನಸಿ ಅಂಗಡಿಗಳನ್ನೂ ಪೊಲೀಸರು ಬಂದ್ ಮಾಡಿಸಿದರು. ಇದರಿಂದ ಅಗತ್ಯ ವಸ್ತು ಖರೀದಿಗೂ ತೊಂದರೆ ಆಯಿತು’ ಎಂದು ನಿವಾಸಿಯೊಬ್ಬರು ತಿಳಿಸಿದರು.

‘ಪೊಲೀಸರು ಎಲ್ಲ ದಿನಸಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಅಗತ್ಯ ವಸ್ತುಗಳಿಗೆ ರಾಜ್ಯ ಸರ್ಕಾರವೇ ವಿನಾಯಿತಿ ನೀಡಿದೆ ಎಂದು ಹೇಳಿದರೆ, ನಮ್ಮ ಮೇಲೆಯೇ ಲಾಠಿ ಬೀಸುತ್ತಿದ್ದಾರೆ’ ಎಂದು ವಿನಯ್ ಚಂದ್ರ ದೂರಿದರು.

ಇದರ ನಡುವೆಯೇ ಪೀಣ್ಯ ಠಾಣೆ ಪೊಲೀಸರು, ಮಧ್ಯಾಹ್ನ ತಮಗೆ ನೀಡಿದ್ದ ಊಟವನ್ನು ನಿರ್ಗತಿಕರ ಜೊತೆ ಹಂಚಿಕೊಂಡು ತಿಂದರು. ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ನಗರದ ಬಹುಪಾಲು ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಆದರೆ, ರಸ್ತೆಗಳಲ್ಲಿ ವಾಹನಗಳ ಓಡಾಟ ಕಡಿಮೆ ಇತ್ತು. ಅಗತ್ಯ ವಸ್ತು ಪೂರೈಕೆ ಮಾಡುವ ವಾಹನಗಳ ಚಾಲಕರಷ್ಟೇ ಬಂಕ್‌ಗೆ ಬಂದು ಹೋದರು.

ಗುಂಪು ಚದುರಿಸಲು ಲಾಠಿ: ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಐದು ಹಾಗೂ ಅದಕ್ಕಿಂತ ಹೆಚ್ಚು ಜನ ಗುಂಪು ಸೇರಿದಂತೆ ನೋಡಿಕೊಳ್ಳಲು ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ರಸ್ತೆಯಲ್ಲಿ  ಯಾರಾದರೂ ಗುಂಪು ಕಂಡರೆ ಲಾಠಿ ಬೀಸಿ ಚದುರಿಸುತ್ತಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲೂ ಮಂಗಳವಾರ ಜನ ಸೇರುವ ಸಾಧ್ಯತೆ ಇತ್ತು. ಹೀಗಾಗಿ ಬೆಳಿಗ್ಗೆಯೇ ಪೊಲೀಸರು ಮಾರುಕಟ್ಟೆಗೆ ಬಂದು ನಿಂತಿದ್ದರು. ಮಾರುಕಟ್ಟೆಗೆ ಬಂದ ಕೆಲವರನ್ನು ಅಲ್ಲಿಂದ ಚದುರಿಸಿ ಕಳುಹಿಸಿದರು. ಬೈಕ್ ಹಾಗೂ ಕಾರಿನಲ್ಲಿ ಬಂದವರಿಗೆ ಎಚ್ಚರಿಕೆ ನೀಡಿದರು.

ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿ ಖಾಲಿ ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆ ಎಳೆದೊಯ್ದರು.

ಬೆಂಗಳೂರು ಬಿಡುವ ಅವಸರ: ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಬಹುಪಾಲು ಜನ, ಮಂಗಳವಾರ ನಸುಕಿನಲ್ಲಿ ತಮ್ಮೂರಿನತ್ತ ಹೊರಟಿದ್ದು ಕಂಡುಬಂತು.

ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿ ನಗರದ ಎಲ್ಲ ರಸ್ತೆಗಳಲ್ಲೂ ಜನರು ಕಾಣ ಸಿಕ್ಕರು. ಬಸ್‌ ಸೌಕರ್ಯವಿಲ್ಲದಿದ್ದರೂ ಸಿಕ್ಕ ಸಿಕ್ಕ ವಾಹನಗಳನ್ನೇ ಏರಿ ಪ್ರಯಾಣಿಸಿದರು.

ರಾಜ್ಯದಾದ್ಯಂತ ಲಾರಿಗಳ ಸಂಚಾರವು ಬಂದ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಹಾಗೂ ಗೋದಾಮು ಬಳಿಯೇ ಲಾರಿಗಳನ್ನು ನಿಲ್ಲಿಸಲಾಗಿದೆ.

ಸದಾ ದಟ್ಟಣೆಯಿಂದ ಕೂಡಿರುತ್ತಿದ್ದ ಬಳ್ಳಾರಿ ರಸ್ತೆಯಲ್ಲೂ ವಾಹನಗಳ ಓಡಾಟ ವಿರಳವಾಗಿತ್ತು. ಕೆಲ ವಾಹನಗಳನ್ನು ತಡೆದು ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು