ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನಹಳ್ಳಿ: ‘ನೀರು ಉಳಿಸಿ’ ಜಾಗೃತಿಗಾಗಿ ವಾಕಥಾನ್

Published 10 ಮಾರ್ಚ್ 2024, 15:59 IST
Last Updated 10 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ‘ನೀರಿನ ದುರ್ಬಳಕೆ ನಿಲ್ಲಿಸಿ, ಭವಿಷ್ಯದ ಜನಾಂಗಕ್ಕಾಗಿ ಜೀವಜಲ ಉಳಿಸಿ’ ಎಂಬ ಘೋಷಣೆಯಡಿ ಬೇಗೂರಿನ ನೋಬಲ್ ರೆಸಿಡೆನ್ಸಿ ನಿವಾಸಿಗಳು ಭಾನುವಾರ ‘ವಾಕಥಾನ್’ ನಡೆಸಿದರು.

ವಿವಿಧ ಬಡಾವಣೆಗಳ ನಿವಾಸಿಗಳ ಸಂಘಗಳು ಸೇರಿ ರಚಿಸಿಕೊಂಡಿರುವ ಬ್ಯೂಟಿಫುಲ್ ಬೇಗೂರು ಒಕ್ಕೂಟದಡಿ ನೀರಿನ ಸದ್ಭಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಬೇಗೂರು ಕೊಪ್ಪ ರಸ್ತೆ ಮತ್ತು ಬೇಗೂರು ರಸ್ತೆಯಲ್ಲಿ ಮೆರವಣಿಗೆ ನಡೆಸಿದ ನಿವಾಸಿಗಳು, ಭಿತ್ತಿಪತ್ರ ಹಿಡಿದು, ಘೋಷಣೆ ಕೂಗಿದರು. ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಅಭಿಯಾನದಲ್ಲಿ ಭಾಗವಹಿಸಿದ್ದರು.

‘ಸಾವಿರಾರು ಕೆರೆಗಳಿದ್ದರೂ ಬೆಂಗಳೂರು ನಗರ ನೀರಿನ ಹಾಹಾಕಾರ ಎದುರಿಸುತ್ತಿರುವುದು ಆತಂಕದ ವಿಚಾರ. ನೀರು ಪೂರೈಕೆಗೆ ಸರ್ಕಾರವನ್ನು ಆಗ್ರಹಪಡಿಸುವ ಜತೆಗೆ, ನೀರಿನ ಮಿತ ಬಳಕೆ ಮತ್ತು ಸದ್ಭಳಕೆಯ ಬಗ್ಗೆ ನಾಗರಿಕರಾಗಿ ನಮಗೂ ಜವಾಬ್ದಾರಿ ಇದೆ. ಹೀಗಾಗಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದು ನಡಿಗೆಯಲ್ಲಿ ಪಾಲ್ಗೊಂಡವರು ಹೇಳಿದರು.

ಬ್ಯೂಟಿಫುಲ್ ಬೇಗೂರು ಒಕ್ಕೂಟದ ಮುಖ್ಯಸ್ಥ ಪ್ರಕಾಶ್ ‘ನಗರದಲ್ಲಿ ಅಂತರ್ಜಲ ಪೂರ್ತಿಯಾಗಿ ಕುಸಿದಿದ್ದರೂ, ಕೊಳವೆಬಾವಿ ಕೊರೆದು ನೀರಿನ ಕೊರತೆ ನೀಗಿಸಿಕೊಳ್ಳುವ ಸರ್ಕಾರದ ನಿರ್ಧಾರ ಕೇವಲ ಕಣ್ಣೊರೆಸುವ ತಂತ್ರವಷ್ಟೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ನೀರಿಗಾಗಿ ಜನ ಬೀದಿಗಿಳಿದು ಹೋರಾಟ ನಡೆಸಬೇಕಾಗಬಹುದು’ ಎಂದು ತಿಳಿಸಿದರು.

‘ಅಗತ್ಯವಿದ್ದಷ್ಟು ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಿದ್ದರೂ, ನೀರಿನ ಮರು ಬಳಕೆ, ಮಳೆ ನೀರು ಸಂಗ್ರಹ, ಮಿತ ಬಳಕೆ ಕುರಿತು ನಾಗರಿಕರಾದ ನಮ್ಮಲ್ಲಿಯೂ ಜಾಗೃತಿಯ ಅಗತ್ಯವಿದೆ. ನೀರಿನ ಮಹತ್ವ ಅರಿಯದೇ ನೀರನ್ನು ಪೋಲು ಮಾಡುವ ದುರಾಭ್ಯಾಸದಿಂದ ಹೊರಬರಬೇಕಿದೆ. ಇನ್ನಾದರೂ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹಾಯ್ ಕಲ್ಪ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಶಾಲಿನಿ ಹೇಳಿದರು.

‘ಬೆಂಗಳೂರಿಗೆ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಜಲಕ್ಷಾಮ  ಎದುರಾಗಿದೆ. ಬರ ಎದುರಿಸಲು ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂತೆ ಕಾಣುತ್ತಿಲ್ಲ’ ಎಂದು ಅನೂಪ್ ದೂರಿದರು.

ಹಾಯ್ ಕಲ್ಪ ಶಿಕ್ಷಣ ಸಂಸ್ಥೆ, ಕಾವೇರಿ ಆಸ್ಪತ್ರೆ ಈ ಅಭಿಯಾನಕ್ಕೆ ಕೈಜೋಡಿಸಿದವು.

ವಾಕಾಥಾನ್ ನಲ್ಲಿ ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡ ಪೋಷಕರು
ವಾಕಾಥಾನ್ ನಲ್ಲಿ ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡ ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT