ಗುರುವಾರ , ಏಪ್ರಿಲ್ 2, 2020
19 °C

ಸ್ಯಾಂಕಿ ಕೆರೆಗೆ ಹೊಸರೂಪ: ನಡಿಗೆದಾರರಿಗೆ ₹15 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಪಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಡಿಗೆದಾರರು ಮತ್ತು ಲಘು ಓಟಗಾರರ (ಜಾಗಿಂಗ್‌) ಅನುಕೂಲಕ್ಕಾಗಿ ಪ್ರತ್ಯೇಕ ಪಥ ಸೇರಿದಂತೆ ಸ್ಯಾಂಕಿ ಕೆರೆಗೆ ಹೊಸ ರೂಪ ನೀಡುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ.

₹15 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಈಗಾಗಲೇ ಪಥ ನಿರ್ಮಾಣವಾಗಿದ್ದು, ‌ಕೆರೆಯ ಏರಿ ಭಾಗದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ.

ನೀರಿನೊಳಗೆ ಗೇಬಿಯನ್ ವಿಧಾನದಲ್ಲಿ (ತಂತಿಯ ಪಂಜರಕ್ಕೆ ಕಲ್ಲಿನ ತುಂಡುಗಳ್ನು ತುಂಬಿಸುವುದು) ವಿಸ್ತರಣೆ ಮಾಡಲಾಗುತ್ತಿದೆ. ಕೆರೆಯ ನೀರನ್ನು ಖಾಲಿ ಮಾಡದೆ ಪಾದಚಾರಿ ಮಾರ್ಗ ವಿಸ್ತರಣೆ ಮಾಡಲು ಈ ವಿಧಾನ ಅನುಕೂಲವಾಗಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

1.5 ಮೀಟರ್‌ನಲ್ಲಿ ಜಾಗಿಂಗ್ ಪಥ, 6.5 ಮೀಟರ್‌ನಲ್ಲಿ ನಡಿಗೆ ಪಥ, ಉಳಿದ ಜಾಗದಲ್ಲಿ ಹೂವಿನ ಕುಂಡ ಹಾಗೂ ಚರಂಡಿ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಐದು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಜೂನ್‌ ವೇಳೆಗೆ ಎಲ್ಲಾ ಕಾಮಗಾರಿಯೂ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಜಾಗಿಂಗ್ ಮಾಡುವವರಿಂದ ನಡಿಗೆದಾರರಿಗೆ ತೊಂದರೆ ಆಗುತ್ತಿದೆ. ಒಮ್ಮೆ ದೊಡ್ಡ ಜಗಳವೂ ಆಗಿದೆ. ಹೀಗಾಗಿ, ಜಾಗಿಂಗ್‌ ಮಾಡುವವರಿಗೆ ಮತ್ತು ನಡಿಗೆದಾರರಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಹಲವು ದಿನಗಳ ಬೇಡಿಕೆ. ಅದನ್ನು ಪಾಲಿಕೆ ಪೂರೈಸುತ್ತಿರುವುದು ಸಂತಸ ತಂದಿದೆ ಎಂದು ನಡಿಗೆದಾರರು ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ಕೆರೆಯಲ್ಲಿ 400 ಮೀಟರ್ ಉದ್ದದ ಸಂಪರ್ಕ ಸೇತುವೆ, ನಡಿಗೆದಾರರ ಪಥಕ್ಕೆ ಹೊಂದಿಕೊಂಡಂತೆ ಅಲ್ಲಲ್ಲಿ ಸಣ್ಣ ಸಣ್ಣ ಕೃತಕ ಜಲಪಾತಗಳನ್ನು ನಿರ್ಮಿಸುವ ಉದ್ದೇಶವೂ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

‘ಕೆರೆ ಮುಚ್ಚುವುದು ಅಭಿವೃದ್ಧಿಯೇ’
‘ಒಂದು ಭಾಗದಲ್ಲಿ ದೇವಸ್ಥಾನ, ಮತ್ತೊಂದು ಭಾಗದಲ್ಲಿ ರಸ್ತೆ, ಅದರ ಜೊತೆಗೆ ಪಾದಚಾರಿ ಮಾರ್ಗ ನಿರ್ಮಿಸುವ ಮೂಲಕ ಕೆರೆಗಳನ್ನು ಮುಚ್ಚುವುದೇ ಅಭಿವೃದ್ಧಿಯಲ್ಲ’ ಎಂದು ಪರಿಸರ ತಜ್ಞ ಡಾ. ಅ.ನ. ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.

‘ಕೆರೆಗಳನ್ನು ಉದ್ಧಾರ ಮಾಡಲು ಹಣ ಇಲ್ಲ. ಅವುಗಳನ್ನು ನಾಶ ಮಾಡಲು ಎಷ್ಟು ಬೇಕಾದರೂ ಹಣ ಹೊಂದಿಸುತ್ತಾರೆ. ಕೆರೆಗಳನ್ನು ಮುಟ್ಟಬಾರದು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ. ಅದನ್ನು ಉಲ್ಲಂಘಿಸಿ ಕೆರೆ ಮುಚ್ಚುತ್ತಿರುವುದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು