ಬೆಂಗಳೂರು: ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಇದೇ 28ಕ್ಕೆ ‘ವಾಕಿಂಗ್ ಟೂರ್ ಆಫ್ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.
ಸಂಸ್ಥೆಯು 2019ರಲ್ಲಿ ಈ ಅಭಿಯಾನವನ್ನು ನಡೆಸಿತ್ತು. ಕೋವಿಡ್ ಕಾರಣ ಮೂರು ವರ್ಷಗಳು ನಡೆದಿರಲಿಲ್ಲ. ಈಗ ಮತ್ತೆ ಈ ಅಭಿಯಾನವನ್ನು ಸಂಸ್ಥೆ ಹಮ್ಮಿಕೊಂಡಿದ್ದು, 300 ಎಕರೆ ವಿಸ್ತೀರ್ಣ ಹೊಂದಿರುವ ಕ್ಯಾಂಪಸ್ ವಿಶೇಷಗಳ ಪರಿಚಯವನ್ನು ಆಸ್ಪತ್ರೆಯ ವೈದ್ಯರು ಮಾಡಿಸಲಿದ್ದಾರೆ.
ಮಾನಸಿಕ ರೋಗಿಗಳ ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್‌ಗಳನ್ನು ವೀಕ್ಷಿಸುವ ಜತೆಗೆ ರೋಗಿಗಳ ಜತೆಗೆ ಮಾತನಾಡಬಹುದು. ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಚಿಕಿತ್ಸಾ ವಿಭಾಗ, ಮ್ಯೂಸಿಯಂ, ಯೋಗ ಸೇರಿದಂತೆ ವಿವಿಧ ಕೇಂದ್ರಗಳ ಪರಿಚಯ ಮಾಡಿಕೊಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
‘ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಜನರನ್ನು ಮೊದಲಿನಿಂದಲೂ ದೇಶದಲ್ಲಿ ಕಳಂಕಿತರಂತೆ ನೋಡಲಾಗುತ್ತಿದೆ. ಇದಕ್ಕೆ ಅರಿವಿನ ಕೊರತೆಯೇ ಮುಖ್ಯ ಕಾರಣ. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸೀಮಿತ ಜನರಿಗೆ ಮಾತ್ರ ಅವಕಾಶ ಇರಲಿದ್ದು, ನೋಂದಣಿ ಶುಲ್ಕ ₹200 ನಿಗದಿಪಡಿಸಲಾಗಿದೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ದೂರವಾಣಿ ಸಂಪರ್ಕಕ್ಕೆ: 7902758129
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.