ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಂಗಡಿಸದಿದ್ದರೆ ₹1 ಲಕ್ಷ ದಂಡ!

ಕಸ ನಿರ್ವಹಣೆ: ಕಸ ನಿರ್ವಹಣೆ ಉಸ್ತುವಾರಿ ಸಮಿತಿ ಮುಂದೆ ಸಮಸ್ಯೆ ಹೇಳಿಕೊಂಡ ಜನ
Last Updated 2 ಜುಲೈ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರೋ ರಾತ್ರಿ ಬಂದು ಬೀದಿ ಬದಿಯಲ್ಲಿ ಕಸ ಸುರಿದು ಹೋಗುತ್ತಾರೆ, ಬಿಬಿಎಂಪಿಗೆ ದೂರು ನೀಡಿ
ದರೂಪ್ರಯೋಜನವಾಗಿಲ್ಲ, ಮನೆಯ ಮೇಲಿನ ಮಹಡಿಗಳಿಂದ ಕೆಳಗೆ ಕಸ ಎಸೆಯುತ್ತಾರೆ, ಸುಶಿಕ್ಷಿತರಿಗೇ ತಿಳಿವಳಿಕೆ ಹೇಳುವಂತಾಗಿದೆ, ಶಾಲೆ ಬಳಿ ಕಸ ಸುರಿಯಲಾಗುತ್ತಿದ್ದು, ದುರ್ವಾಸನೆ ನಡುವೆಯೇ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ಇದೆ...

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ಮೇರೆಗೆ ರಚಿಸಿರುವ ರಾಜ್ಯಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿ ಮತ್ತು ಬಿಬಿಎಂಪಿ ಪಶ್ಚಿಮ ವಲಯದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ‌ಕಸ ನಿರ್ವಹಣೆ ಪಾಲುದಾರರ ಸಭೆಯಲ್ಲಿ ಕೇಳಿ ಬಂದ ದೂರುಗಳಿವು.

ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ ಬಿ.ಅಡಿ, ಮೇಯರ್‌ ಗಂಗಾಂಬಿಕೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಎದುರು ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರು.

‘ಕಸ ವಿಂಗಡಣೆ ಮಾಡಿ ಕೊಡದವರ ಮೇಲೆ ಭಾರಿ ದಂಡ ವಿಧಿಸಬೇಕು. ಮೊದಲ ಸಲ ₹25 ಸಾವಿರ, ಎರಡನೇ ಸಲ ₹50 ಸಾವಿರ ದಂಡ ವಿಧಿಸಬೇಕು. ನಂತರವೂ, ಹಾಗೆಯೇ ಕಸ ಕೊಟ್ಟರೆ ₹1ಲಕ್ಷದವರೆಗೆ ದಂಡ ವಿಧಿಸ
ಬೇಕು’ ಎಂದು ಸುಭಾಷ್‌ ಬಿ. ಅಡಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಹಸಿ ಕಸ ಸಂಗ್ರಹ ಪ್ರತ್ಯೇಕ:‘ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸದಲ್ಲಿ ಶೇ 60ರಷ್ಟು ಹಸಿ ಮತ್ತು ಶೇ 40ರಷ್ಟು ಒಣ ಕಸವಿರುತ್ತದೆ. ಮನೆಯಲ್ಲಿಯೇ ಕಸ ವಿಂಗಡಣೆ ಸಮರ್ಪಕವಾಗಿ ನಡೆಯಬೇಕು. ಆದರೆ ಹಾಗಾಗುತ್ತಿಲ್ಲ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಸಲುವಾಗಿ ಮನೆ ಮನೆಯಿಂದ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಒಂದು ತಿಂಗಳಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

‘2016ರಲ್ಲಿ ಶೇ 53ರಷ್ಟು ಕಸ ಸಮರ್ಪಕವಾಗಿ ವಿಂಗಡಣೆಯಾಗುತ್ತಿತ್ತು. ಈಗ, ಈ ಪ್ರಮಾಣ ಶೇ 35ಕ್ಕೆ ಕುಸಿದಿದೆ. ಆಡಳಿತ ವ್ಯವಸ್ಥೆಯ ಲೋಪಗಳು ಮತ್ತು ಜನರ ಅಸಹಕಾರವೂ ಇದಕ್ಕೆ ಕಾರಣವಾಗಿರಬಹುದು.ನಗರವನ್ನು ಕಸಮುಕ್ತವನ್ನಾಗಿ ಮಾಡಬೇಕಾಗಿದೆ. ಈ ಕಾರ್ಯದಲ್ಲಿ ಜನರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.

***

ಕಸ ವಿಂಗಡಣೆ ಮಕ್ಕಳಲ್ಲಿ ಕುರಿತು ಅರಿವು ಮೂಡಿಸಲು ಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವ ಸಂಬಂಧ ಶೀಘ್ರದಲ್ಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಲಿದೆ.

- ಸುಭಾಷ್ ಬಿ.ಅಡಿ, ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT