ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಕೆಂಗೇರಿಯಲ್ಲಿ ಪ್ರತಿಭಟನೆ

Published 14 ಫೆಬ್ರುವರಿ 2024, 21:57 IST
Last Updated 14 ಫೆಬ್ರುವರಿ 2024, 21:57 IST
ಅಕ್ಷರ ಗಾತ್ರ

ಕೆಂಗೇರಿ: ನೀರಿನ ಬವಣೆಯಿಂದ ಬೇಸತ್ತ ಕೆಂಗೇರಿ-ಉಪನಗರ ಸುತ್ತಮತ್ತಲ ಮಹಿಳೆಯರು ಖಾಲಿ ಕೊಡದೊಂದಿಗೆ ಸ್ಥಳೀಯ ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಕೆಂಗೇರಿ-ಉಪನಗರ, ಶಿರ್ಕೆ, ವಳಗೇರಹಳ್ಳಿ, ರಾಜು ಲೇಔಟ್, ವಿಶ್ವೇಶ್ವರಯ್ಯ ಲೇಔಟ್, ನಾಗದೇವನಹಳ್ಳಿ, ಉಲ್ಲಾಳ ಸೇರಿದಂತೆ ಈ ಭಾಗದ ಬಹುತೇಕ ಎಲ್ಲಾ ಪ್ರದೇಶದಲ್ಲೂ 4-5 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಮಯದ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ನೀರು ಸರಬರಾಜುದಾರರು ಟ್ಯಾಂಕರ್‌ ಒಂದಕ್ಕೆ ಸುಮಾರು ₹800 ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕುಡಿಯುವ ನೀರಿಗೆ ಹಾಹಕಾರ ಎದುರಾಗಿದೆ. ಶೌಚಾಲಯಕ್ಕೆ ಹೋಗಲೂ ನೀರಿಲ್ಲದೆ ಪಡಿಪಾಟಲು ಪಡುವಂತಾಗಿದೆ’ ಎಂದು ಗೃಹಿಣಿ ಪದ್ಮಮ್ಮ ಹೇಳಿದರು.

ಬೆಂಗಳೂರು ಜಲ ಮಂಡಳಿ ಎಇಇ ದೀಪಕ್ ಮತ್ತು ಎಇ ರಾಹುಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಬಿಎಂಪಿ ಮಾಜಿ ಸದಸ್ಯ ರ.ಅಂಜನಪ್ಪ ಮಾತನಾಡಿ, ‘ಜಲಮೂಲಗಳ ಸಂರಕ್ಷಣೆಗೆ ತೋರಿದ ಉದಾಸೀನದಿಂದ ಇಂತಹ ದುರ್ಗತಿ ನಿರ್ಮಾಣವಾಗಿದೆ. ನೀರು ಸರಬರಾಜು ಮಾಡಲು ಜಲಮಂಡಳಿ ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಹಾಗೂ ಮೇಲಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಕಾವೇರಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಪ್ರಾದೇಶಿಕ ಮುಖ್ಯ ಎಂಜಿನಿಯರ್‌ ಮಹದೇವಗೌಡ ಭರವಸೆ ನೀಡಿದರು.

ಸ್ಥಳೀಯ ಮುಖಂಡ ವಿ.ವಿ.ಸತ್ಯನಾರಾಯಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಅನಿಲ್ ಚಳಗೇರಿ, ವಾರ್ಡ್ ಅಧ್ಯಕ್ಷ ಸಂತೋಷ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನವೀನ್ ಯಾದವ್, ತೇಜಸ್ವೀನಿ, ನಾಗರಾಜ್,ಕೆ.ಆರ್.ಸುಧೀರ್ದೀ, ಜೆ.ರಮೇಶ್, ತಾರ, ವಕೀಲರಾದ ಕುಬೇರ್ ಮೌರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT