ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮ | ಮಾರುಕಟ್ಟೆಗಿಲ್ಲ ಹೂವು: ಯುಗಾದಿ ಹಬ್ಬಕ್ಕೆ ಕೊರತೆ ಸಾಧ್ಯತೆ

Published 12 ಮಾರ್ಚ್ 2024, 0:22 IST
Last Updated 12 ಮಾರ್ಚ್ 2024, 0:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿದ್ದು, ನೀರಿನ ಅಭಾವದಿಂದ ಹೂವಿ ಬೆಳೆ ಒಣಗುತ್ತಿದೆ. ಇದರಿಂದಾಗಿ, ಬೆಂಗಳೂರು ಮಾರುಕಟ್ಟೆಗೆ ಬರುತ್ತಿದ್ದ ಹೂವಿನ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿದೆ.

ಕೊಳವೆ ಬಾವಿ ಹಾಗೂ ಕೆರೆ ನೀರು ನಂಬಿಕೊಂಡು ಬಹುಪಾಲು ರೈತರು ಹೂವಿನ ಬೆಳೆ ಬೆಳೆಯುತ್ತಿದ್ದಾರೆ. ಬರಗಾಲದಿಂದಾಗಿ ಕೆರೆಯಲ್ಲಿ ನೀರು ಬತ್ತಿದ್ದು, ಕೊಳವೆ ಬಾವಿಗಳಲ್ಲಿಯೂ ನೀರು ಕಡಿಮೆಯಾಗಿದೆ. ಪರಿಣಾಮವಾಗಿ ಹೂವಿನ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಇದೇ ವರ್ಷದ ಜನವರಿಯಲ್ಲಿ ಉತ್ತಮ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂವು ಬಂದಿತ್ತು. ಫೆಬ್ರುವರಿಯಿಂದ ಹೂವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೂವು ಸಿಗುವುದೇ ಕಷ್ಟವಾಗುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

ನಗರದಲ್ಲಿ ಪೂಜೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಹೂವಿನ ಬೇಡಿಕೆ ಹೆಚ್ಚಿದ್ದು, ಅದಕ್ಕೆ ತಕ್ಕಷ್ಟು ಹೂವು ಪೂರೈಸಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್‌ನಲ್ಲಿ ಯುಗಾದಿ ಹಬ್ಬವಿದ್ದು, ಈ ಸಂದರ್ಭದಲ್ಲೂ ಹೂವಿನ ಕೊರತೆ ಉಂಟಾಗಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟರು.

‘ನೀರಿನ ಕೊರತೆಯಿಂದಾಗಿ ನಿಗದಿಯಂತೆ ಹೂವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಗೆ ಬರುತ್ತಿದ್ದ ಹೂವಿನ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹೂವಿನ ಪೂರೈಕೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ದಿವಾಕರ್ ಹೇಳಿದರು.

‘ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು, ಗುಲಾಬಿ, ಸೇವಂತಿಗೆ, ಚೆಂಡು ಹೂವು, ಕಾಕಡ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಸದ್ಯ ಹೂವು ಬರುತ್ತಿಲ್ಲ. ವ್ಯಾಪಾರವೂ ಕಡಿಮೆಯಾಗಿದೆ. ಹೀಗಾಗಿ, ನಗರದಲ್ಲಿ ಹೂವು ಸಿಗುವುದು ಕಷ್ಟವಾಗಿದೆ’ ಎಂದು ಹೇಳಿದರು.

‘ಅತ್ತಿಬೆಲೆ, ಆನೇಕಲ್, ನೆಲಮಂಗಲ, ಕನಕಪುರ, ರಾಮನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಹೂವಿನ ಬೆಳೆ ಒಣಗಿರುವುದು ಗೊತ್ತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮಾತ್ರ ಹೂವಿನ ಬೆಳೆ ಚೆನ್ನಾಗಿದೆ. ಅದೇ ಹೂವು ಇದೀಗ ಕೆ.ಆರ್.ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ’ ಎಂದು ತಿಳಿಸಿದರು.

ಹೂವು ಬೆಳೆದು ನಷ್ಟ: ‘ಉತ್ತಮ ಲಾಭದ ನಿರೀಕ್ಷೆಯಿಂದ ಸೇವಂತಿಗೆ, ಚೆಂಡು ಹೂವು ಬೆಳೆಯು ತ್ತಿದ್ದೆ. ಫಸಲು ಕೈಗೆ ಸೇರುವ ದಿನ ಹತ್ತಿರವಾಗುತ್ತಿತ್ತು. ಇದೇ ಸಂದರ್ಭ ದಲ್ಲಿ ನೀರು ಇಲ್ಲದೇ ಹೂವಿನ ಬೆಳೆ ಸಂಪೂರ್ಣ ಒಣಗಿದೆ’ ಎಂದು ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರಿನ ರೈತ ದಿಲೀಪ್‌ಕುಮಾರ್ ಅಳಲು ತೋಡಿಕೊಂಡರು.

‘ಹೂವು ಬೆಳೆಯಿಂದ ನಷ್ಟ ಉಂಟಾಗಿದ್ದು, ದಿಕ್ಕು ತೋಚದಂತಾಗಿದೆ. ನನ್ನಂತೆ ಹಲವರು ಹೂವು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಸರ್ಕಾರ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇದೆ. ಆದರೆ, ಬೆಳೆಯೇ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುವ ಪ್ರಮಾಣವು ಕುಸಿದಿದೆ. ವ್ಯಾಪಾರವೂ ಇಲ್ಲ.
–ಜಿ.ಎಂ. ದಿವಾಕರ್, ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘ
ಬಿಸಿಲಿನ ಬೇಗೆ ಹೆಚ್ಚಾಗಿದೆ. ಹೀಗಾಗಿ ಫಸಲು ಕಡಿಮೆ. ಎಕರೆಗೆ 15ದಿನಗಳಿಗೆ ಒಂದೂವರೆ ಟನ್‌ ಹೂವು ಕೊಯ್ಯುತ್ತಿದ್ದೆವು. ಈಗ 500ಕೆಜಿಯೂ ಬರುತ್ತಿಲ್ಲ.
–ಕೋದಂಡರಾಮಯ್ಯ, ಗತಿಪರ ರೈತ ಸಬ್‌ಮಂಗಲ, ಆನೇಕಲ್‌ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT