ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರು ಕಾನೂನಿನ ಚೌಕಟ್ಟನ್ನು ಮೀರಿ ನಡೆಯಬಾರದು: ಹೈಕೋರ್ಟ್

Published 11 ಜೂನ್ 2024, 16:25 IST
Last Updated 11 ಜೂನ್ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವೆಲ್ಲಾ ಕೇವಲ, ಕೇವಲ ನ್ಯಾಯಾಧೀಶರು, ನ್ಯಾಯಮೂರ್ತಿಗಳು ಮಾತ್ರವೇ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು. ಕಾನೂನಿನ ಚೌಕಟ್ಟನ್ನು ಮೀರಿ ನಡೆಯಬಾರದು’ ಎಂದು ಹೈಕೋರ್ಟ್‌ ಖಡಕ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಂಗವಿಕಲ ವ್ಯಕ್ತಿಯೊಬ್ಬರಿಗೆ ನೀಡಲಾಗಿದ್ದ ಮಳಿಗೆಯ ಗುತ್ತಿಗೆ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಚನ್ನಪಟ್ಟಣ ನಗರಸಭೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಾತನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

‘ಅಂಗವಿಕಲರಿಗೆ ನೀಡಲಾದ ಗುತ್ತಿಗೆಯನ್ನು ಅವರ ನಿಧನದ ನಂತರವೂ ಆನುವಂಶಿಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ. ಹಾಗಾಗಿ, ಪತ್ನಿ ಹಾಗೂ ಮಕ್ಕಳು ಯಾವುದೇ ರೀತಿಯಲ್ಲಿ ಆನುವಂಶಿಯವಾಗಿ ಏನನ್ನೂ ಪಡೆಯಲಾಗುವುದಿಲ್ಲ’ ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ.

ಕಾನೂನು ಅಡಿಯಲ್ಲಿ 12 ವರ್ಷ ಮಾತ್ರವೇ ಗುತ್ತಿಗೆ ನವೀಕರಿಸಲು ಅವಕಾಶವಿದೆ. ಆದರೂ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು ಅದನ್ನು 20 ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಿ ಆದೇಶಿಸಿರುವುದು ಸೂಕ್ತವಲ್ಲ’ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ . ಈ ಕ್ರಮವನ್ನು ತನ್ನ ಆದೇಶದಲ್ಲಿ ತೀವ್ರವಾಗಿ ಖಂಡಿಸಿದೆ. ಅಂತೆಯೇ, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ತಳ್ಳಿ ಹಾಕಿದೆ.

ಏನಿದು ಪ್ರಕರಣ?: ‘ಹರಾಜಿನ ಮೂಲಕ ಕೆಲವು ಶಾಪಿಂಗ್ ಮಳಿಗೆಗಳನ್ನು ಗುತ್ತಿಗೆ ನೀಡಲು ರಾಜ್ಯ ಸರ್ಕಾರ 2009ರ ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಶೇ 80ರಷ್ಟು ಅಂಗವೈಕಲ್ಯ ಹೊಂದಿದ್ದ ಚನ್ನಪಟ್ಟಣದ ನಿವಾಸಿ ಸಿದ್ದರಾಮು ಅವರಿಗೆ ಒಂದು ಮಳಿಗೆಯನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಏತನ್ಮಧ್ಯೆ ಅವರು, ಗುತ್ತಿಗೆ ಅವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸಿದ್ದರಾಮು ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರ ವಾದವನ್ನು ಮನ್ನಿಸಿದ್ದ ಏಕಸದಸ್ಯ ನ್ಯಾಯಪೀಠ ಗುತ್ತಿಗೆ ಅವಧಿ ವಿಸ್ತರಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚನ್ನಪಟ್ಟಣ ನಗರಸಭೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣಾ ಹಂತದಲ್ಲಿ ಇರುವಾಗಲೇ ಸಿದ್ದರಾಮು ನಿಧನರಾಗಿದ್ದರು. ಬಳಿಕ ಅವರ ಪತ್ನಿ ವಿಚಾರಣೆ ಮುಂದುವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT