ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ದಿವಸ್‌: ಬೇರೆ ಭಾಷೆಗೆ ಗೌರವ, ಹೇರಿಕೆ ಒಪ್ಪಲ್ಲ –ಕನ್ನಡಿಗರ ಆಕ್ರೋಶ

ಟ್ವಿಟರ್‌ನಲ್ಲಿ ಟ್ರೆಂಡಿಂಗ್‌
Last Updated 14 ಸೆಪ್ಟೆಂಬರ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಸೋಮವಾರ ‘ಹಿಂದಿ ದಿವಸ್‌’ ಆಚರಿಸಿದರೆ, ಕನ್ನಡಿಗರೂ ಸೇರಿದಂತೆ ಹಿಂದಿಯೇತರ ಭಾಷಿಕರು ಸಾಮಾಜಿಕ ಮಾಧ್ಯಮಗಳಲ್ಲಿ ‘ಹಿಂದಿ ಹೇರಿಕೆ ದಿನ’ ಆಚರಿಸಿದರು.

‘#stopHindiImposition’ ಹ್ಯಾಶ್‌ಟ್ಯಾಗ್‌ ಅಡಿ ಟ್ವಿಟರ್‌ನಲ್ಲಿ ನಡೆದ ಅಭಿಯಾನ ಸೋಮವಾರ ಇಡೀ ದಿನ ಟಾಪ್‌ ಟ್ರೆಂಡಿಂಗ್‌ನಲ್ಲಿತ್ತು. ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿಯ ಪ್ರಮುಖ ಸಂಸ್ಥೆಗಳಲ್ಲಿ ಹಿಂದಿಗೆ ಮಹತ್ವ ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಚಿತ್ರಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ‘ಹಿಂದಿ ಬಳಸುವುದು ವೈಯಕ್ತಿಕ ಆಯ್ಕೆ. ಅದನ್ನು ಒತ್ತಾಯಪೂರ್ವಕವಾಗಿ ಮತ್ತೊಬ್ಬರ ಮೇಲೆ ಹೇರುವುದು ಸರಿಯಲ್ಲ’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಾತೃಭಾಷೆಯೊಂದಿಗೆ ಹಿಂದಿ ಯನ್ನೂ ಮಾತಾಡಿ’ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಹಿಂದಿಯಲ್ಲಿ ಮಾಡಿದ್ದ ಟ್ವೀಟ್‌ಗೆ
ಪ್ರತಿಕ್ರಿಯಿಸಿದ ವಿಶ್ವಾಸ್‌ ಎಂಬುವರು, ‘ದೇಶದ ಅಧಿಕೃತ 22 ಭಾಷೆಗಳಲ್ಲಿಯೂ ಹಿಂದಿಯೂ ಒಂದು. ದೇಶದ ಗೃಹಮಂತ್ರಿಯಾಗಿ ನೀವು ಏನು ಬರೆದಿದ್ದೀರೋ ನನಗೆ ತಿಳಿಯುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಹಿಂದಿ ದಿನ ಆಚರಿಸುವುದನ್ನು ಕೂಡಲೇ ನಿಲ್ಲಿಸಿ. ಭಾರತದ ಬೇರೆ ಭಾಷೆಗಳ ದಿನವನ್ನು ನೀವು ಏಕೆ ಆಚರಿಸುವುದಿಲ್ಲ’ ಎಂದು ಕೆ.ಎ. ಜಗದೀಶ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

‘ನನ್ನ ದೇಶ ಭಾರತ, ನನ್ನ ಬೇರು ಕನ್ನಡ, ಎಲ್ಲ ಭಾಷೆಯನ್ನೂ ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಭಾಷೆಯ ಹೇರಿಕೆ ಸಲ್ಲದು’ ಎಂದು ನಟ ಡಾಲಿ ಧನಂಜಯ್ ಟ್ವೀಟ್ ಮಾಡಿದರು.

‘ಭಾರತದಲ್ಲಿ ಯಾವುದೇ ರಾಷ್ಟ್ರಭಾಷೆ ಇಲ್ಲ. ಇತರೆ ಭಾರತೀಯ ಭಾಷೆಗಳಂತೆ ಅದೂ ಒಂದು’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಹಿಂದಿ ಗೊತ್ತಿಲ್ಲ ಹೋಗೋ, ನಾನು ಕನ್ನಡಿಗ’ ಎಂಬ ಸಾಲುಗಳನ್ನು ಬರೆದಿದ್ದ ಟೀ–ಶರ್ಟ್‌ಗಳನ್ನು ಧರಿಸಿಕೊಂಡಿದ್ದ
ವರು ತಮ್ಮ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.

‘ಹಿಂದಿ ಹೇರಿಕೆ ನಿಲ್ಲಿಸಿ’ ಹ್ಯಾಶ್‌ಟ್ಯಾಗ್‌ ಅಡಿ ಸೋಮವಾರ3 ಸಾವಿರಕ್ಕೂ ಹೆಚ್ಚು ಜನ, 55 ಸಾವಿರಕ್ಕೂ ಹೆಚ್ಚುಟ್ವೀಟ್‌ ಮಾಡಿದರು. ಫೇಸ್‌ಬುಕ್‌ನಲ್ಲಿಯೂ ಸಾವಿರಾರು ಜನ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ಗಳನ್ನು ಮಾಡಿದರು.

ಹಿಂದಿ ಸಾಲು ಕಿತ್ತು ಹಾಕಿದ ಕರವೇ

‘ಉತ್ತರ ಭಾರತದಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ, ಹಾಗಿದ್ದ ಮೇಲೆ, ಕರ್ನಾಟಕದಲ್ಲಿ ಹಿಂದಿಗೆ ನಾವೇಕೆ ಸ್ಥಾನ ನೀಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ನಗರದ ರೈಲು ನಿಲ್ದಾಣದ ಮುಂದೆ ‘ಕೆ.ಎಸ್‌.ಆರ್. ಬೆಂಗಳೂರು ಸ್ಟೇಷನ್‌’ ಎಂದು ಹಿಂದಿಯಲ್ಲಿ ಬರೆದಿದ್ದ ಸಾಲುಗಳನ್ನು ಕಿತ್ತು ಹಾಕಿದರು.

‘ಹಿಂದಿ ಹೇರಿಕೆಗೆ ಧಿಕ್ಕಾರ’, ‘ಕನ್ನಡ ಮೊಳಗಲಿ’, ‘ಕನ್ನಡ ಬಳಸಿದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ’ ಎಂಬ ಘೋಷಣೆಗಳನ್ನು ಕೂಗಿದರು.

ರೈಲು ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಕನ್ನಡದಲ್ಲಿ ಮಾಹಿತಿ ಇರದೇ ಇದ್ದುದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT