ಬುಧವಾರ, ಫೆಬ್ರವರಿ 19, 2020
28 °C

ದರಿದ್ರ ಸರ್ಕಾರವಲ್ಲದೆ ಮತ್ತೇನು: ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರ ನೀಡಿದ ಚೆಕ್‌ಗಳು ಬೌನ್ಸ್ ಆಗುತ್ತಿದ್ದು, ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲವಾಗಿದೆ.ಇದು ದರಿದ್ರ ಸರ್ಕಾರವಲ್ಲದೆ ಮತ್ತೇನು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಶಿಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಆರ್ಥಿಕ ವರ್ಷದ ಅಂತ್ಯಕ್ಕೆ ಕಾಲಿಟ್ಟಿದ್ದರೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂರು ಕಂತು ಹಣ ಇನ್ನೂ ಬಿಡುಗಡೆಯಾಗಿಲ್ಲ. ದುಡ್ಡಿಲ್ಲದ ದರಿದ್ರ ಸರ್ಕಾರಕ್ಕೆ ಬಿ.ಎಸ್.ಯಡಿಯೂರಪ್ಪ ಮುಖ್ಯಸ್ಥರಾಗಿದ್ದಾರೆ. ಮುಖ್ಯಮಂತ್ರಿ ಹೋದಲ್ಲೆಲ್ಲ ಬರಿ ಬುರುಡೆ ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಧಿಕಾರಿಗಳಿಗೆ ಭ್ರಷ್ಟಾಚಾರದ ಬಗ್ಗೆ ಉಪದೇಶ ಮಾಡುತ್ತಾರೆ. ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಣ ಹಂಚಿಕೆ ಮಾಡಿದ್ದಾರೆ. ಹಣ ನೀಡಿಲ್ಲ ಎನ್ನುವುದಾದರೆ ಯಡಿಯೂರಪ್ಪ ತಮ್ಮ ಎದೆಮುಟ್ಟಿಕೊಂಡು ಹೇಳಲಿ. ನಾನು ಹೇಳುತ್ತಿರುವುದು ಸುಳ್ಳು, ಮಾನಹಾನಿಕರ ಎಂದಾದರೆ ಕೋರ್ಟ್‌ನಲ್ಲಿ ಪ್ರಶ್ನಿಸಲಿ. ಅಲ್ಲಿ ಎಲ್ಲ ವಿವರಗಳನ್ನು ನೀಡುತ್ತೇನೆ’ ಎಂದು ಸವಾಲು ಹಾಕಿದರು.

ಸಚಿವರಾಗುವ ಸಲುವಾಗಿಯೇ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಇಂತಹವರನ್ನು ಕಟ್ಟಿಕೊಂಡು ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತಾರೆಯೆ? ಎಂದರು.

ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಅನಿಲ್ ಕುಮಾರ್ ಬಗ್ಗೆ ಏನೂ ಗೊತ್ತಿಲ್ಲ. ಈ ಬಗ್ಗೆ ನನ್ನ ಬಳಿ ಚರ್ಚಿಸಿಲ್ಲ. ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಪಕ್ಷದಲ್ಲೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು