ಮಂಗಳವಾರ, ಮೇ 11, 2021
20 °C

‘ವ್ಹೀಲಿಂಗ್‌ ವೇಳೆ ಸಿಕ್ಕಿಬಿದ್ದರೆ ಮುಚ್ಚಳಿಕೆ ಪಡೆದು ನಿಗಾ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಸ್ತೆಯಲ್ಲಿ ವ್ಹೀಲಿಂಗ್ ಮಾಡುವವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಜೊತೆಗೆ, ಮುಚ್ಚಳಿಕೆ ಬರೆಸಿಕೊಂಡು ಮತ್ತೊಮ್ಮೆ ವ್ಹೀಲಿಂಗ್ ಮಾಡದಂತೆ ನಿಗಾ ವಹಿಸಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

ನಗರದ ಬನಶಂಕರಿ ಸಂಚಾರ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು,  ಇದರಿಂದ ಸ್ಥಳೀಯರಲ್ಲಿ ಭಯ ಉಂಟಾಗಿದೆ’ ಎಂದು ನಿವಾಸಿಗಳು ದೂರಿದರು.

ರವಿಕಾಂತೇಗೌಡ, ‘ವ್ಹೀಲಿಂಗ್ ಮಾಡುವವರ ಮೇಲೆ ನಿರಂತರವಾಗಿ ಕಣ್ಣಿಟ್ಟು ಅಂತಹವರನ್ನು ಬಂಧಿಸಲಾಗುತ್ತಿದೆ. ಇನ್ನು ಮುಂದೆ ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಿದ್ದೇವೆ. ವ್ಹೀಲಿಂಗ್ ಮಾಡಿ ಎರಡನೇ ಬಾರಿ ಸಿಕ್ಕಿಬಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವ್ಹೀಲಿಂಗ್ ಮಾಡುವವರ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.

ನಿವಾಸಿಗಳು, ‘ಮನೆಯಲ್ಲಿ ಜಾಗವಿದ್ದರೂ ಕೆಲವರು ರಸ್ತೆ ಮೇಲೆಯೇ ವಾಹನ ನಿಲ್ಲಿಸುತ್ತಿದ್ದಾರೆ. ಕೆಲವರು, ಅಪ್ರಾಪ್ತರ ಕೈಗೆ ವಾಹನ ಕೊಟ್ಟು ಕಳುಹಿಸುತ್ತಿದ್ದಾರೆ’ ಎಂದು ದೂರಿದರು.

ರವಿಕಾಂತೇಗೌಡ, ‘ಮನೆ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ಸೂಚಿಸಲಾಗುವುದು. ಸಾರ್ವಜನಿಕರ ವಾಹನಗಳಿಗೆ ತೊಂದರೆ ಉಂಟು ಮಾಡಿದರೆ ದಂಡ ವಿಧಿಸಲಾಗುವುದು. ಅಪ್ರಾಪ್ತರಿಗೆ ವಾಹನ ಚಲಾಯಿಸಿದರೆ, ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು