ಬೆಂಗಳೂರು: ಬಹುನಿರೀಕ್ಷಿತ ವೈಟ್‌ಫೀಲ್ಡ್–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಸಂಪೂರ್ಣ ಸಜ್ಜಾಗಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಅವರಿಂದ ದಿನಾಂಕ ನಿಗದಿ ಬಾಕಿ ಇದೆ.
ಈ ಮಾರ್ಗಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ(ಸಿಆರ್‌ಎಸ್) ಎರಡು ವಾರಗಳ ಹಿಂದೆಯೇ ಹಸಿರು ನಿಶಾನೆ ದೊರೆತಿದ್ದು, ನಿಲ್ದಾಣಗಳಲ್ಲಿ ಬಾಕಿ ಇದ್ದ ಕಾಮಗಾರಿಗಳನ್ನು ಬಿಎಂಆರ್‌ಸಿಎಲ್ ಪೂರ್ಣಗೊಳಿಸಿದೆ. ಮುಖ್ಯಮಂತ್ರಿ ಕಚೇರಿಯಿಂದ ದಿನಾಂಕ ನಿಗದಿಯಾದರೆ ವೈಟ್‌ಫೀಲ್ಡ್ ಮೆಟ್ರೊ ಮಾರ್ಗ ಲೋಕಾರ್ಪಣೆಯಾಗಲಿದೆ.
‘ಕೊನೆಯ ಹಂತದ ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ದಿನಾಂಕ ನಿಗದಿ ಬಗ್ಗೆ ಸರ್ಕಾರದಿಂದ ಲಿಖಿತವಾಗಿ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಬಹುತೇಕ ಮುಂದಿನ ವಾರ ವೈಟ್‌ಫೀಲ್ಡ್ ಮಾರ್ಗ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.
ವೈಟ್‌ಫೀಲ್ಡ್ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ.
15.5 ಕಿಲೋ ಮೀಟರ್ ಉದ್ದದ ಬೈಯಪ್ಪನಹಳ್ಳಿ–ಕೆ.ಆರ್. ಪುರಂ- ವೈಟ್‌ಫೀಲ್ಡ್ ಮಾರ್ಗದಲ್ಲಿ ಕೆ.ಆರ್.ಪುರ–ವೈಟ್‌ಫೀಲ್ಡ್ ನಡುವಿನ 13.71 ಕಿಲೋ ಮೀಟರ್ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಬೈಯಪ್ಪನಹಳ್ಳಿ–ಕೆ.ಆರ್.ಪುರ ನಡುವಿನ ಮಾರ್ಗ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಲೋಕಾರ್ಪಣೆಯಾಗಲಿದೆ. ಆ ತನಕ ಈ ಎರಡು ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್‌ಗಳನ್ನು ಫೀಡರ್ ಸೇವೆಗೆ ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.