ಶನಿವಾರ, ಜುಲೈ 31, 2021
24 °C

ಸಾವಿನಲ್ಲೂ ಜೊತೆಯಾದ ವೃದ್ಧ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿ ವೃದ್ಧ ದಂಪತಿ ಒಂದೇ ದಿನ ಕೊನೆಯುಸಿರೆಳೆಯುವ ಮೂಲಕ ಸಾವಿನಲ್ಲೂ ಜತೆಯಾಗಿದ್ದಾರೆ.

ಕುರುಬರಹಳ್ಳಿಯ ಚಂದ್ರಶೇಖರ್‌ (78) ಹಾಗೂ ಸುಶೀಲಾ (65) ಮೃತರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಶೇಖರ್‌ ಹೃದಯಾಘಾತದಿಂದ ಭಾನುವಾರ ಕೊನೆಯುಸಿರೆಳೆದರು. ಗಂಡನ ಸಾವಿನ ಸುದ್ದಿ ತಿಳಿದ 20 ನಿಮಿಷಗಳಲ್ಲೇ ಪತ್ನಿಯೂ ಹೃದಯಾಘಾತದಿಂದ ತೀರಿಕೊಂಡರು.

ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡಿದ್ದ ಚಂದ್ರಶೇಖರ್‌ ಬಳಿಕ ಎಚ್‌ಎಂಟಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿಯೂ ದುಡಿದಿದ್ದರು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಸುಮನಹಳ್ಳಿಯ ಚಿತಾಗಾರದಲ್ಲಿ ದಂಪತಿಯ ಅಂತ್ಯಸಂಸ್ಕಾರ ನೆರವೇರಿತು. ಸ್ಥಳೀಯ ಪಾಲಿಕೆ ಸದಸ್ಯ ಎಂ.ಶಿವರಾಜು ಅವರು ದಂಪತಿಯ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಲು ನೆರವಾದರು.

‘ಚಂದ್ರಶೇಖರ್‌ ಹಾಗೂ ಸುಶೀಲಾ ಮಗಳ ಜೊತೆ ವಾಸವಾಗಿದ್ದರು. ಅವರಿಬ್ಬರಿಗೂ ಕೊರೋನ ಸೋಂಕಿನ ಲಕ್ಷಣಗಳು ಇರಲಿಲ್ಲ. ಹಾಗಾಗಿ ಕೋವಿಡ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಸುಮಾರು ನಾಲ್ಕು ದಶಕಗಳ ಕಾಲ ಜೊತೆಯಾಗಿ ಬಾಳಿದ್ದ ಈ ದಂಪತಿ ಜೊತೆ ಜೊತೆಯಾಗಿಯೇ ಇಹಲೋಕ ತ್ಯಜಿಸಿದರು. ಸಾರ್ಥಕ ಜೀವನ ಅವರದು’ ಎಂದು ಶಿವರಾಜು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.