ಸೋಮವಾರ, ಜನವರಿ 24, 2022
23 °C
ಶೀಲ ಶಂಕಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ

ಪತ್ನಿ ಹತ್ಯೆ: ಆಂಧ್ರದಲ್ಲಿ ಆರೋಪಿ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವು–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಆಯೀಷಾ (45) ಎಂಬುವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದ್ದು, ಕೃತ್ಯದ ಆರೋಪಿ ಎನ್ನಲಾದ ಪತಿ ನಾಸೀರ್ (54) ಸಹ ಆಂಧ್ರಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.

‘ರಾಜೇಂದ್ರನಗರ ನಿವಾಸಿ ಆಯೀಷಾ ಅವರನ್ನು ಮನೆಯಲ್ಲೇ ನ. 19ರಂದು ಕೊಲೆ ಮಾಡಲಾಗಿತ್ತು. ಸ್ಥಳದಿಂದ ಪರಾರಿಯಾಗಿದ್ದ ಪತಿ ನಾಸೀರ್, ಆಂಧ್ರಪ್ರದೇಶದ ಪೆನ್ನಗೊಂಡಕ್ಕೆ ಹೋಗಿದ್ದ. ಆತನನ್ನು ಬಂಧಿಸಲು ವಿಶೇಷ ತಂಡ ಆಂಧ್ರಕ್ಕೆ ಹೋಗಿತ್ತು. ಅಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಾಸೀರ್‌ನೇ ಆಯೀಷಾ ಅವರನ್ನು ಕೊಂದಿದ್ದ ಬಗ್ಗೆ ಪುರಾವೆಗಳು ಸಿಕ್ಕಿದ್ದವು. ಆತನನ್ನು ಬಂಧಿಸಬೇಕು ಎನ್ನುವಷ್ಟರಲ್ಲೇ ಮೃತದೇಹ ಸಿಕ್ಕಿದೆ. ಆತ, ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದೂ ಅವರು ತಿಳಿಸಿದರು.

ಶೀಲ ಶಂಕಿಸಿ ಕೊಲೆ: ‘ಪ್ರಾರ್ಥನಾ ಸ್ಥಳಗಳ ಅಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸುವ ಕೆಲಸವನ್ನು ನಾಸೀರ್ ಮಾಡುತ್ತಿದ್ದ. 25 ವರ್ಷಗಳ ಹಿಂದೆ ಆಯೀಷಾ ಅವರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರಿಗೂ ಮದುವೆಯಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಗಂಡು ಮಗ, ಪತ್ನಿ ಜೊತೆ ಪ್ರತ್ಯೇಕವಾಗಿ ವಾಸವಿದ್ದಾರೆ. ನಾಸೀರ್ ಹಾಗೂ ಆಯೀಷಾ ಮಾತ್ರ ಮನೆಯಲ್ಲಿದ್ದರು. ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ನಾಸೀರ್, ಮನೆಯಲ್ಲಿ ನಿತ್ಯವೂ ಜಗಳ ಮಾಡಲಾರಂಭಿಸಿದ್ದ. ಕೆಲ ಬಾರಿ ಹಲ್ಲೆ ಸಹ ಮಾಡಿದ್ದ. ದಿನ ಕಳೆದಂತೆ ಜಗಳ ಹೆಚ್ಚಾಗಿತ್ತು.’

‘ಪತ್ನಿಯನ್ನು ಹತ್ಯೆ ಮಾಡಬೇಕೆಂದು ತೀರ್ಮಾನಿಸಿ ಸಂಚು ರೂಪಿಸಿದ್ದ ನಾಸೀರ್, ಪೆಟ್ರೋಲ್ ಖರೀದಿಸಿ ತಂದು ಮನೆಯಲ್ಲಿ ಬಚ್ಚಿಟ್ಟಿದ್ದ. ಆಯೀಷಾ ಜೊತೆ ನ. 19ರಂದು ಜಗಳ ತೆಗೆದಿದ್ದ ಆರೋಪಿ, ಕೊಠಡಿಗೆ ಎಳೆದೊಯ್ದು ಬಾಯಿಗೆ ಬಟ್ಟೆ ಸುತ್ತಿದ್ದ. ಅವರ ಮೇಲೆ ಪೆಟ್ರೋಲ್ ಸುರಿದಿದ್ದ. ಕೊಠಡಿ ಬಾಗಿಲು ಹಾಕಿಕೊಂಡು ಹೊರಬಂದಿದ್ದ ಆರೋಪಿ, ಕಿಟಕಿ ಬಳಿ ನಿಂತು ಬೆಂಕಿಪೊಟ್ಟಣದಿಂದ ಕಡ್ಡಿ ಗೀರಿ ಬೆಂಕಿ ಹಚ್ಚಿ ಪರಾರಿಯಾಗಿದ್ದ’ ಎಂದೂ ಅವರು ತಿಳಿಸಿದರು.

‘ಆಯೀಷಾ ಅವರ ಮೈಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ನಂತರ, ಇಡೀ ಕೊಠಡಿಗೆ ಬೆಂಕಿ ಆವರಿಸಿಕೊಂಡಿತ್ತು. ಬೆಂಕಿ ಕಂಡ ಸ್ಥಳೀಯರು, ಬಾಗಿಲು ಮುರಿದು ಒಳಗೆ ಹೋಗಿ ಆಯೀಷಾ ಅವರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಯೀಷಾ ಅಸುನೀಗಿದ್ದರು. ಅವರ ಸಾವಿನ ನಂತರ ನಾಪತ್ತೆಯಾಗಿದ್ದ ನಾಸೀರ್ ಮೇಲೆಯೇ ಅನುಮಾನ ದಟ್ಟವಾಗಿತ್ತು. ಆದರೆ, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೆಲ ಪುರಾವೆಗಳ ಮೂಲಕ ಸಿಕ್ಕ ಸುಳಿವು ಆಧರಿಸಿ ಆತನಿರುವ ವಿಳಾಸ ಪತ್ತೆ ಮಾಡಲಾಗಿತ್ತು’ ಎಂದೂ ಅಧಿಕಾರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು