ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಆಧಾರ್‌ ಮಾಹಿತಿ ಕೋರಿಕೆ: ಪತ್ನಿ ವಾದ ನಿರಾಕರಣೆ

Published 28 ನವೆಂಬರ್ 2023, 22:08 IST
Last Updated 28 ನವೆಂಬರ್ 2023, 22:08 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ವಿಧಿಬದ್ಧವಾಗಿ ಮದುವೆಯಾದ ದಂಪತಿ. ಹಾಗಾಗಿ, ನನಗೆ ನನ್ನ ಪತಿಯ ಆಧಾರ್‌ ಕಾರ್ಡ್‌ ಮಾಹಿತಿ ಪಡೆಯುವ ಅಧಿಕಾರವಿದೆ‘ ಎಂಬ ಪತ್ನಿಯೊಬ್ಬರ ವಾದವನ್ನು ಒಪ್ಪಲು ಹೈಕೋರ್ಟ್‌ ನಿರಾಕರಿಸಿದೆ.

ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಯ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮತ್ತು ಉಪ ಮಹಾನಿರ್ದೇಶಕ ಹಾಗೂ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಹಾಗೂ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಮದುವೆಯ ಬಳಿಕ ಪತಿ-ಪತ್ನಿಯ ಗುರುತು ಒಂದಕ್ಕೊಂದು ಮಿಳಿತವಾಗಿರುತ್ತವೆ. ದಂಪತಿಯಲ್ಲಿ ಒಬ್ಬರು ಮತ್ತೊಬ್ಬರ ಮಾಹಿತಿ ಕೋರುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. ಮೂರನೇ ವ್ಯಕ್ತಿ ಮಾಹಿತಿ ಕೋರಿದಾಗ ಮಾತ್ರವೇ ವಿಧಿಸಲಾಗುವ ನಿರ್ಬಂಧವನ್ನು ಈ ಪ್ರಕರಣಕ್ಕೆ ಅನ್ವಯಿಸಲಾಗದು ಎಂಬ‘ ಪತ್ನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

‘ಇದು ಏಕಪಕ್ಷೀಯ ವಾದ. ಆಧಾರ್ ಸಂಖ್ಯೆ ಗೋಪ್ಯತೆಯ ಹಕ್ಕು. ಇದು ವ್ಯಕ್ತಿಯೊಬ್ಬರ ಗೋಪ್ಯತೆಯ ಹಕ್ಕಿನ ಸ್ವಾಯತ್ತತೆಯನ್ನು ಸಂರಕ್ಷಿಸುತ್ತದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿದೆ.

ಪ್ರಕರಣವೇನು?: ಪ್ರಕರಣದ ಅರ್ಜಿದಾರಳಾದ ಪತ್ನಿ 2005ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಹೆಣ್ಣು ಮಗುವಿದೆ. ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪತಿಯ ವಿರುದ್ಧ ದಾವೆ ಹೂಡಿದ್ದ ಆಕೆಗೆ ಕೌಟುಂಬಿಕ ನ್ಯಾಯಾಲಯ ₹ 10 ಸಾವಿರ ಹಾಗೂ ಹೆಣ್ಣು ಮಗುವಿಗೆ ₹ 5 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು.

‘ಪತಿ ಈ ಮೊದಲಿದ್ದ ವಿಳಾಸದಲ್ಲಿ ಇಲ್ಲ, ತಲೆ ಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಲು ಆಗಿಲ್ಲ‘ ಎಂಬ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಆಗಿರಲಿಲ್ಲ. ಹೀಗಾಗಿ, ಪತ್ನಿಯು ಆರ್‌ಟಿಐ ಕಾಯ್ದೆ ಅಡಿಯಲ್ಲಿ ಯುಐಡಿಎಐಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು 2021ರ ಫೆಬ್ರುವರಿ 25ರಂದು ತಿರಸ್ಕರಿಸಿದ್ದ ಯುಐಡಿಎಐ, ‘ಪತಿಯ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಇದನ್ನು ಆಧಾರ್ ಕಾಯ್ದೆಯ ಕಲಂ 33ರ ಅಡಿ ಹೈಕೋರ್ಟ್‌ ನಿರ್ಧರಿಸಬೇಕಾಗುತ್ತದೆ‘ ಎಂದು ತಿಳಿಸಿತ್ತು.

ಈ ಸಂಬಂಧ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದ ಹೈಕೋರ್ಟ್‌ ಪತ್ನಿಯ ಅರ್ಜಿಯನ್ನು ಪರಿಗಣಿಸುವಂತೆ ಯುಐಡಿಎಐಗೆ 2023ರ ಫೆಬ್ರವರಿ 8ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯುಐಡಿಎಐ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT