ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆ: ಹಳ್ಳಿಗಳತ್ತ ಚಿರತೆ, ಕರಡಿಗಳ ವಲಸೆ!

ಸೋಂಪುರ: ಕಾಡು ಪ್ರಾಣಿಗಳ ಉಪಟಳ, ಭೀತಿಯಲ್ಲಿ ರೈತರು
Published 19 ಅಕ್ಟೋಬರ್ 2023, 20:21 IST
Last Updated 19 ಅಕ್ಟೋಬರ್ 2023, 20:21 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಕಾಡು ಪ್ರಾಣಿಗಳ ಉಪಟಳದಿಂದ ಸೋಂಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ಭಯಬೀತರಾಗಿದ್ದಾರೆ.

ಚಿರತೆಗಳು ಆಗಾಗ ದಾಳಿ ಮಾಡಿ ಕುರಿ, ಮೇಕೆ, ಕರು, ಕೋಳಿ, ಸಾಕು ನಾಯಿಗಳನ್ನು ಹೊತ್ತೊಯ್ಯುತ್ತಿವೆ. ರಾತ್ರಿ ವೇಳೆ ಗ್ರಾಮಗಳಿಗೂ ನುಗ್ಗುತ್ತಿವೆ.

ರಾಮದೇವರ ಬೆಟ್ಟ, ಸಿದ್ದರಬೆಟ್ಟ, ಕೆಂಗಲ್ ಅರಣ್ಯ, ಶಿವಗಂಗೆ ಅರಣ್ಯಗಳ ಕಾಡಂಚಿನ ರೈತರು, ಕುರಿ, ಮೇಕೆ ಹಾಗೂ ದನಕರುಗಳನ್ನು ರಾತ್ರಿಯಾದರೆ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. 

ಆಹಾರಕ್ಕಾಗಿ ವಲಸೆ: ಮಳೆ ಕೊರತೆ, ಮನುಷ್ಯನ ದುರಾಸೆ, ಗಣಿಗಾರಿಕೆ, ಕಾಡುಗಳ ಒತ್ತುವರಿ... ಹೀಗೆ ನಾನಾ ಕಾರಣಗಳಿಂದ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಅಲ್ಲಿ ಕಾಡು ಪ್ರಾಣಿಗಳಿಗೆ ಸಿಗಬೇಕಾದ ಆಹಾರ ದೊರೆಯದ ಕಾರಣ ಹೋಬಳಿಯ ಕಾಡಿನಲ್ಲಿರುವ ಚಿರತೆ, ಕರಡಿಯಂತಹ ಪ್ರಾಣಿಗಳು ಹಳ್ಳಿಗಳತ್ತ ವಲಸೆ ಬರುತ್ತಿವೆ. ಜಾನುವಾರು ಮೇಯಿಸಲು ಮೀಸಲಾಗಿದ್ದ ಗೋಮಾಳಗಳು ಕಣ್ಮರೆ ಆಗುತ್ತಿರುವುದರಿಂದ ರೈತರು ಮೇವಿಗಾಗಿ ಕಾಡನ್ನು ಅವಲಂಬಿಸಬೇಕಾ ಗಿದೆ. ಕಾಡಿಗೆ ಹೋದ ವೇಳೆ ಪ್ರಾಣಿಗಳು ಕುರಿ ಮೇಕೆ ಎಳೆದೊಯ್ಯುತ್ತಿವೆ ಎನ್ನುತ್ತಾರೆ ರೈತರು.

ಇತ್ತೀಚೆಗಷ್ಟೇ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕರಡಿಯೊಂದು ಓಡಾಡುತ್ತಾ, ಜನರಲ್ಲಿ ಭೀತಿ ಉಂಟು ಮಾಡಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಹಿಡಿದಿದ್ದರು. ಕೆಲ ದಿನಗಳ ಹಿಂದೆ ರಾಮದೇವರ ಬೆಟ್ಟಕ್ಕೆ ಮೇಯಲು ಹೋಗಿದ್ದ ಎರಡು ಮೇಕೆಗಳನ್ನು ಚಿರತೆಯೊಂದು ಹೊತ್ತೊಯ್ದಿತ್ತು ಎಂಬ ಸುದ್ದಿಯೂ ಕೇಳಿಬಂದಿತ್ತು.

ಪ್ರಾಣಿ ಸಂಕುಲ: ಸೋಂಪುರ ಹೋಬಳಿ ದೊಡ್ಡಬಳ್ಳಾಪುರ, ತುಮಕೂರು ಹಾಗೂ ಮಾಗಡಿ ತಾಲ್ಲೂಕಿನ ಗಡಿಯ ಕಾಡು, ಬೆಟ್ಟ ಗುಡ್ಡಗಳಿಂದ ಆವೃತವಾಗಿದೆ. ಈ ಅರಣ್ಯಗಳಲ್ಲಿ ಕರಡಿ, ಚಿರತೆ, ನರಿ, ದೊಡ್ಡ ನಾಯಿ, ಗೋಸುಂಬೆ, ಕಾಡು ಬೆಕ್ಕು, ಕಾಡು ಪಾಪ ನವಿಲು, ಕೋಟಿ, ರಣಹದ್ದು ಹೆಬ್ಬಾವು ಇನ್ನಿತರ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳು ವಾಸಿಸುತ್ತಿವೆ.

ಸೋಂಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 48, 207, ರಾಜ್ಯ ಹೆದ್ದಾರಿ 3 ಹಾಗೂ ರೈಲ್ವೆ ಟ್ರಾಕ್ ಹಾದು ಹೋಗಿದೆ. ನಿರಂತರ ವಾಹನ ಓಡಾಟ ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದು ಕೂಡ ಉರುಗಳತ್ತ ಪ್ರಾಣಿಗಳು ಬರಲು ಕಾರಣ ಎನ್ನುತ್ತಾರೆ ಅರಣ್ಯ ವೀಕ್ಷಕರು.

ಬೋನಿಗೆ ಬಿದ್ದಿರುವ ಕರಡಿ (ಸಂಗ್ರಹ ಚಿತ್ರ)
ಬೋನಿಗೆ ಬಿದ್ದಿರುವ ಕರಡಿ (ಸಂಗ್ರಹ ಚಿತ್ರ)
ಕಾಡು ಪ್ರಾಣಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಕಾಡು ಪ್ರಾಣಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಬೋನಿಗೆ ಬಿದ್ದಿರುವ ಚಿರತೆ  
ಬೋನಿಗೆ ಬಿದ್ದಿರುವ ಚಿರತೆ  
ಬೋನಿಗೆ ಬಿದ್ದಿರುವ ಚಿರತೆ
ಬೋನಿಗೆ ಬಿದ್ದಿರುವ ಚಿರತೆ

ಮೂರು ಚಿರತೆ ಸೆರೆ

ಕಾಡಂಚಿನ ಗ್ರಾಮಗಳಿಗೆ ತೆರಳಿ ವನ್ಯ ಪ್ರಾಣಿಗಳ ದಾಳಿ ಅವುಗಳಿಂದ ತಮ್ಮ ದನಕರು ಮೇಕೆ ಕುರಿಗಳನ್ನು ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಸಾರ್ವಜನಿಕರಿಂದ ದೂರು ಬಂದರೆ ಬೋನ್ ಇಟ್ಟು ಅವುಗಳನ್ನು ಹಿಡಿದು ದೂರದ ಕಾಡಿಗೆ ಬಿಡಲಾಗುತ್ತಿದೆ. ಇತ್ತೀಚೆಗೆ ಮೂರು ಚಿರತೆಗಳನ್ನು ಹಿಡಿಯಲಾಗಿದೆ. - ಶ್ರೀಧರ್ ಎಸ್. ತಾಲ್ಲೂಕು ವಲಯ ಅರಣ್ಯಾಧಿಕಾರಿ ನೆಲಮಂಗಲ ತಾಲ್ಲೂಕು ಗೋಮಾಳಗಳು ಕಣ್ಮರೆ ಈಗ ಗೋಮಾಳಗಳು ಕಣ್ಮರೆಯಾಗಿದ್ದು ಅನಿವಾರ್ಯವಾಗಿ ರೈತರು ಮೇಕೆ ಕುರಿ ದನಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗಬೇಕಿದೆ. -ರುದ್ರೇಶ್ ಹೆಚ್.ಕೆ. ಸಾಮಾಜಿಕ ಕಾರ್ಯಕರ್ತ ಕಾಡು ಪ್ರಾಣಿಗಳ ವಾಸಕ್ಕೆ ತೊಂದರೆ ಹೋಬಳಿಯ ಗಡಿ ಭಾಗದಲ್ಲಿ ಗಣಿಗಾರಿಕೆ ಕ್ರಷರ್ ಘಟಕಗಳು ನಡೆಯುತ್ತಿರುವುದು ವಿಲ್ಲಾ ರೆಸಾರ್ಟ್ ನಿರ್ಮಾಣ ಆಗುತ್ತಿರುವುದು ಕಾಡು ಪ್ರಾಣಿಗಳ ಆವಾಸಕ್ಕೆ ತೊಂದರೆ ಆಗಿದೆ. ಕಾಡಿಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಸರ್ಕಾರ ಇಂಥ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.- ರಾಜೇಶ್ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT