ಬುಧವಾರ, ಮಾರ್ಚ್ 3, 2021
19 °C
ಗೂಬೆ ಕಾಣಿಸಿಕೊಂಡರೂ ಇವರೇ ಬರಬೇಕು; ಹಾವು ನುಗ್ಗಿದರೂ ರಕ್ಷಣೆಗೆ ಧಾವಿಸಬೇಕು

ವನ್ಯಜೀವಿ ಸಂರಕ್ಷಕರಿಗೆ ಸಿಕ್ಕಿಲ್ಲ ಗೌರವಧನ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮುಖ್ಯಮಂತ್ರಿ ಮನೆಯಲ್ಲಿ ಗೂಬೆ ಕಾಣಿಸಿಕೊಂಡರೆ ಸಂರಕ್ಷಣೆ ಮಾಡಲು ಇವರು ಬೇಕು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ (ಪಿಸಿಸಿಎಫ್‌) ಮನೆಗೆ ಹಾವು ನುಗ್ಗಿದರೂ ರಕ್ಷಣೆಗೆ ಧಾವಿಸುವವರೂ ಇವರೇ. ಆದರೆ, ಇವರಿಗೆ ಎರಡು ವರ್ಷಗಳಿಂದ ಗೌರವಧನವೇ ಪಾವತಿಯಾಗಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಸಂರಕ್ಷಣೆಗಾಗಿ 2008ರಲ್ಲಿ ಒಂಬತ್ತು ಮಂದಿಯ ತಂಡವನ್ನು ರಚಿಸಲಾಗಿದೆ. ಈ ತಂಡದ ಸದಸ್ಯರ ಮೊಬೈಲ್‌ ಸಂಖ್ಯೆಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗಿದೆ. ಯಾರದಾದರೂ ಮನೆಗೆ ಹಾವು ನುಗ್ಗಿದರೆ ಈ ತಂಡದ ಸದಸ್ಯರಿಗೆ ಕರೆ ಹೋಗುತ್ತದೆ. ಆಹ್ವಾನ ಬಂದಾಗ ರಾತ್ರಿ ಹಗಲೆಂದು ನೋಡದೆ ಅವುಗಳ ರಕ್ಷಣೆಗೆ ಧಾವಿಸುತ್ತಾರೆ. ಅಷ್ಟೇ ಅಲ್ಲ, ವನ್ಯಜೀವಿಗಳು, ಪಕ್ಷಿಗಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದರೆ ಅವುಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿ ಸುರಕ್ಷಿತ ಆವಾಸ ಸ್ಥಾನಗಳಿಗೆ ಬಿಟ್ಟುಬರುತ್ತಾರೆ. 

2008ರಲ್ಲಿ ಈ ತಂಡವನ್ನು ರಚಿಸಿದಾಗ ಈ ತಂಡದ ಸದಸ್ಯರನ್ನು ಗುತ್ತಿಗೆ ನೌಕರರು ಎಂದು ಪರಿಗಣಿಸಿ ಅವರಿಗೆ ತಿಂಗಳಿಗೆ ₹ 9 ಸಾವಿರ ಗೌರವಧನ ನಿಗದಿಪಡಿಸಲಾಗಿತ್ತು. 2016ರವರೆಗೆ ಅದೇ ಪ್ರಕಾರ ಪಾವತಿಯಾಗುತ್ತಿತ್ತು. 2016 ರಲ್ಲಿ ಈ ಮೊತ್ತವನ್ನು ₹ 13 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಆ ಬಳಿಕ ಇವರಿಗೆ ಗೌರವಧನವೇ ಪಾವತಿ ಆಗಿಲ್ಲ.

‘ವನ್ಯಜೀವಿ ಸಂರಕ್ಷಣೆಗಾಗಿಯೇ ಬಿಬಿಎಂಪಿ ಬಜೆಟ್‌ನಲ್ಲಿ ₹ 25 ಲಕ್ಷ ಅನುದಾನ ಕಾಯ್ದಿರಿಸಲಾಗುತ್ತದೆ. ಆದರೂ, ನಮಗೆ ಏಕೆ ಗೌರವಧನ ಪಾವತಿ ಆಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ. ಬಾಕಿ ಮೊತ್ತವನ್ನು ಇನ್ನಾದರೂ ಪಾವತಿ ಮಾಡಬೇಕು’ ಎಂದು ತಂಡದ ಸದಸ್ಯ ಎ.ಪ್ರಸನ್ನ ಕುಮಾರ್‌ ಒತ್ತಾಯಿಸಿದರು.

‘ನಾಗರ ಹಾವುಗಳಂತಹ ವಿಷಕಾರಿ ಜೀವಿಗಳನ್ನು ಹಿಡಿಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ. ನಾವು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತೇವೆ. ಹಾವುಗಳನ್ನು, ಪಶು ಪಕ್ಷಿಗಳನ್ನು ಹಿಡಿಯುವುದರ ಜೊತೆಗೆ, ಅವುಗಳ ಸಂರಕ್ಷಣೆಯ ಮಹತ್ವವನ್ನೂ ಜನರಿಗೆ ತಿಳಿ ಹೇಳುತ್ತೇವೆ. ಬಿಬಿಎಂಪಿ ನಮ್ಮ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಲಿ ಎಂಬುದು ನಮ್ಮ ಕೋರಿಕೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂರಕ್ಷಣೆ ಸಂದರ್ಭದಲ್ಲಿ ಪ್ರಾಣಿ–ಪಕ್ಷಿಗಳು ಕಚ್ಚುವ ಅಪಾಯವೂ ಇರುತ್ತದೆ. ಆಗ ರೋಗ ನಿರೋಧಕ ಚುಚ್ಚುಮದ್ದು ಪಡೆಯಬೇಕಾಗುತ್ತದೆ. ಹಾವು ಕಚ್ಚಿದರೆ ಚಿಕಿತ್ಸೆಗೆ ನಮ್ಮ ಕೈಯಿಂದಲೇ ವೆಚ್ಚ ಮಾಡಬೇಕಾದ ಸ್ಥಿತಿ ಇದೆ. ತಿಂಗಳಿಗೆ ₹ 25 ಸಾವಿರ ಸಿಕ್ಕರೆ ನಮ್ಮ ಕುಟುಂಬ ನಿರ್ವಹಣೆಗೂ ಅನುಕೂಲವಾಗುತ್ತದೆ’ ಎಂದರು.

2017ರ ಅಕ್ಟೋಬರ್‌ 24ರಂದು ರಾಷ್ಟ್ರಪತಿಯವರು ನಗರಕ್ಕ ಭೇಟಿ ನೀಡಿದ್ದರು. ಆಗ, ಎಚ್‌ಎಎಲ್‌ ವಿಮಾನ ನಿಲ್ದಾಣದ ಪ್ರದೇಶದ ಬಳಿ ಹಾವುಗಳ ಉಪಟಳ ಹೆಚ್ಚು ಇತ್ತು. ಅವುಗಳನ್ನು ಹಿಡಿಯಲು ಈ ತಂಡದ ಸದಸ್ಯರನ್ನು ಕರೆಸಿದ್ದರು.

ಈ ತಂಡದ ಸದಸ್ಯರು ವನ್ಯಜೀವಿ ಸಂರಕ್ಷಣೆಯ ಜೊತೆಗೆ ಕೇಂದ್ರ ಸರ್ಕಾರದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊದ (ಡಬ್ಲ್ಯುಸಿಸಿಬಿ) ಮಾಹಿತಿದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಇವರು ನೀಡಿದ ಮಾಹಿತಿಯ ನೆರವಿನಿಂದಲೇ ವನ್ಯಜೀವಿಗಳ ಅಕ್ರಮ ಬಳಕೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ದಾಖಲಾಗಿವೆ. 

‘ರಾಷ್ಟ್ರೀಯ ಗುಬ್ಬಚ್ಚಿ ಪ್ರಶಸ್ತಿ ಗೌರವ’

ವಿಪ್ರೊ ನೇಚರ್‌ ಫಾರ್‌ಎವರ್‌ ಸೊಸೈಟಿಯು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಸ್ವಯಂಸೇವಕರಿಗೆ ಪ್ರತಿವರ್ಷ ‘ಗುಬ್ಬಚ್ಚಿ ಪ್ರಶಸ್ತಿ’ ನೀಡುತ್ತದೆ. ಇದು ₹ 50 ಸಾವಿರ ನಗದು ಪುರಸ್ಕಾರವನ್ನೂ ಒಳಗೊಂಡಿದೆ. ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡಕ್ಕೆ 2015ನೇ ಸಾಲಿನಲ್ಲಿ ಈ ಪ್ರಶಸ್ತಿ ಲಭಿಸಿದೆ.

‘ದೇಶದ ಮಹಾನಗರಗಳ ಪೈಕಿ ವನ್ಯಜೀವಿ ಸಂರಕ್ಷಣೆಯ ಕಾರ್ಯ ತುಂಬಾ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಬೆಂಗಳೂರಿನಲ್ಲಿ. ಇದನ್ನು ಗುರುತಿಸಿಯೇ ನಮಗೆ ಗುಬ್ಬಚ್ಚಿ ಪ್ರಶಸ್ತಿ ನೀಡಲಾಗಿದೆ. ಆದರೆ, ಬಿಬಿಎಂಪಿ ಆಡಳಿತ ವರ್ಗಕ್ಕೆ ಮಾತ್ರ ನಮ್ಮ ಸಂರಕ್ಷಣಾ ಕಾರ್ಯದ ಮಹತ್ವ ಇನ್ನೂ ಅರಿವಾಗಿಲ್ಲ’ ಎಂದು ಪ್ರಸನ್ನ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಪುಟ್ಟ ಹಕ್ಕಿಯ ನೋವಿಗೆ ಮಿಡಿದ ಹೃದಯ

ಬೆಂಗಳೂರು: ಹೆಬ್ಬೆರಳಿಗಿಂತ ಸ್ವಲ್ಪ ದೊಡ್ಡ ಗಾತ್ರದ ಹಕ್ಕಿಯದು. ರಸ್ತೆ ಬದಿಯಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಈ ಪುಟ್ಟ ಹೂವಿನ ಹಕ್ಕಿಯ (ಫ್ಲವರ್‌ ಪೆಕ್ಕರ್‌) ರೋದನ ಸ್ಥಳೀಯ ವಿದ್ಯಾರ್ಥಿಯೊಬ್ಬರ ಮನ ಕಲಕಿದೆ. ಅವರ ಪ್ರಯತ್ನದಿಂದಾಗಿ ಆ ಹಕ್ಕಿಯನ್ನು ಮಂಗಳವಾರ ಸಂರಕ್ಷಣೆ ಮಾಡಲಾಯಿತು.

ಪೀಣ್ಯದ ‘ನಮ್ಮ ಮೆಟ್ರೊ’ ನಿಲ್ದಾಣದ ಸಮೀಪ ಸಿಂಗಪುರ ಚೆರ್ರಿ ಮರವೊಂದನ್ನು ಕಡಿಯಲಾಗಿದೆ. ಈ ಮರದಲ್ಲಿ ವಾಸವಿದ್ದ ಹಕ್ಕಿಯೊಂದು ರಸ್ತೆಯಲ್ಲಿ ಬಿದ್ದು ನರಳಾಡುವ ದೃಶ್ಯವನ್ನು ಕಂಡ ವಿದ್ಯಾರ್ಥಿ ಹೇಮಂತ್‌ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದ್ದರು. ಅವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಪ್ರಸನ್ನ ಕುಮಾರ್‌ ಅವರ ಮೊಬೈಲ್‌ ಸಂಖ್ಯೆಯನ್ನು ನೀಡಿದ್ದರು. ವಿದ್ಯಾರ್ಥಿಯು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಸನ್ನ, ಆ ಹಕ್ಕಿಗೆ ಪ್ರಥಮ ಚಿಕಿತ್ಸೆ ನೀಡಿದರು.

‘ನೆಲೆ ಕಳೆದುಕೊಂಡ ಹಕ್ಕಿ ಗಾಬರಿಗೊಳಗಾಗಿತ್ತು. ಈ ಜಾತಿಯ ಹಕ್ಕಿಗಳು ಹಣ್ಣುಗಳನ್ನು ಮಾತ್ರ ಸೇವಿಸುತ್ತವೆ. ಪಪ್ಪಾಯಿ ಹಣ್ಣನ್ನು ಕಿವುಚಿ, ಗ್ಲೂಕೋಸ್‌ ನೀರಿನ ಜೊತೆ ಮಿಶ್ರಮಾಡಿ ಹಕ್ಕಿಗೆ ಕುಡಿಸಿದೆವು. ಬಳಿಕ ಅದು ಚೇತರಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಶಕ್ಕೆ ಒಪ್ಪಿಸಿದ್ದೇವೆ’ ಎಂದು ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಅತಿ ಸಣ್ಣ ಹಕ್ಕಿ: ‘ವಿಶ್ವದಲ್ಲಿ ಹಮ್ಮಿಂಗ್‌ ಬರ್ಡ್‌ ಅತಿ ಸಣ್ಣ ಹಕ್ಕಿ. ಆದರೆ, ಭಾರತದಲ್ಲಿ ಕಂಡು ಬರುವ ಪಕ್ಷಿಗಳಲ್ಲಿ ಹೂವಿನ ಹಕ್ಕಿ ಅತಿ ಸಣ್ಣ ಗಾತ್ರದ್ದು. ನಗರದಲ್ಲಿ ಅವುಗಳಿಗೆ ನೆಲೆ ಒದಗಿಸುತ್ತಿದ್ದ ಮರಗಳು ಈಗ ಉಳಿದಿಲ್ಲ. ಗಸಗಸೆ ಮರಗಳಲ್ಲಿ (ಸಿಂಗಪುರ ಚೆರ್ರಿ) ಸಾಮಾನ್ಯವಾಗಿ ಇವು ಗೂಡುಕಟ್ಟುತ್ತವೆ’ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.