ಶನಿವಾರ, ಏಪ್ರಿಲ್ 1, 2023
29 °C

ದಿಢೀರ್‌ ಆದೇಶ: ಸಿಬ್ಬಂದಿ ವಿಚಾರಣೆ ನಡೆಸದೇ ಡಿಸಿಪಿ ನಿಶಾ ವರ್ಗಾವಣೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಕಚೇರಿಯ ಆಡಳಿತ ವಿಭಾಗದಲ್ಲಿ ಡಿಸಿಪಿ ಆಗಿದ್ದ ನಿಶಾ ಜೇಮ್ಸ್‌ ಅವರ ವಿರುದ್ದ ಬಹಿರಂಗಗೊಂಡಿದ್ದ ದೂರಿನ ಪತ್ರದ ವಿಚಾರದಲ್ಲಿ ಇಲಾಖೆ ಸಿಬ್ಬಂದಿ ವಿಚಾರಣೆಯನ್ನೇ ನಡೆಸದೆ ನಿಶಾ ಅವರ ವರ್ಗಾವಣೆ ಮಾಡಿರುವುದು ಪೊಲೀಸ್‌ ಇಲಾಖೆ ಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಐಪಿಎಸ್‌ ಅಧಿಕಾರಿ ನಿಶಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆಪಾದಿಸಿ, ಕಚೇರಿಯ ಶೀಘ್ರ ಲಿಪಿಗಾರರು, ಎಫ್‌ಡಿಎ, ಎಸ್‌ಡಿಎ ಹಾಗೂ ಶಾಖಾಧೀಕ್ಷಕರ ಹೆಸರಿನಲ್ಲಿ 13 ಪುಟಗಳ ಪತ್ರ ಬರೆಯಲಾಗಿತ್ತು. ಅವರ ವಿರುದ್ಧ  ವೈಯಕ್ತಿಕ ಆರೋಪ ಮಾಡಲಾಗಿತ್ತು.

ಸೆ.3ರಂದೇ ಪೊಲೀಸ್‌ ಪ್ರಧಾನ ಕಚೇರಿಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ಪತ್ರ ಬರೆದಿದ್ದರು. ಅದು ಅಕ್ಟೋಬರ್‌ 17ರಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕಚೇರಿಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಹೆಸರಿನಲ್ಲಿಯೇ ಪತ್ರ ಬರೆದಿದ್ದರೂ ಯಾವೊಬ್ಬ ಸಿಬ್ಬಂದಿಯ ವಿಚಾರಣೆ ನಡೆಸದೆ ಮರುದಿನವೇ ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಮರುಕ್ಷಣವೇ ಕಚೇರಿಯಿಂದ ಹೊರ ನಡೆದ ನಿಶಾ, ವರ್ಗಾವಣೆ ಮಾಡಿದ ಆಂತರಿಕ ಭದ್ರತಾ ವಿಭಾಗದಲ್ಲಿ (ಐಎಸ್‌ಡಿ) ಅಧಿಕಾರ ವಹಿಸಿಕೊಂಡಿದ್ದರು.

ಈ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆಯೇ ನಿಶಾ ಪರವಾಗಿ ಹಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಭಿಯಾನ ಆರಂಭಿಸಿದ್ದರು. ‘ನಿಶಾ ತಪ್ಪು ಮಾಡಿಲ್ಲ. ಆಯುಕ್ತರ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರು. ಒಂದೇ ಠಾಣೆಯಲ್ಲಿ 10ರಿಂದ 12 ವರ್ಷಗಳ ಠಿಕಾಣಿ ಹೂಡಿದ್ದವರನ್ನು ಎತ್ತಂಗಡಿ ಮಾಡಿದ್ದರು. ಪ್ರಭಾವಿ ಮಂತ್ರಿಗಳ ಶಿಫಾರಸಿಗೂ ಕಿಮ್ಮತ್ತು ನೀಡದೇ ವರ್ಗಾವಣೆ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಪತ್ರ ಬರೆಯಲಾಗಿತ್ತು’ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ಧಾರೆ.

ಪತ್ರದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಯ ಹೆಸರು, ಸಹಿ ಇತ್ತು. ಈ ಪತ್ರದಿಂದ ಮುಜುಗರಕ್ಕೆ ಒಳಗಾದ ನಿಶಾ, ಪತ್ರದಲ್ಲಿ ಹೆಸರಿದ್ದ ಕೆಲವು ಸಿಬ್ಬಂದಿಯನ್ನು ಕರೆಸಿ, ವಿಚಾರಿಸಿದ್ದರು. ಅದಕ್ಕೆ ‘ನಮ್ಮ ಹೆಸರಿನಲ್ಲಿ ಬೇರೆಯವರು ಸುಳ್ಳು ಪತ್ರ ಬರೆದಿದ್ಧಾರೆ’ ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸದೇ ದಿಢೀರ್‌ ವರ್ಗಾವಣೆ ಮಾಡಿರುವುದು ಅನುಮಾನ ಮೂಡಿಸಿದೆ.

‘ಕೇಂದ್ರ ಸರ್ಕಾರದಿಂದ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಇಲಾಖೆಗೆ ಸಾಕಷ್ಟು ಹಣ ಹರಿದುಬರುತ್ತಿದೆ. ಅಧಿಕೃತವಾಗಿ ಬಿಲ್‌ ನೀಡದಿದ್ದರೆ ನಿಶಾ ಅನುಮೋದನೆ ನೀಡುತ್ತಿರಲಿಲ್ಲ. ದಿಢೀರ್‌ ವರ್ಗಾವಣೆಯ ಹಿಂದೆ ಇದೂ ಕೆಲಸ ಮಾಡಿದೆ’ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿ ತಿಳಿಸಿದರು.

ನೆರವಿಗೆ ಕಾನ್‌ಸ್ಟೆಬಲ್‌ಗಳ ಹಿಂದೇಟು

‘ಪೊಲೀಸ್‌ ಆಯುಕ್ತರ ಕಚೇರಿ, ಡಿ.ಜಿ ಕಚೇರಿ, ವಿವಿಧ ಡಿಸಿಪಿ ಕಚೇರಿಗಳಲ್ಲಿ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಪಡೆದವರೂ ಎಫ್‌ಡಿಎ, ಎಸ್‌ಡಿಎಗಳಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ವರ್ಗಾವಣೆ ಆಗಿಲ್ಲ‘ ಎನ್ನಲಾಗಿದೆ.

‘ಒತ್ತಡದ ಕಾರಣಕ್ಕೆ ಕೆಲಸಕ್ಕೆ ನೆರವಾಗಲು ಆಯುಕ್ತರ ಕಚೇರಿಯ ಎಫ್‌ಡಿಎಗಳಿಗೆ ಒಬ್ಬೊಬ್ಬ ಕಾನ್‌ಸ್ಟೆಬಲ್‌ಗಳನ್ನು ನೇಮಿಸಲಾಗಿದೆ. ಪತ್ರ ಬಹಿರಂಗವಾದ ಮೇಲೆ ಶಾಖಾಧೀಕ್ಷಕರು, ಎಫ್‌ಡಿಎ ಹಾಗೂ ಎಸ್‌ಡಿಎ ಜೊತೆಗೆ ಕೆಲಸ ಮಾಡಲು ಕಾನ್‌ಸ್ಟೆಬಲ್‌ಗಳು ಹಿಂದೇಟು ಹಾಕುತ್ತಿದ್ದಾರೆ. ಅಸಮಾಧಾನ ಸ್ಫೋಟಗೊಂಡಿರುವ ಕಾರಣಕ್ಕೆ ಹಿರಿಯ ಅಧಿಕಾರಿಗಳು ಶುಕ್ರವಾರ ಸಭೆ ಕರೆದಿದ್ದರು. ಈ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಅನಾಮಧೇಯ ಪತ್ರಕ್ಕೆ ವಿಚಾರಣೆ ಇಲ್ಲ’

‘ಪೊಲೀಸ್‌ ಇಲಾಖೆಯಲ್ಲಿ ಅನಾಮಧೇಯ ಪತ್ರ ಬರೆಯಲಾಗುತ್ತಿದೆ. ಇಲಾಖೆ ಈ ವಿಚಾರವನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿಚಾರಣೆಯನ್ನೂ ನಡೆಸುತ್ತಿಲ್ಲ. ಪತ್ರ ಬರೆದು ಪ್ರಾಮಾಣಿಕ ಅಧಿಕಾರಿಗಳ ಕೆಲಸದ ಹುಮ್ಮಸ್ಸು ಕುಗ್ಗಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು