ಗುರುವಾರ , ಜುಲೈ 7, 2022
23 °C
ಟ್ವೀಟ್ ಮಾಡಿದ ಯುವತಿ

‘ಒಣ ಕೊಬ್ಬರಿ’ ಸೂಟ್‌ಕೇಸ್ ಜಪ್ತಿ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಣ ಕೊಬ್ಬರಿ

ಬೆಂಗಳೂರು: ‘ಒಣ ಕೊಬ್ಬರಿ’ ಬಚ್ಚಿಟ್ಟು ಸಾಗಿಸುತ್ತಿದ್ದ ಸೂಟ್‌ಕೇಸ್‌ನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಯುವತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ನಗರದ ನಿವಾಸಿಯಾದ ಯುವತಿ, ಸಂಬಂಧಿಕರ ಮದುವೆಗೆಂದು ತಾಯಿ ಜೊತೆಗೆ ದೆಹಲಿಗೆ ಹೊರಟಿದ್ದರು. ನಿಲ್ದಾಣಕ್ಕೆ ಬಂದಿದ್ದ ಅವರ ಬಳಿ ಎರಡು ಸೂಟ್‌ಕೇಸ್‌ಗಳಿದ್ದವು. ವಿಮಾನದ ಲಗೇಜು ಭಾಗದಲ್ಲಿ ಇರಿಸುವುದಕ್ಕಾಗಿ ಎರಡೂ ಸೂಟ್‌ಕೇಸ್‌ಗಳನ್ನು ಸಿಬ್ಬಂದಿಗೆ ನೀಡಿದ್ದರು. ನಂತರ, ಇಬ್ಬರೂ ಏರ್‌ ಇಂಡಿಯಾ ವಿಮಾನ ಏರಿದ್ದರು.

ಬೆಂಗಳೂರಿನಿಂದ ಹೊರಟು ದೆಹಲಿ ನಿಲ್ದಾಣ ತಲುಪಿದ್ದ ವಿಮಾನದಿಂದ ಇಳಿದ ಯುವತಿ, ಸೂಟ್‌ಕೇಸ್‌ ಪಡೆಯಲು ಹೋಗಿದ್ದರು. ಆಗ ಒಂದೇ ಸೂಟ್‌ಕೇಸ್‌ ಸಿಕ್ಕಿತ್ತು. ಇನ್ನೊಂದು ಸೂಟ್‌ಕೇಸ್ ಇರಲಿಲ್ಲ. ಆತಂಕಗೊಂಡ ಅವರು, ಏರ್ ಇಂಡಿಯಾ ವಿಮಾನಯಾನ ಕಂಪನಿ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದರು.

ಸೂಟ್‌ಕೇಸ್‌ ಬಗ್ಗೆ ಪರಿಶೀಲಿಸಿದ್ದ ವಿಮಾನಯಾನ ಅಧಿಕಾರಿಗಳು, ‘ನಿಮ್ಮ ಸೂಟ್‌ಕೇಸ್‌ನಲ್ಲಿ ಒಣ ಕೊಬ್ಬರಿ ಇತ್ತು. ಅದೇ ಕಾರಣಕ್ಕೆ, ಬೆಂಗಳೂರಿನಲ್ಲೇ ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ’ ಎಂಬುದಾಗಿ ಹೇಳಿದ್ದರು.

ಆಕ್ರೋಶ ವ್ಯಕ್ತಪಡಿಸಿದ್ದ ಯುವತಿ, ‘ಸಂಬಂಧಿಕರ ಮದುವೆಗೆಂದು ಒಳ ಕೊಬ್ಬರಿ ತರಲಾಗಿತ್ತು. ಅದರ ಜೊತೆ ನನ್ನ ಬಟ್ಟೆಗಳೂ ಇದ್ದವು. ಅದು ಹೇಗೆ ಜಪ್ತಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದ್ದರು.

ಅಧಿಕಾರಿಗಳು, ‘ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಪ್ರಯಾಣದ ವೇಳೆ ಸಾಗಿಸಬಾರದೆಂಬ ನಿಯಮವಿದೆ. ಈ ಪಟ್ಟಿಯಲ್ಲಿ ಒಣ ಕೊಬ್ಬರಿ ಸಹ ಇದೆ. ನಿಮ್ಮ ಟಿಕೆಟ್‌ ಮೇಲೆಯೂ ಅದನ್ನು ಮುದ್ರಿಸಲಾಗಿದೆ’ ಎಂದು ಉತ್ತರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಭದ್ರತಾ ಅಧಿಕಾರಿಗಳನ್ನೇ ವಿಚಾರಿಸುವಂತೆ ತಿಳಿಸಿದ್ದಾರೆ.

ಘಟನೆ ವಿವರಿಸಿ ಯುವತಿ ಟ್ವೀಟ್ ಮಾಡಿದ್ದಾರೆ. ಅದನ್ನು ಹಲವರು ಹಂಚಿಕೊಂಡಿದ್ದಾರೆ. ‘ಸೂಟ್‌ಕೇಸ್‌ ಜಪ್ತಿ ಮಾಡಿರುವುದಕ್ಕೆ ಬೆಂಗಳೂರು ಭದ್ರತಾ ಅಧಿಕಾರಿಗಳ ಉತ್ತರವೇನು’ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು