ಹೆಸರಘಟ್ಟ: ರಾಜಾನುಕುಂಟೆ ಬಳಿ ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಅಂಗಾತ ಮಲಗಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಘಟನೆ ನಡೆದಿದ್ದು ಅದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ರಾಜಾನುಕುಂಟೆ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ನಿಂತಿದ್ದರಿಂದ ಮಹಿಳೆ ರೈಲಿನ ಅಡಿಯಲ್ಲೇ ನುಗ್ಗಿ ಆ ಬದಿಗೆ ತೆರಳುತ್ತಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಲಾರಂಭಿಸಿದೆ. ವಿಚಲಿತರಾಗದ ಮಹಿಳೆ, ರೈಲಿನ ಅಡಿಯಲ್ಲಿ ಅಂಗಾತ ಮಲಗಿದ್ದಾರೆ. ರೈಲು ಸಾಗಿ ಹೋದ ನಂತರ ಎದ್ದು ಬಂದಿದ್ದಾರೆ.
ತಿಮ್ಮಸಂದ್ರ, ಅದ್ದಿಗಾನಹಳ್ಳಿ, ತರಹುಣಸೆ, ಬೆಟ್ಟಲಸೂರು, ಬೆಟ್ಟಹಳ್ಳಿ ಹಾಗೂ ವಿಮಾನ ನಿಲ್ದಾಣದ ಮೂಲಕ ಬೇರೆ ರಾಜ್ಯಗಳಿಂದ ಕೆಲಸ ಅರಸಿ ಬರುವಂತಹ ಕೂಲಿ ಕಾರ್ಮಿಕರು ದಿನನಿತ್ಯ ರಾಜನಕುಂಟೆ ತಲುಪಲು ಈ ರೈಲು ಹಳಿಯನ್ನು ದಾಟಿ ಸಾಗಬೇಕಾಗಿದೆ.
‘ಪಕ್ಕದಲ್ಲಿಯೇ ಜನರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ, ಸ್ಕೈವಾಕ್ ನಿರ್ಮಾಣ ಮಾಡಿದ್ದರೂ ಸಹ ಕೆಲವರು ಸ್ಕೈವಾಕ್ ಉಪಯೋಗಿಸದೇ ಸಮಯ ಉಳಿಸಲು ಅವಸರವಾಗಿ ರೈಲು ಹಳಿ ದಾಟಲು, ನಿಂತಿರುವ ಸರಕು ಸಾಗಣೆ ರೈಲುಗಳ ಮಧ್ಯೆ ಹಳಿ ದಾಟಿ ಸಾಗುವಂತಹ ದುಸ್ಸಾಹಸಕ್ಕೆ ಮುಂದಾಗುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಸಾರ್ವಜನಿಕರು, ರೈಲ್ವೆ ಇಲಾಖೆ ನಿರ್ಮಿಸಿರುವಂತಹ ಸ್ಕೈವಾಕ್ ಬಳಕೆ ಮಾಡದೇ ಬೇಜವಾಬ್ದಾರಿಯಿಂದ ಗೂಡ್ಸ್ ರೈಲುಗಳ ಅಡಿ ನುಗ್ಗಿ ರಸ್ತೆ ದಾಟುವುದು ಇಲ್ಲಿ ಸಾಮಾನ್ಯವಾಗಿದೆ. ಇದರಿಂದ ಅವರ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಜನರಿಗೆ ಅರಿವು ಮೂಡಿಸಲು ರೈಲ್ವೆ ಇಲಾಖೆ ಹಲವು ಫಲಕಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ’ ಎಂದು ಅದ್ದಿಗಾನಹಳ್ಳಿ ನಿವಾಸಿ ಅಂಬುಜ ಹೇಳಿದರು.
ಕೆಳಸೇತುವೆ ಕಾಮಗಾರಿಯು ಮಂಜೂರಾಗಿದ್ದು, ಜರೂರಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರು ಮುಕ್ತವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿ ಸವಿತಾ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.