ಶುಕ್ರವಾರ, ಡಿಸೆಂಬರ್ 6, 2019
19 °C

ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸದ ಆಮಿಷವೊಡ್ಡಿ ಮಹಿಳೆಯರನ್ನು ವಿದೇಶಕ್ಕೆ ಕಳುಹಿಸಿ ಚಿತ್ರಹಿಂಸೆ ಅನುಭವಿಸುವಂತೆ ಮಾಡಿರುವ ಆರೋಪಿ ಸೈಯದ್ ಖಾದರ್ ಎಂಬಾತನನ್ನು, ಮಹಿಳೆಯರ ಸಂಬಂಧಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ತಮಿಳುನಾಡಿನ ಸೈಯದ್ ಖಾದರ್‌, ಇಬ್ಬರು ಮಹಿಳೆಯರನ್ನು ಕುವೈತ್‌ಗೆ ಇತ್ತೀಚೆಗಷ್ಟೇ ಕಳುಹಿಸಿದ್ದ. ಅವರಿಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿರುವ ವ್ಯಕ್ತಿಗಳು ನಿತ್ಯವೂ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಗೊತ್ತಾಗಿದೆ. ನೊಂದ ಮಹಿಳೆಯರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸಂಬಂಧಿಕರೇ ಸೈಯದ್‌ನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ದೂರು ಸಹ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಏಜೆಂಟ್ ಆಗಿರುವ ಆರೋಪಿ, ಹೊರದೇಶಗಳಲ್ಲಿರುವ ಕೆಲವು ಏಜೆನ್ಸಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾನೆ. ನಗರದಲ್ಲಿರುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರಿಗೆಲ್ಲ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಆರೋಪಿ ಆಮಿಷ ಒಡ್ಡುತ್ತಿರುವುದಾಗಿ ಸಂಬಂಧಿಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ಆರೋಪಿಯ ಮಾತು ನಂಬಿ ಹಲವು ಮಹಿಳೆಯರು ವಿದೇಶಕ್ಕೆ ಹೋಗಿರುವ ಅನುಮಾನವಿದೆ. ಇದೊಂದು ಮಾನವ ಕಳ್ಳ ಸಾಗಣೆ ಜಾಲವಾಗಿರುವ ಶಂಕೆಯೂ ಇರುವುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸಿದ (ಐಪಿಸಿ 370) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು